Connect with us

Bengaluru City

ರಾಷ್ಟ್ರಪತಿಗಳಿಗೆ ಟಿಪ್ಪು ಭಾಷಣ ಬರೆದು ಕೊಟ್ಟಿದ್ರು ಇವ್ರು ಅಂದ್ರು ದಿನೇಶ್ ಅಮೀನ್ ಮಟ್ಟು

Published

on

ಬೆಂಗಳೂರು: ವಿಧಾನಸೌಧದ ವಜ್ರಮಹೋತ್ಸವದ ಭಾಷಣದಲ್ಲಿ ಟಿಪ್ಪುವಿನ ಬಗ್ಗೆ ಉಲ್ಲೇಖವಾಗಿದ್ದಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಪರ – ವಿರೋಧದ ಚರ್ಚೆಗಳು ಮುಂದುವರೆದಿದೆ. ನಿನ್ನೆ ಮಧ್ಯಾಹ್ನದಿಂದ ರಾಷ್ಟ್ರಪತಿಗಳ ಭಾಷಣ ನಿಜವಾಗಿಯೂ ಬರೆದಿದ್ದು ಯಾರು ಎಂಬ ಬಗ್ಗೆ ಚರ್ಚೆಯೋ ಚರ್ಚೆ. ಕೆಲವರು ರಾಜ್ಯದತ್ತ ಕೈತೋರಿಸಿದರೆ, ಇನ್ನು ಕೆಲವರು ಕೇಂದ್ರದತ್ತ ಕೈ ತೋರಿಸಿದ್ದಾರೆ. ಈ ಎಲ್ಲದರ ನಡುವೆ ಸಿಎಂ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು ಅವರು ರಾಮನಾಥ್ ಕೋವಿಂದ್ ವಿಧಾನಸಭೆ ವಜ್ರಮಹೋತ್ಸವದಲ್ಲಿ ಮಾಡಿದ ಭಾಷಣ ಯಾರು ಬರೆದು ಕೊಟ್ಟಿದ್ದಾರೆ ಎಂಬ ಬಗ್ಗೆಯೂ ತಮ್ಮ ಫೇಸ್ ಬುಕ್ ಪುಟದಲ್ಲಿ ವಿವರವಾಗಿ ಬರೆದಿದ್ದಾರೆ. ಜೊತೆಗೆ ಮಾಜಿ ಸಚಿವ ಸುರೇಶ್ ಕುಮಾರ್ ಹಾಗೂ ಬಿಜೆಪಿಯ ಪ್ರಕಾಶ್ ಕಾಲೆಳೆದಿದ್ದಾರೆ. ಇದೆಲ್ಲದರ ನಡುವೆ ಕಾಂಗ್ರೆಸ್ ಕಚೇರಿಯಲ್ಲಿ ಸುತ್ತಾಡುತ್ತಿರುವ ವಿಗ್ ಗಿರಾಕಿಯೊಬ್ಬರು ನನ್ನ ರಾಜೀನಾಮೆ ಕೇಳಿ ಪ್ರೆಸ್ ನೋಟ್ ಸಿದ್ಧಪಡಿಸುತ್ತಿದ್ದ ಎಂಬ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.

ದಿನೇಶ್ ಅಮೀನ್ ಮಟ್ಟು ಫೇಸ್ ಬುಕ್ ಪುಟದಲ್ಲಿ ಬರೆದಿದ್ದೇನು?
ರಾಷ್ಟ್ರಪತಿಗಳ ಭಾಷಣದ ಬಗ್ಗೆ ಚರ್ಚಿಸುತ್ತಾ ಮಧ್ಯಾಹ್ನ ಹೋಟೆಲ್ ಗೆ ಊಟಕ್ಕೆ ಹೋಗಿದ್ದಾಗ ದಲಿತ ಸಮುದಾಯಕ್ಕೆ ಸೇರಿರುವ ಬಿಜೆಪಿಯ ಶಾಸಕರೊಬ್ಬರು ಭೇಟಿಯಾದರು. (ನನಗೆ ಆತ್ಮೀಯರಾಗಿರುವ ಕಾರಣ ಹೆಸರು ಹೇಳುವುದಿಲ್ಲ). ನನ್ನನ್ನು ನೋಡಿದವರೇ ‘ಏನ್ಸಾಮಿ, ನೀವು ಹೀಗೆಲ್ಲ ಬರೆದುಕೊಡೋದಾ? ಎಂದು ನಗುತ್ತಲೇ ಆಕ್ಷೇಪದ ದನಿಯಲ್ಲಿ ಪ್ರಶ್ನಿಸಿದರು. ಅವರು ತಮಾಷೆ ಮಾಡ್ತಾ ಇದ್ದಾರೆ ಎಂದು ಸುಮ್ಮನೆ ನಕ್ಕೆ. ಆದರೆ ಅದು ತಮಾಷೆಯಾಗಿರಲಿಲ್ಲ. ಅವರೇ ಮಾತು ಮುಂದುವರಿಸಿ ನಮ್ಮ ಪಕ್ಷದ ಕಚೇರಿಯಲ್ಲಿ ಇದೇ ವಿಷಯ ಚರ್ಚೆಯಾಗುತ್ತಿದೆ’ ಎಂದರು. ರಾಷ್ಟ್ರಪತಿ ಭಾಷಣ ಹೇಗೆ ತಯಾರಿಸುತ್ತಾರೆ ಎಂದು ವಿವರವಾಗಿ ತಿಳಿಸಿದರೂ ಅವರಿಗಾಗಲಿ, ಅವರ ಜತೆಯಲ್ಲಿರುವವರಿಗಾಲಿ ಪೂರ್ಣವಾಗಿ ಮನವರಿಕೆಯಾಗಲಿಲ್ಲ.

ಇದನ್ನೇ ನಿಜವೆಂದು ನಂಬಿ ಸ್ನೇಹಿತರಾದ ಶಾಸಕ ಸುರೇಶ್ ಕುಮಾರ್ ಮತ್ತು ಪಕ್ಷದ ಅರೆವಕ್ತಾರ ‘ಪರನಿಂದಕಾಶ’ ಅನುಕ್ರಮವಾಗಿ 14 ಮತ್ತು 19ನೇ ಬಾರಿ ರಾಜೀನಾಮೆ ಕೇಳಿದರೆ ನನ್ನ ಗತಿ ಏನು ಎಂದು ಸಂಜೆ ವರೆಗೆ ಬಹಳ ಚಿಂತೆಯಲ್ಲಿದ್ದೆ. ಇದರ ಜತೆಗೆ ಕಾಂಗ್ರೆಸ್ ಕಚೇರಿಯಲ್ಲಿ ಸುತ್ತಾಡುತ್ತಿರುವ ಒಬ್ಬ ವಿಗ್ ಗಿರಾಕಿ ನನ್ನ ರಾಜೀನಾಮೆ ಕೇಳಿ ಪ್ರೆಸ್ ನೋಟ್ ರೆಡಿ ಮಾಡ್ತಾ ಇದ್ದಾನೆ ಎಂಬ ಸುದ್ದಿ ಇನ್ನಷ್ಟು ಭಯಭೀತನನ್ನಾಗಿ ಮಾಡಿತ್ತು. ದೇವರ ದಯೆಯಿಂದ ಏನೂ ಆಗಲಿಲ್ಲ.

ಗೊತ್ತಿಲ್ಲದವರಿಗಾಗಿ ಮಾಹಿತಿ: ರಾಷ್ಟ್ರಪತಿಗಳ ಭಾಷಣ ತಯಾರಿಸಲು ಅವರೇ ನೇಮಿಸಿಕೊಂಡ ಪತ್ರಿಕಾ ಕಾರ್ಯದರ್ಶಿಗಳಿರುತ್ತಾರೆ. ಸಾಮಾನ್ಯವಾಗಿ ಆ ಹುದ್ದೆಗೆ ಐಎಎಸ್, ಐಎಫ್ ಎಸ್ ಅಧಿಕಾರಿಗಳನ್ನು ನೇಮಿಸುತ್ತಾರೆ. ಇದೇ ಮೊದಲಬಾರಿಗೆ ಕೋವಿಂದ್ ಅವರು ಹಿರಿಯ ಪತ್ರಕರ್ತ, ಅಂಕಣಕಾರ ಮತ್ತು ಬಿಜೆಪಿ ಬೆಂಬಲಿಗರಾದ ಅಶೋಕ್ ಮಲ್ಲಿಕ್ ಅವರನ್ನು ಪತ್ರಿಕಾ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿದ್ದಾರೆ. ರಾಷ್ಟ್ರಪತಿಗಳ ಭಾಷಣ ತಯಾರಿಯ ಹೊಣೆ ಅವರದ್ದು. ರಾಷ್ಟ್ರಪತಿಗಳು ಓದಿದ್ದ ಭಾಷಣದ ಬಗ್ಗೆ ಬಿಜೆಪಿ ನಾಯಕರಿಗೆ ಆಕ್ಷೇಪ ಇದ್ದರೆ, ಸುಮ್ಮನೆ ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು, ಮುಖ್ಯಕಾರ್ಯದರ್ಶಿಗಳು ಕೊನೆಗೆ ನನ್ನಂತಹ ಬಡಪಾಯಿ ಮೇಲೆ ಆರೋಪ ಮಾಡುವ ಬದಲಿಗೆ ಅವರ ಪತ್ರಿಕಾ ಕಾರ್ಯದರ್ಶಿಯ ರಾಜೀನಾಮೆ ಕೇಳಲಿ.

ಇದರ ಜೊತೆಗೆ ಅಶೋಕ್ ಮಲ್ಲಿಕ್ ಯಾರು ಎಂದು ತಿಳಿಯಲು ಅವರ ಫೋಟೋವನ್ನು ಕೂಡಾ ಇಂದು ಸಂಜೆಯ ವೇಳೆಗೆ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *