ಸಿಎಸ್‍ಆರ್ ನಿಧಿಯನ್ನು ಶಾಲಾ ಪೂರ್ವ ಶಿಕ್ಷಣಕ್ಕೆ ಬಳಸಿದರೆ ಉತ್ತಮ: ಡಾ.ಅಶ್ವತ್ಥನಾರಾಯಣ

Public TV
2 Min Read
WhatsApp Image 2020 03 03 at 3.00.00 PM e1583233813394

ಬೆಂಗಳೂರು: ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‍ಆರ್)ಯನ್ನು ಶಾಲಾ ಪೂರ್ವ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಬಳಸಿದರೆ ಉತ್ತಮ. ಈ ನಿಟ್ಟಿನಲ್ಲಿ ಕಂಪನಿಗಳು ಕೈಗೊಳ್ಳುವ ಎಲ್ಲ ಯೋಜನೆಗಳಿಗೆ ಸರ್ಕಾರದ ಸಂಪೂರ್ಣ ಬೆಂಬಲ ಇರುತ್ತದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ತಿಳಿಸಿದರು.

ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯ ಬಳಕೆಯ ಪರಿಣಾಮಗಳ ಕುರಿತು ಅಮೆರಿಕ ಚೇಂಬರ್ ಆಫ್ ಕಾರ್ಮರ್ಸ್ ನಿಂದ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಬದುಕಿನಲ್ಲಿ ಕಲಿಯುವ ಪ್ರತಿ ಕೌಶಲ, ಜ್ಞಾನ ಸಮಾಜದ ಒಳಿತಿಗೆ ಬಳಕೆಯಾಗಬೇಕು. ನಮ್ಮ ಕಲಿಕೆ ಸಮಾಜದ ಒಳಿತಿಗೆ ಬಳಕೆಯಾಗದಿದ್ದರೆ ಅಂಥ ಕಲಿಕೆ ವ್ಯರ್ಥ. ಸಿಎಸ್‍ಆರ್ ಒಳ್ಳೆಯ ಕೆಲಸ ಮಾಡುತ್ತಿದೆ. ಸಮಾಜ ಹಾಗೂ ಸರ್ಕಾರಕ್ಕೆ ಪೂರಕವಾಗಿ ಕೆಲಸ ಮಾಡುತ್ತಿವೆ. ಶಿಕ್ಷಣ ವ್ಯವಸ್ಥೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಇಂಥ ಸಂಸ್ಥೆಗಳು ಕೈಗೊಳ್ಳುವ ಎಲ್ಲ ಯೋಜನೆಗಳಿಗೆ ಸರ್ಕಾರದ ಸಹಕಾರ ಇರುತ್ತದೆ ಎಂದು ಭರವಸೆ ನೀಡಿದರು.

WhatsApp Image 2020 03 03 at 2.59.59 PM

ಸಾಮಾನ್ಯವಾಗಿ ಸರ್ಕಾರಗಳು ತತ್‍ಕ್ಷಣದ ಫಲಿತಾಂಶಕ್ಕೆ ಹೆಚ್ಚು ಒತ್ತು ನೀಡಲು ಪ್ರಯತ್ನಿಸುತ್ತವೆ. ನರ್ಸರಿ ಶಾಲೆಗಳಿದ್ದರೂ, ಅವುಗಳ ಕಾರ್ಯವೈಖರಿ, ಇನ್ನೂ ಸುಧಾರಿಸಬೇಕಿದೆ. ಈ ಕೊರತೆಯನ್ನು ನೀಗಿಸುವಲ್ಲಿ ಸಿಎಸ್‍ಆರ್ ಪಾತ್ರ ದೊಡ್ಡದು. ಶಿಕ್ಷಣದಲ್ಲಿ ಮೊದಲ ಆದ್ಯತೆ ನರ್ಸರಿ ಶಿಕ್ಷಣಕ್ಕೆ ಸಿಗಬೇಕು. ಈ ನಿಟ್ಟಿನಲ್ಲಿ ಕಾರ್ಪೊರೇಟ್ ಕಂಪನಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಧಿ ಉತ್ತಮ ರೀತಿಯಲ್ಲಿ ಬಳಕೆಯಾಗಬೇಕು ಎಂದರು.

ಸೂಕ್ತ ಶಿಕ್ಷಣ ಒದಗಿಸುವ ಮೂಲಕ ಸಮಾಜದ ಬಹುತೇಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರಚನಾತ್ಮಕ ಬದಲಾವಣೆಗಳನ್ನು ಒಳಗೊಂಡಿದ್ದು, ಹಲವು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಿದೆ. ಸಾಮಾಜಿಕ ಬದ್ಧತೆ, ಕ್ರೀಡೆ, ಸಂಸ್ಕೃತಿಯನ್ನೊಳಗೊಂಡಂತೆ ಶಿಕ್ಷಣ ನೀತಿ ಬಹಳ ಮುಖ್ಯ. ಸರಿಯಾದ ರೀತಿಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳದಿದ್ದರೆ ಸಮಸ್ಯೆಗಳು ಎದುರಾಗುತ್ತವೆ. ಹೊಸ ನೀತಿಗಳನ್ನು ತರುವುದರ ಜೊತೆಗೆ ಅವುಗಳ ಅನುಷ್ಠಾನಕ್ಕೂ ಆದ್ಯತೆ ನೀಡಬೇಕು. ಅಲ್ಲದೆ ಸುಸ್ಥಿರ ಅಭಿವೃದ್ಧಿ ಸಾಧಿಸುವುದು ಸಹ ಬಹಳ ಮುಖ್ಯ ಎಂದರು.

CSR Corporate Social Responsibility

ಶಿಕ್ಷಣ ಕ್ಷೇತ್ರದ ಬಹು ದೊಡ್ಡ ಸಮಸ್ಯೆ ಎಂದರೆ ಸೂಕ್ತ ಸಂವಹನ ಇಲ್ಲದಿರುವುದು. ಯಾವ ಸೌಲಭ್ಯಗಳಿವೆ ಎಂಬ ಮಾಹಿತಿ ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಾರೆ. ಈ ಗೊಂದಲವನ್ನು ಪರಿಹರಿಸಲು ಎಲ್ಲವನ್ನೂ ಡಿಜಿಟಲೀಕರಣಗೊಳಿಸುವ ಕೆಲಸ ಆಗುತ್ತಿದೆ. ಉದ್ದಿಮೆಗಳು ಹಾಗೂ ಶೈಕ್ಷಣಿಕ ಮಾರ್ಗದರ್ಶಕರ ಪಟ್ಟಿ ಇರುವ ಆನ್‍ಲೈನ್ ವೇದಿಕೆ ಸೃಷ್ಟಿಸಲಾಗುವುದು. ಎಲ್ಲೆಲ್ಲಿ ಇಂಟರ್ನ್‍ಶಿಪ್, ಪ್ರಾಜೆಕ್ಟ್ ಮಾಡಲು ಅವಕಾಶ ಇದೆ, ಉದ್ಯೋಗಾವಕಾಶಗಳು ಎಲ್ಲಿವೆ ಎಂಬ ಮಾಹಿತಿ ಈ ಆನ್‍ಲೈನ್ ವೇದಿಕೆಯಲ್ಲಿ ಲಭ್ಯ. ಈ ಸೌಲಭ್ಯಗಳನ್ನು ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದರು.

ಕಾರ್ಯಕ್ರಮದಲ್ಲಿ ಅಮೆರಿಕ ಚೇಂಬರ್ ಆಫ್ ಕಾರ್ಮರ್ಸ್ ಸಿಇಓ ರಂಜನಾ ಖನ್ನಾ ಹಾಗೂ ಅಮೆರಿಕ ಮೂಲದ ಹಲವು ಕಂಪನಿಗಳ ಮುಖ್ಯಸ್ಥರು ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *