ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಈಗ ಅಪ್ಪ-ಮಕ್ಕಳು, ಕುಟುಂಬ ರಾಜಕಾರಣದ ಸದ್ದು ಜೋರಾಗಿ ಮಾಡುತ್ತಿದೆ. ಬಿಜೆಪಿ ರಾಷ್ಟ್ರೀಯ ಸಂಘಟನೆ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿಕೆ ತಲ್ಲಣ ಸೃಷ್ಟಿಸಿದ್ದು, ರಾಜ್ಯ ಬಿಜೆಪಿ ನಾಯಕರಿಗೆ ಆತಂಕ ಸೃಷ್ಟಿ ಮಾಡಿದೆ.
ಕುಟುಂಬ ರಾಜಕಾರಣದ ವಿರುದ್ಧ ಹೇಳಿಕೆ ಕೊಟ್ಟರುವ ಬಿ.ಎಲ್.ಸಂತೋಷ್ ಹೇಳಿಕೆಯನ್ನು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಸ್ವಾಗತ ಮಾಡಿದ್ದಾರೆ. ಅಲ್ಲದೆ ರಾಜಕಾರಣದಲ್ಲಿ ಅಪ್ಪ-ಮಕ್ಕಳ ಸಂಸ್ಕೃತಿ ಇರಬಾರದು ಅಂತ ಸಂತೋಷ್ ಮಾತಿಗೆ ಧ್ವನಿಗೂಡಿಸಿದ್ದಾರೆ.
- Advertisement
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕಾರಣ ಅನ್ನೋದು ಬ್ಯುಸಿನೆಸ್ ಅಲ್ಲ. ಪಕ್ಷ ವಿನೂತನವಾಗಿ, ಹೊಸದಾಗಿ ಏನೇ ಮಾಡಿದರು ನಮಗೆ ಸಂತೋಷ ಇದೆ. ನಮ್ಮ ಅಭ್ಯಂತರ ಇಲ್ಲ. ಪಕ್ಷಕ್ಕೆ ವ್ಯಕ್ತಿಗಳು ಮುಖ್ಯ ಅಲ್ಲ. ವ್ಯಕ್ತಿಗಿಂತ ವ್ಯವಸ್ಥೆ ಮುಖ್ಯವಾಗಿ ಇರುತ್ತದೆ. ವ್ಯವಸ್ಥೆಯಲ್ಲಿ ಯಾರಾದರೇನು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣ: ಬಿ.ಎಲ್.ಸಂತೋಷ್
- Advertisement
ಕುಟುಂಬ ರಾಜಕಾರಣವನ್ನು ಇಡೀ ಸಮಾಜ ವಿರೋಧ ಮಾಡುತ್ತದೆ. ಕುಟುಂಬ ಆಧಾರಿತ ರಾಜಕೀಯ ಇರಬಾರದು ಅನ್ನೋದು ಸಮಾಜದ ಇಚ್ಛೆ. ಆ ದಿಕ್ಕಿನಲ್ಲಿ ಬಿಜೆಪಿ ಯೋಚನೆ ಮಾಡ್ತಿರೋದು ಒಳ್ಳೆ ಬೆಳವಣಿಗೆ. ಕೆಲವರಿಗೆ ಮೀಸಲು ಇರೋದಕ್ಕೆ ಇದು ಬ್ಯುಸಿನೆಸ್ ಅಲ್ಲ, ಇದೊಂದು ಸೇವೆ. ನಾವು ಸಮಾಜಕ್ಕೆ ಸೇವೆ ಸಲ್ಲಿಸಬೇಕು. ರಾಜಕೀಯಕ್ಕೆ ಬಂದು ನಮ್ಮ ಸೇವೆ ಮಾಡಿಕೊಳ್ಳೋದು ಸರಿಯಲ್ಲ. ಅಪ್ಪ-ಮಕ್ಕಳ ಸಂಸ್ಕೃತಿ ಸಮಾಜದಲ್ಲಿ ಇರಬಾರದು ಎಂದಿದ್ದಾರೆ.
ಕಾಂಗ್ರೆಸ್, ಪ್ರಾದೇಶಿಕ ಪಕ್ಷಗಳಲ್ಲಿ ಕುಟುಂಬ ರಾಜಕಾರಣ, ಅಪ್ಪ ಮಕ್ಕಳ ಪಕ್ಷ ಅಂತ ಇದೆ. ಎಲ್ಲಾ ರಾಜ್ಯದಲ್ಲೂ ಅಪ್ಪ-ಮಕ್ಕಳ ಪಕ್ಷ ಆಗಿ ಬಿಟ್ಟಿದೆ. ಹೀಗಾಗಿ ಪ್ರಧಾನಿ ಮೋದಿ ಅವರು ಇದನ್ನ ಸ್ಪಷ್ಟವಾಗಿ ವಿರೋಧ ಮಾಡಿದ್ದಾರೆ. ಇದನ್ನ ನಾವೂ ವಿರೋಧ ಮಾಡಬೇಕು. ಇದೇನು ಬ್ಯುಸಿನೆಸ್ ಮಾಡೆಲ್ ಅಲ್ಲ. ಈ ನಿಟ್ಟಿನಲ್ಲಿ ಪ್ರಧಾನಿಗಳು ನಿರ್ಧಾರ ಮಾಡಿದ್ದಾರೆ. ಯಾರು ಯಾರು ಇರಬೇಕು ಅಂತ ಪಕ್ಷ ತೀರ್ಮಾನ ಮಾಡುತ್ತದೆ. ಅದಕ್ಕೆ ನಾವು ಬದ್ಧರಾಗಿ ಇರಬೇಕು. ನಾನೇ ಒಬ್ಬ, ನಾನೇ ಎಲ್ಲಾ ಅಂತ ಹೇಳೋದು ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಆಗಿ ಕಾಫಿನಾಡ ಬಿ.ಎಸ್.ರಾಜು ನೇಮಕ
ನಾಯಕತ್ವ ಬದಲಾವಣೆ ಹೈಕಮಾಂಡ್ ತೀರ್ಮಾನ:
ನಾಯಕತ್ವ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿ ಇರುತ್ತೇವೆ. ಪಕ್ಷ ಆಲೋಚನೆ ಮಾಡಿ ನಿರ್ಧಾರ ಮಾಡುತ್ತದೆ. ಅದಕ್ಕೆ ನಾವೆಲ್ಲ ಸಹಕಾರ ಕೊಡಬೇಕು. ನಾವೆಲ್ಲ ಒಟ್ಟಾಗಿ ಇರಬೇಕು. ಪಕ್ಷವಾಗಿ ಏನು ನಿರ್ಧಾರ ಆಗುತ್ತೋ ಅದರಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಅನೇಕರಲ್ಲಿ ಬೇರೆ ಬೇರೆ ಅಭಿಪ್ರಾಯಗಳು ಇರಬಹುದು. ಆದರೆ ಪಕ್ಷದ ತೀರ್ಮಾನವೇ ಅಂತಿಮ. ಅದಕ್ಕೆ ಎಲ್ಲರೂ ಬದ್ಧವಾಗಿ ಇರಬೇಕು. ನಾವು ಬಂದಿರೋದು ಸಮಾಜಕ್ಕೆ ಒಳ್ಳೆಯದು ಮಾಡಲು. ಪಕ್ಷ ಏನು ತೀರ್ಮಾನ ಮಾಡುತ್ತೋ ಹಾಗೆ ನಡೆಯಬೇಕು. ಈ ದಿಕ್ಕಿನಲ್ಲಿ ಪಕ್ಷ ತೆಗೆದುಕೊಳ್ಳೊವ ತೀರ್ಮಾನಕ್ಕೆ ನಾನು ಬದ್ಧವಾಗಿ ಇರುತ್ತೇನೆ ಎಂದು ಹೇಳಿದ್ದಾರೆ.