ಬೆಂಗಳೂರು: ಮಿಂಟೋ ಆಸ್ಪತ್ರೆಯ ವೈದ್ಯರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ ಕರವೇ ಕಾರ್ಯಕರ್ತರಿಗೆ ಜಾಮೀನು ಮಂಜೂರು ಆಗಿದೆ.
24ನೇ ಎಸಿಎಂಎಂ ಕೋರ್ಟ್ ನ್ಯಾ. ಬಾಲಗೋಪಾಲಕೃಷ್ಣ ತಲಾ 50 ಸಾವಿರ ಬಾಂಡ್, 3 ಸಾವಿರ ನಗದು ಪತ್ರ ಪಡೆದು ಜಾಮೀನು ಮಂಜೂರು ಮಾಡಿದರು. ಇದನ್ನೂ ಓದಿ:ಪೊಲೀಸರಿಗೆ ಶರಣಾದ ನಟಿ – ಕರವೇ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಗೌಡ ಯಾರು?
ಏನಿದು ಪ್ರಕರಣ?
ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆಗೆ ಒಳಗಾಗಿ ಕೆಲವರು ದೃಷ್ಟಿ ಕಳೆದುಕೊಂಡಿದ್ದರು. ಇದನ್ನು ಪ್ರಶ್ನಿಸಲು ಅಶ್ವಿನಿ ಗೌಡ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಆಸ್ಪತ್ರೆಗೆ ತೆರಳಿದ್ದರು. ಆಗ ಕರವೇ ಕಾರ್ಯಕರ್ತರು ವೈದ್ಯರ ವಾಗ್ವಾದ ಇಂಗ್ಲಿಷ್, ಕನ್ನಡ ಹೋರಾಟದ ರೂಪ ಪಡೆದಿತ್ತು. ಅಲ್ಲದೆ ಕರವೇ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಮಿಂಟೋ ಆಸ್ಪತ್ರೆ ಸಿಬ್ಬಂದಿ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದರು. ಇಂದು ಕರವೇ ಕಾರ್ಯಕರ್ತರು ಶರಣಾಗಿದ್ದು ವಿವಿ ಪುರಂ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದರು.
ಈ ವಿಚಾರವಾಗಿ ಇಂದು ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಯ ಒಪಿಡಿಗಳನ್ನು ಬಂದ್ ಮಾಡಿ ವೈದ್ಯರು ಹೋರಾಟ ಮಾಡುತ್ತಿದ್ದಾರೆ. ಇದರಿಂದ ಕರವೇ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ತಡರಾತ್ರಿ ಸಭೆ ನಡೆಸಿ ಅಶ್ವಿನಿ ಗೌಡ ಸೇರಿದಂತೆ 12 ಜನ ಕಾರ್ಯಕರ್ತರು ಇಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರು ದಕ್ಷಿಣ ಡಿಸಿಪಿ ಕಚೇರಿಯಲ್ಲಿ ಪೊಲೀಸರಿಗೆ ಶರಣಾಗುವ ಬಗ್ಗೆ ತೀರ್ಮಾನ ಮಾಡಿದ್ದರು.
ಅದರಂತೆ ಇಂದು ಬೆಳಗ್ಗೆ ವಿವಿಪುರಂ ಪೊಲೀಸ್ ಠಾಣೆಗೆ ಬಂದ ಅಶ್ವಿನಿ ಗೌಡ ಮಧುಸೂದನ್ ಯಾದವ್, ಮನು, ಗಾಯಿತ್ರಿ, ಸಂಗೀತಾ ಶೆಟ್ಟಿ ಸೇರಿದಂತೆ 12 ಕಾರ್ಯಕರ್ತರು ಶರಣಾಗಿದ್ದಾರೆ. ಈ ಬಗ್ಗೆ ಬೆಳಗ್ಗೆ ಮಾತನಾಡಿದ್ದ ನಾರಾಯಣಗೌಡ ಹಾಗೂ ಹಲ್ಲೆ ಆರೋಪಿ ಅಶ್ವಿನಿಗೌಡ, ವೈದ್ಯರಿಗೆ ಹೆದರಿ ಈ ತೀರ್ಮಾನ ತೆಗೆದುಕೊಂಡಿಲ್ಲ. ಜನರಿಗೆ ತೊಂದರೆಯಾಗಬಾರದೆಂದು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು.