ಜೈಪುರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರು ಕಲ್ಲಿದ್ದಲು ಮತ್ತು ಗಣಿ ಇಲಾಖೆಯನ್ನ ನಡೆಸುತ್ತಿರುವ ಆಡಳಿತ ರೀತಿಗೆ ಕಾಂಗ್ರೆಸ್ (Congress) ಮುಖಂಡ, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ (Ashok Gehlot) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಹ್ಲಾದ್ ಜೋಶಿಯವರು ರಾಜಸ್ಥಾನ ರಾಜ್ಯದ ವಿದ್ಯುತ್ ಸಮಸ್ಯೆ ಬಗೆಹರಿಸುವಲ್ಲಿ ರಚನಾತ್ಮಕ ಹಾಗೂ ಧನಾತ್ಮಕ ಸ್ಪಂದನೆ ನೀಡಿದ್ದಾರೆಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಕೇಂದ್ರದ ಕೋಲ್ ಇಂಡಿಯಾ ಲಿಮಿಟೆಡ್ ಹಾಗೂ ರಾಜಸ್ಥಾನ್ ವಿದ್ಯುತ್ ಉತ್ಪಾದನಾ ನಿಗಮದೊಂದಿಗೆ 1,190 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಕುರಿತ ಒಡಂಬಡಿಕೆಗೆ ಅಂಕಿತ ಹಾಕುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಇದನ್ನೂ ಓದಿ: ಒಂದೇ ಶಬ್ದದಲ್ಲಿ ಹೇಳ್ತೀನಿ, ನನ್ನ ಶಕ್ತಿ ಶಿವ: ರಾಹುಲ್ ಗಾಂಧಿ ಹೇಳಿದ ಗುಟ್ಟುಗಳು
ರಾಜಸ್ಥಾನದಲ್ಲಿ ವಿದ್ಯುತ್ ಸಮಸ್ಯೆ ಇದ್ದಾಗ ಛತ್ತೀಸಘಡದಲ್ಲಿರುವ ಕಲ್ಲಿದ್ದಲಿನ ಪ್ರಾಧಿಕಾರಗಳೂ ಸಾಕಷ್ಟು ಸಹಕಾರ ನೀಡಿವೆ. ಕೇಂದ್ರ ಮೋದಿ ಸರ್ಕಾರ ಈ ನಿಟ್ಟಿನಲ್ಲಿ ನೆರವಾಗಿದೆ. ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿಯವರು ರಾಜಸ್ಥಾನದ ವಿದ್ಯುತ್ ಬರ ನೀಗಿಸುವಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುತ್ತಾ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, ರಾಜಸ್ಥಾನದ (Rajasthan) ಸೋಲಾರ್ ಪಾರ್ಕ್ ಯೋಜನೆಯಡಿ ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಾಗುವುದು. ಕೋಲ್ ಇಂಡಿಯಾ ಲಿ. ಸಂಕಲ್ಪಿತ ಗ್ಯಾಸಿಫಿಕೇಶನ್ ಮೂಲಕ ಪರಿಸರ ಸ್ನೇಹಿ ಪರಿಶುದ್ಧ ಸೋಲಾರ್ ವಿದ್ಯುತ್ ಉತ್ಪಾದನಾ ಪ್ರಕ್ರಿಯೆ ಜಾರಿಗೆ ತರಲಾಗಿದೆ. ನಮ್ಮ ದೇಶ ಮುಂದಿನ 50 ವರ್ಷಗಳಿಗೆ ಸಾಕಾಗುವಷ್ಟು ಕಲ್ಲಿದ್ದಲು ನಿಕ್ಷೇಪ ಹೊಂದಿದೆ. ಈ ಕಲ್ಲಿದ್ದಲನ್ನು ಪರಿಸರ ಸ್ನೇಹಿಯಾಗಿ ಬಳಸಲು ಉದ್ದೇಶಿಸಲಾಗಿದೆ ಎಂದರು. ಇದನ್ನೂ ಓದಿ: ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ – ಗುಜರಾತ್ ಎಎಪಿ ಮುಖ್ಯಸ್ಥ ಪೊಲೀಸ್ ವಶಕ್ಕೆ
ತಿಳಿವಳಿಕೆ ಪತ್ರಕ್ಕೆ ರಾಜಸ್ಥಾನದ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕುಮಾರ್ ಶರ್ಮಾ, ಕೋಲ್ ಇಂಡಿಯಾ ಲಿ. ಸಂಸ್ಥೆಯ ಅಧ್ಯಕ್ಷ ಪ್ರಮೋದ್ ಅಗರವಾಲ್ ಹಾಗೂ ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ್ ಜೋಶಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಮ್ಮುಖದಲ್ಲಿ ಅಂಕಿತ ಹಾಕಲಾಯಿತು.


