ಮಂಗಳೂರು: ಉಡುಪಿ-ಕಾಸರಗೋಡು 440 ಕೆ.ವಿ. ವಿದ್ಯುತ್ ಲೈನ್ ಕಾಮಗಾರಿಯ ಸಂದರ್ಭದಲ್ಲಿ ರೈತರ ಕೃಷಿ ನಾಶ ಮಾಡಿದ್ದಲ್ಲದೆ ಪೊಲೀಸ್ ಬಲವನ್ನು ಬಳಸಿಕೊಂಡು ರೈತರ ಮೇಲೆ ದೌರ್ಜನ್ಯವೆಸಗಿದ ಸ್ಟೆರ್ ಲೈಟ್ ವಿದ್ಯುತ್ ಕಂಪನಿ ವಿರುದ್ಧ ಬೃಹತ್ ಸಂಖ್ಯೆಯಲ್ಲಿ ಸೇರಿದ ರೈತರು ಶನಿವಾರ ಕಂಪನಿ ವಿರುದ್ಧ ಪ್ರತಿಭಟನಾ ಜಾಥಾ, ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಕ್ರೋಶಭರಿತ ರೈತರು ಅಶ್ವತ್ಥಪುರ ಸೀತಾರಾಮ ದೇವಸ್ಥಾನದ ಬಳಿ ಬೃಹತ್ ಸಂಖ್ಯೆಯಲ್ಲಿ ಜಮಾವಣೆಗೊಂಡು ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಒಂಟಿಮಾರ್ ಪ್ರದೇಶದ ಬೆಳೆ ಹಾನಿಗೆ ಒಳಗಾದ ರೈತ ಭಾಸ್ಕರ ಶೆಟ್ಟಿ ಅವರ ಜಮೀನಿನವರೆಗೂ ಜಾಥಾ ನಡೆಸಿದರು. ಬಳಿಕ ಅವರ ನಿವಾಸದಲ್ಲಿ ಸಭೆ ನಡೆಸಿ ಆಕ್ರೋಶ ಹೊರಹಾಕಿದರು.
ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಕೇಮಾರು ಸಾಂದೀಪನಿ ಮಠದ ಈಶ ವಿಠಲದಾಸ ಸ್ವಾಮೀಜಿ, ಅವಿಭಜಿತ ದ.ಕ – ಉಡುಪಿ ಜಿಲ್ಲೆಯಲ್ಲಿ ಆರಂಭವಾಗುವ ಜನವಿರೋಧಿ, ರೈತ ವಿರೋಧಿ ಕಂಪನಿಗಳ ವಿರುದ್ಧ ಹೋರಾಟಗಳು ಫ್ರಾಥಮಿಕ ಹಂತದಲ್ಲಿ ಆರಂಭವಾಗುತ್ತದೆ. ಹೋರಾಟಗಳನ್ನು ಹತ್ತಿಕ್ಕಲು ಕಂಪನಿ ಹೋರಾಟದ ಮುಂಚೂಣಿಯಲ್ಲಿರುವ ನಾಯಕರನ್ನು ಹಣ, ಭೂಮಿ ಇಂತಹ ಆಮಿಷಗಳನ್ನು ಒಡ್ಡಿ ಬದಿಗೆ ಸರಿಸುತ್ತದೆ. ಹಾಗಾಗಿ ಹೋರಾಟಗಳು ಕೊನೆಯಾಗುವುದಿಲ್ಲ. ಹಾಗಾಗಿಯೇ ಸರ್ಕಾರಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಕಸದ ಬುಟ್ಟಿಯಂತೆ ಭಾವಿಸಿ ಇಲ್ಲಿನ ಜನರಿಗೆ ಅಗತ್ಯವೇ ಇಲ್ಲದ ಕಾರ್ಖಾನೆಗಳನ್ನು ಇಲ್ಲಿಗೆ ತಂದು ಹಾಕಿ ಜನರ ನೆಮ್ಮದಿ ಹಾಳು ಮಾಡುತ್ತಿದೆ. ಇದು ನಮ್ಮ ದುರಾದೃಷ್ಟ ಎಂದು ಕಿಡಿಕಾರಿದರು.
ಇತ್ತೀಚಿನ ದಿನಗಳಲ್ಲಿ ಕೋಟಿ ವಿದ್ಯೆಗಿಂತ ಲೂಟಿ ವಿದ್ಯೆಯೇ ಮೇಲು ಎಂಬಂತಾಗಿದೆ. ರೈತರಿಗೆ ಅನ್ಯಾಯವಾಗುತ್ತಿದೆ. ರೈತನ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಕೃಷಿ ಅಭಿವೃದ್ಧಿಯಾದರೆ ಮಾತ್ರ ಮನುಷ್ಯ, ಪಾಣಿ-ಪಕ್ಷಿ ಸಂಕುಲಗಳೂ ಅಭಿವೃದ್ಧಿಯಾಗುತ್ತವೆ. ಕೃಷಿ ನಾಶವಾದರೆ ಮನುಕುಲದ ಜೊತೆಗೆ ಸಂಬಂಧ ಹೊಂದಿರುವ ಎಲ್ಲವೂ ನಾಶವಾಗಲಿದೆ ಎಂದು ಆತಂಕವ್ಯಕ್ತಪಡಿಸಿದರು. ಬಳಿಕ ಕಟೀಲು ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಅರ್ಚಕರಾದ ಅನಂತ ಅಸ್ರಣ್ಣ ಮಾತನಾಡಿದರು.
ಜಾಥದ ಬಳಿಕ ಬೆಳೆಹಾನಿ ಬಗ್ಗೆ ರೈತ ಭಾಸ್ಕರ ಶೆಟ್ಟಿ ಅವರ ನಿವಾಸದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ರೈತ ಮುಖಂಡರಾದ ನಾರಾಯಣ ಸ್ವಾಮಿ ಅವರು, ಒಬ್ಬ ರೈತನ ಸಮಸ್ಯೆ ಎಲ್ಲ ರೈತರ ಸಮಸ್ಯೆ. ಒಬ್ಬರ ಸಮಸ್ಯೆಗೆ ಎಲ್ಲರೂ ಒಗ್ಗೂಡಿ ಹೋರಾಡಬೇಕಿದೆ. ಸರ್ಕಾರಗಳು ರೈತರ ಅನುಮತಿ ಇಲ್ಲದೇ ಆಕ್ರಮಿಸಿಕೊಂಡು ಬೆಳೆ ನಾಶ ಮಾಡಿಕೊಂಡು ತಮ್ಮ ಕಾರ್ಯಸಾಧನೆ ಮಾಡುತ್ತಿದೆ. ಕಂಪನಿಗೆ ರೈತರ ಜಮೀನಿಗೆ ಅನಧಿಕೃತ ದಾಳಿ ಮಾಡಿ ಬೆಳೆ ಹಾನಿ ಮಾಡಲು ಪರವಾನಿಗೆ ನೀಡಿದವರು ಯಾರು ಎಂದು ಪ್ರಶ್ನಿಸಿದರು.
ರೈತ ಏನನ್ನೂ ಬೆಳೆಯದಿದ್ದರೆ ಜನರು ತಿನ್ನುವುದಾದರೂ ಏನು? ರೈತರನ್ನು ತುಳಿದು ಅಭಿವೃದ್ಧಿ ಬೇಡ. ಸರ್ಕಾರದ ಅವೈಜ್ಞಾನಿಕ ನಿರ್ಧಾರಗಳಿಂದ ರೈತರು ಕೃಷಿ ಬಿಟ್ಟು ಕಾರ್ಮಿಕರಾಗುತ್ತಿದ್ದಾರೆ. ಆದಷ್ಟು ಕೃಷಿಭೂಮಿಗಳಿಂದ ದೂರದಿಂದ ಈ ಕಾಮಗಾರಿ ನಡೆಸಬೇಕು. ಈ ಕಾಮಗಾರಿಗೆ ರೈತರು ಒಂದಿಂಚೂ ಜಾಗವನ್ನು ನೀಡುವುದಿಲ್ಲ ಎಂದು ಕಂಪನಿಯ ವಿರುದ್ಧ ಗುಡುಗಿದರು.
ರೈತ ಸಂಘದ ರಾಜ್ಯ ಮುಖಂಡ ನಾರಾಯಣ ಸ್ವಾಮಿ, ಸುಚರಿತ ಶೆಟ್ಟಿ, ಕೃಷ್ಣ ಪ್ರಸಾದ್ ತಂತ್ರಿ, ಗ್ರಾ.ಪಂ. ಅಧ್ಯಕ್ಷೆ ಶಾಲಿನಿ, ಪ್ರವೀಣ್ ಭಂಡಾರಿ, ವಸಂತ ಭಟ್, ರವಿರಾಜ್, ಸುರೇಶ್ ಶೆಟ್ಟಿ ದೋಟ, ಬಾಲಕೃಷ್ಣ ದೇವಾಡಿಗ, ಭಾಸ್ಕರ ಶೆಟ್ಟಿ, ಅಲ್ಫೋನ್ಸ್ ನಿಡ್ಡೋಡಿ, ಚಂದ್ರಹಾಸ ಶೆಟ್ಟಿ, ಹೊನ್ನಪ್ಪಗೌಡ, ಕೃಷ್ಣಮೂರ್ತಿ, ಜಾಕಿಂ ಪಿಂಟೊ, ಸುದೇಶ್ ದೇವಾಡಿಗ, ಹರೀಶ್ ಉಳ್ಳಾಲ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.

