ಅಶು ಬೆದ್ರ ನಿರ್ಮಾಣ ಮಾಡಿ ನಾಯಕನಾಗಿಯೂ ನಟಿಸಿರುವ ಅಳಿದು ಉಳಿದವರು ಚಿತ್ರ ತನ್ನ ಶೀರ್ಷಿಕೆಯ ಮೂಲಕವೇ ಹೊಸತನದ ಕಂಪು ಹೊಮ್ಮಿಸುತ್ತಾ ಪ್ರೇಕ್ಷಕರನ್ನು ಆವರಿಸಿಕೊಂಡಿತ್ತು. ಪೋಸ್ಟರ್ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಪಡೆದ ಟ್ರೇಲರ್‌ಗಳ ಹೊರತಾಗಿ ಚಿತ್ರತಂಡ ಯಾವ ಅಬ್ಬರದ ಪ್ರಚಾರದತ್ತಲೂ ಗಮನ ಹರಿಸಿರಲಿಲ್ಲ. ಅಷ್ಟಕ್ಕೂ ಅದು ತಣ್ಣಗೆ ಹೊತ್ತಿಸಿದ್ದ ನಿರೀಕ್ಷೆಗಳ ಕಾವಿನ ಮುಂದೆ ಅದೆಲ್ಲದರ ಅವಶ್ಯಕತೆಯೂ ಬಿದ್ದಿರಲಿಲ್ಲ. ಇದೆಲ್ಲದಕ್ಕೆ ತಕ್ಕುದಾದ ರೀತಿಯಲ್ಲಿಯೇ ನಿರ್ದೇಶಕ ಅರವಿಂದ್ ಶಾಸ್ತ್ರಿ ಈ ಚಿತ್ರವನ್ನು ಕಟ್ಟಿ ಕೊಡುತ್ತದೆ. ಯಾವ ಥರದಲ್ಲಿ ಈ ಸಿನಿಮಾ ಸದ್ದು ಮಾಡಿತ್ತೋ ಅದೇ ತಣ್ಣಗಿನ ಆವೇಗವನ್ನು ಆತ್ಮವಾಗಿಸಿಕೊಂಡಂತಿರುವ ಈ ಚಿತ್ರ ಎಲ್ಲರಿಗೂ ಹಿಡಿಸುವಂತೆ ಮೂಡಿ ಬಂದು ಪ್ರೇಕ್ಷಕರನ್ನು ಮುದಗೊಳಿಸಿದೆ.
Advertisement
ಇಲ್ಲಿ ನಂಬಿಕೆ ಮತ್ತು ಮೂಢ ನಂಬಿಕೆಗಳನ್ನು ಮುಖಾಮುಖಿಯಾಗಿ ಡಿಕ್ಕಿ ಹೊಡೆಸಿ ಅದರ ಘರ್ಷಣೆಯಿಂದ ರೂಪುಗೊಂಡಂತಿರೋ ಕುತೂಹಲಕರವಾದ ಕಥೆಯನ್ನು ಹೇಳಲಾಗಿದೆ. ಒಂದು ಸಿನಿಮಾವನ್ನು ಮಾಮೂಲಿ ಜಾಡಿಗಿಂತ ಭಿನ್ನವಾಗಿ ರೂಪಿಸಬೇಕೆಂಬ ತುಡಿತ ಇದ್ದರೆ ಅಂಥಾ ಚಿತ್ರಗಳು ಎಲ್ಲ ರೀತಿಯಿಂದಲೂ ಡಿಫರೆಂಟೆಂಬಂತೆ ಮೂಡಿ ಬರುತ್ತವೆ. ಇಲ್ಲಿ ಪ್ರೀತಿ ಸೇರಿದಂತೆ ನಾನಾ ಛಾಯೆಯ ಕಥೆಯಿದೆ. ಆದರೆ ಎಲ್ಲಿಯೂ ಕೂಡಾ ಥ್ರಿಲ್ಲರ್ ಅಂಶಗಳನ್ನು ಬಿಟ್ಟುಕೊಡದಂಥಾ ಕಲೆಗಾರಿಕೆಯನ್ನು ನಿರ್ದೇಶಕ ಅರವಿಂದ ಶಾಸ್ತ್ರಿ ಪ್ರದರ್ಶಿಸಿದ್ದಾರೆ. ಹಾಗಂತ ಇಲ್ಲಿ ಬಿಲ್ಡಪ್ಪುಗಳಿಲ್ಲ. ಅದಿಲ್ಲದೆಯೂ ಒಂದು ದೃಷ್ಯವನ್ನು ಕಳೆಗಟ್ಟಿಸೋದು, ನೋಡುಗರನ್ನು ಕುತೂಹಲದ ಶಿಖರವೇರಿಕೊಳ್ಳುವಂತೆ ಮಾಡುವುದೆಲ್ಲ ಒಂದು ಕಲೆ. ನಿರ್ದೇಶಕರಿಲ್ಲಿ ಅದನ್ನು ಧಾರಾಳವಾಗಿಯೇ ಪ್ರದರ್ಶಿಸಿದ್ದಾರೆ. ಅಳಿದು ಉಳಿದವರ ಅಸಲಿ ಹೆಚ್ಚುಗಾರಿಕೆಯೇ ಅದು!
Advertisement
Advertisement
ಈ ಚಿತ್ರದ ನಾಯಕನಾಗಿ ಅಶು ಬೆದ್ರ ಶೀಲಂ ಎಂಬ ನಿರೂಪಕನ ಪಾತ್ರದಲ್ಲಿ ನಟಿಸಿದ್ದಾರೆ. ಈತ ಎಲ್ಲರಿಗಿಂತಲೂ ತುಸು ಭಿನ್ನವಾದ ನಿರೂಪಕ. ಶೀಲಂ ನಂಬಿಕೆ ಮತ್ತು ಮೂಢನಂಬಿಕೆಗಳನ್ನೇ ಬೇಸ್ ಆಗಿಸಿಕೊಂಡಿರೋ ಕಾರಣ..? ಎಂಬೊಂದು ಕಾರ್ಯಕ್ರಮವನ್ನು ನಡೆಸುತ್ತಿರುತ್ತಾನೆ. ಪ್ರತೀ ಎಪಿಸೋಡಿನಲ್ಲಿಯೂ ವಿಷಯವೊಂದರ ಪಾತಾಳಗರಡಿಯಂಥಾ ವಿವರಗಳನ್ನು ಕಲೆ ಹಾಕುತ್ತಾ ಪ್ರತೀ ಎಪಿಸೋಡುಗಳಲ್ಲಿಯೂ ಆತ ದೆವ್ವ ಎಂಬುದಿಲ್ಲ ಎಂಬುದನ್ನೇ ಸಾಬೀತುಪಡಿಸುತ್ತಾ ಸಾಗುತ್ತಾನೆ. ಇದೇ ಥರದಲ್ಲಿ ತೊಬತ್ತೊಂಬತ್ತು ಎಪಿಸೋಡುಗಳನ್ನು ಪೈರೈಸಿಕೊಳ್ಳುವ ಆತನ ಮುಂದೆ ನೂರನೇ ಎಪಿಸೋಡನ್ನು ಎಲ್ಲಕ್ಕಿಂತ ವಿಶೇಷವಾಗಿ ರೂಪಿಸಬೇಕೆಂಬ ಸವಾಲು ಮೂಡಿಕೊಳ್ಳುತ್ತದೆ.
Advertisement
ಹಾಗೆ ಹುಡುಕಿ ಹೊರಡೋ ಶೀಲಂಗೆ ಪವನ್ ಕುಮಾರ್ ನಿರ್ವಹಿಸಿರುವ ಪಾತ್ರ ಎದುರಾಗುತ್ತೆ. ಆ ಪಾತ್ರ ತನ್ನ ಸೇಲಾಗದೇ ಉಳಿದ ಮನೆಯಲ್ಲಿ ದೆವ್ವವಿಲ್ಲ ಅಂತ ನಿರೂಪಿಸುವಂತೆ ಶೀಲಂಗೆ ಸವಾಲೊಡ್ಡುತ್ತೆ. ಅದನ್ನು ಸ್ವೀಕರಿಸಿ ಆ ಮನೆಗೆ ಶೀಲಂ ಕಾಲಿಡುತ್ತಲೇ ಕಥೆ ಮತ್ತಷ್ಟು ರೋಚಕ ಆಯಾಮ ಪಡೆದುಕೊಳ್ಳುತ್ತದೆ. ಅಲ್ಲಿ ಶೀಲಂಗೆ ನಿಜವಾಗಿಯೂ ದೆವ್ವದ ದರ್ಶನವಾಗುತ್ತದಾ ಎಂಬುದರಿಂದ ಹಿಡಿದು ಎಲ್ಲರನ್ನು ಕಾಡ ಬಹುದಾದ ಪ್ರತೀ ಪ್ರಶ್ನೆಇಗಳಿಗೂ ಇಲ್ಲಿ ರೋಚಕ ಉತ್ತರವಿದೆ. ವಿಶೇಷವೆಂದರೆ ಇಲ್ಲಿ ಮೂಢ ನಂಬಿಕೆಯ ವಿರುದ್ಧದ ಅಂಶಗಳನ್ನೇ ನಿರ್ದೇಶಕರು ಪ್ರಧಾನವಾಗಿಸಿಕೊಂಡಿದ್ದಾರೆ. ಇದರೊಂದಿಗೆ ನಾನಾ ಛಾಯೆಗಳಿರೋ ಗಟ್ಟಿ ಕಥೆಯನ್ನೇ ಕಟ್ಟಿ ಕೊಟ್ಟಿದ್ದಾರೆ.
ಸಾಮಾನ್ಯವಾಗಿ ಮನುಷ್ಯನಿಗೆ ಕಾಣಿಸೋದರ ಮೇಲಿರೋ ಕುತೂಹಲಕ್ಕಿಂತ ಕಾಣಿಸದಿರುವುದರ ಬಗ್ಗೆಯೇ ಆಸಕ್ತಿ ಹೆಚ್ಚು. ಅದುವೇ ಭ್ರಮೆಯ ರೂಪ ಧರಿಸಿ ಅದರ ಚಿಪ್ಪೊಳಗೆ ದೆವ್ವ ಭೂತಗಳಂಥವುಗಳು ನರ್ತನ ಶುರುವಿಟ್ಟುಕೊಳ್ಳುತ್ತವೆ. ಈ ಭೂಮಿಕೆಯಲ್ಲಿ ಸಿದ್ಧಗೊಂಡಿರೋ ಅಳಿದು ಉಳಿದವರು ಭರ್ಜರಿ ಎಂಟರ್‍ಟೈನ್ಮೆಂಟ್ ಪ್ಯಾಕೇಜಿನಂತೆ ಮೂಡಿ ಬಂದಿದೆ. ಇಲ್ಲಿ ಹಾಡುಗಳ ಆಡಂಬರವಿಲ್ಲ, ಸಂತದ ಅಬ್ಬರವೂ ಇಲ್ಲ. ಆದರೆ ಕಥೆಯೇ ಅದೆಲ್ಲದರ ಸ್ಥಾನವನ್ನು ಆಕ್ರಮಿಸಿಕೊಂಡು ತಣ್ಣಗೆ ವಿಜೃಂಭಿಸುತ್ತದೆ. ಅಶು ಬೆದ್ರ ನಾಯಕನಾಗಿ ಮೊದಲ ಪ್ರಯತ್ನದಲ್ಲಿಯೇ ಮೆಚ್ಚಿಕೊಳ್ಳುವಂತೆ ನಟಿಸಿದ್ದಾರೆ. ಸಂಗೀತಾ ಭಟ್ ಕೂಡಾ ಅದಕ್ಕೆ ಸರಿಯಾಗಿಯೇ ಸಾಥ್ ನೀಡಿದ್ದಾರೆ. ಅತುಲ್ ಕುಲಕರ್ಣಿ, ಪವನ್ ಕುಮಾರ್, ಬಿ ಸುರೇಶ್ ಅವರ ಪಾತ್ರಗಳೂ ಕಾಡುವಂತಿವೆ. ಅಂತೂ ಅತ್ಯಂತ ವಿಶಿಷ್ಟವಾದ ಚಿತ್ರವಾಗಿ ದಾಖಲಾಗುವಂತೆ ಅಳಿದು ಉಳಿದವರು ಚಿತ್ರ ಮೂಡಿ ಬಂದಿದೆ.
ರೇಟಿಂಗ್: 3.5/5