ನವದೆಹಲಿ: ಎಐಸಿಸಿ (AICC) ಅಧ್ಯಕ್ಷ ಸ್ಥಾನಕ್ಕೆ ಶೀಘ್ರವೇ ಚುನಾವಣೆ (Election) ನಡೆಯಲಿದೆ. ಗಾಂಧಿ ಕುಟುಂಬಯೇತರ ವ್ಯಕ್ತಿ ಈ ಬಾರಿ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷದ ನೇತೃತ್ವ ವಹಿಸಿಕೊಳ್ಳುತ್ತಿದ್ದಾರೆ. ಕೈ ಪಕ್ಷದ (Congress) ಅನೇಕ ನಾಯಕರು ಕಾಂಗ್ರೆಸ್ ಸರ್ವೋನ್ನತ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಈ ನಡುವೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದ್ದು, ಸೆಪ್ಟೆಂಬರ್ 28 ರಂದು ಅವರು ನಾಮಪತ್ರವನ್ನು ಸಲ್ಲಿಸಲಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ (Congress Presidential Election) ಅಶೋಕ್ ಗೆಹ್ಲೋಟ್‌ಗೆ ಸೋನಿಯಾ ಗಾಂಧಿ ಬೆಂಬಲವೂ ಇದೆ ಎನ್ನಲಾಗಿದೆ. ಅವರು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ತಾರೋ ಇಲ್ಲವೋ ಎನ್ನುವುದು ಮತದಾನದ ಬಳಿಕವೇ ತಿಳಿಯಲಿದೆ. ಆದರೆ ರಾಜಸ್ಥಾನದ ಜೋಧ್‌ಪುರದಲ್ಲಿ ಹುಟ್ಟಿ, ವೈದ್ಯನಾಗಬೇಕೆಂದುಕೊಂಡಿದ್ದ ಹುಡುಗನೊಬ್ಬ ಕಾಂಗ್ರೆಸ್ ಸೇರಿ ಮುಖ್ಯಮಂತ್ರಿ ಹುದ್ದೆಗೇರಿ ಈಗ ಕಾಂಗ್ರೆಸ್ ಉನ್ನತ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದು ಅವರ ಬೆಳವಣಿಗೆ ಕುತೂಹಲಕಾರಿಯಾಗಿದೆ.
Advertisement
Advertisement
ಅಶೋಕ್ ಗೆಹ್ಲೋಟ್ ಮೇ 3, 1951 ರಂದು ಜೋಧ್‌ಪುರದಲ್ಲಿ ಜನಿಸಿದರು. ತಂದೆ ಲಕ್ಷ್ಮಣ್ ಸಿಂಗ್ ಗೆಹ್ಲೋಟ್ ಓರ್ವ ಜಾದೂಗಾರರಾಗಿದ್ದರು. ಗೆಹ್ಲೋಟ್ ಅವರ ಆರಂಭಿಕ ಶಿಕ್ಷಣವು ಜೋಧ್‌ಪುರದಲ್ಲಿ ಮುಗಿಯಿತು. ಬಳಿಕ ತಂದೆಯಿಂದ ಜಾದೂ ಕಲಿತು, ಅವರೊಂದಿಗೆ ಹಲವು ಕಡೆ ಕಾರ್ಯಕ್ರಮಗಳನ್ನೂ ನಡೆಸಿಕೊಟ್ಟರು. ಶಿಕ್ಷಣ ಮುಂದುವರಿಸಿದ ಅವರು ವಿಜ್ಞಾನ ಪದವೀಧರರಾದರು. ಅಲ್ಲದೇ ಎಲ್‌ಎಲ್‌ಬಿ ಮಾಡುವುದರ ಜೊತೆಗೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ವಿದ್ಯಾರ್ಥಿಯಾಗಿರುವಾಗಲೇ ಗೆಹ್ಲೋಟ್ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ಎನ್‌ಎಸ್‌ಯುಐನೊಂದಿಗೆ ರಾಜಕೀಯ ಇನ್ನಿಂಗ್ಸ್ ಆರಂಭಿಸಿದರು. ಅಲ್ಲಿಂದ ಅವರು ಹಿಂತಿರುಗಿ ನೋಡಲಿಲ್ಲ.
Advertisement
Advertisement
ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಗೆಹ್ಲೋಟ್ ಅವರನ್ನು 1973 ರಲ್ಲಿ ರಾಜಸ್ಥಾನ ಎನ್‌ಎಸ್‌ಯುಐ ನ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು. 1979 ರ ವರೆಗೆ ಈ ಹುದ್ದೆಯಲ್ಲಿ ಜವಾಬ್ದಾರಿ ನಿಭಾಯಿಸಿದ ಅವರಿಗೆ 1979 ರಲ್ಲಿ ಜೋಧ್‌ಪುರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಮಾಂಡ್ ನೀಡಲಾಯಿತು. ಈ ಅವಕಾಶವನ್ನು ಬಳಸಿಕೊಂಡ ಅವರು ನಿಜವಾದ ರಾಜಕೀಯ ಮ್ಯಾಜಿಕ್ ತೋರಿಸಲು ಆರಂಭಿಸಿದರು. ಇದನ್ನು ಗಮನಿಸಿದ ಹೈಕಮಾಂಡ್ 1982 ರಲ್ಲಿ ರಾಜಸ್ಥಾನ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿತು. ಇದನ್ನೂ ಓದಿ: ಅ.1 ರಿಂದ ದೇಶದಲ್ಲಿ 5G ಸೇವೆ ಆರಂಭ – ಮೋದಿ ಚಾಲನೆ
3 ಬಾರಿ ರಾಜ್ಯಾಧ್ಯಕ್ಷ:
ಅಶೋಕ್ ಗೆಹ್ಲೋಟ್ ತಮ್ಮ 34ನೇ ವಯಸ್ಸಿನಲ್ಲಿ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾದರು. ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ 3 ಬಾರಿ ಸೇವೆ ಸಲ್ಲಿಸಿದ್ದರು. ಸೆಪ್ಟೆಂಬರ್ 1985 ರಿಂದ ಜೂನ್ 1989 ರ ವರೆಗೆ ಮೊದಲ ಬಾರಿಗೆ, ಡಿಸೆಂಬರ್ 1994 ರಿಂದ ಜೂನ್ 1997 ರ ವರೆಗೆ 2ನೇ ಬಾರಿಗೆ ಮತ್ತು 1997 ರಿಂದ ಏಪ್ರಿಲ್ 14, 1999 ರವರೆಗೆ 3ನೇ ಬಾರಿಗೆ ರಾಜ್ಯಧ್ಯಕ್ಷರಾಗಿ ಆಯ್ಕೆಯಾಗಿದ್ದರು.
5 ಬಾರಿ ಸಂಸದರಾಗಿ ಆಯ್ಕೆ:
1977 ರಲ್ಲಿ ಅಶೋಕ್ ಗೆಹ್ಲೋಟ್ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದರು. ಮೊದಲು ಸರ್ದಾರ್‌ಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರು. ಆದರೆ ರಾಜಕೀಯ ಇನ್ನಿಂಗ್ಸ್‌ನ ಮೊದಲ ಹೋರಾಟದಲ್ಲಿ ಸೋಲನ್ನೊಪ್ಪಿದರು. 2 ವರ್ಷಗಳ ನಂತರ, 1779 ರಲ್ಲಿ, ಗೆಹ್ಲೋಟ್ ಜೋಧ್‌ಪುರ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಮರು ಪ್ರವೇಶಿಸಿದರು. ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. 1980-84ರಲ್ಲಿ ಮೊದಲ ಬಾರಿಗೆ ಸಂಸದರಾದರು. ಇದಾದ ನಂತರ 1984-1989, 1991-96, 1996-98 ಮತ್ತು 1998-1999ರಲ್ಲಿ ಜೋಧ್‌ಪುರದಿಂದ ಸಂಸದರಾಗಿದ್ದರು.
5 ಬಾರಿ ಶಾಸಕರಾಗಿ ಆಯ್ಕೆ:
1999 ರಲ್ಲಿ ಅಶೋಕ್ ಗೆಹ್ಲೋಟ್ ಜೋಧ್‌ಪುರದ ಸರ್ದಾರ್‌ಪುರ ವಿಧಾನಸಭಾ ಸ್ಥಾನದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಇದಾದ ನಂತರ 2003, 2008, 2013 ಮತ್ತು 2018ರಲ್ಲಿ ಇದೇ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಶಾಸಕರಾದರು. ಇದನ್ನೂ ಓದಿ: ಭಾರತದಲ್ಲಿ ಇಸ್ಲಾಮಿಕ್ ಆಡಳಿತ ಸ್ಥಾಪನೆಗೆ ಯುವಕರು ಉಗ್ರ ಸಂಘಟನೆ ಸೇರಲು PFIನಿಂದ ಪ್ರೋತ್ಸಾಹ – NIA
ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಸೇವೆ:
ಅಶೋಕ್ ಗೆಹ್ಲೋಟ್ ಅವರು ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಪಿ.ವಿ ನರಸಿಂಹರಾವ್ ಅವರ ಸರ್ಕಾರಗಳಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇಂದಿರಾ ಗಾಂಧಿ ಸರ್ಕಾರದಲ್ಲಿ 2 ಸೆಪ್ಟೆಂಬರ್ 1982 ರಿಂದ 7 ಫೆಬ್ರವರಿ 1984 ರವರೆಗೆ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಉಪ ಮಂತ್ರಿಯಾಗಿದ್ದರು. 7 ಫೆಬ್ರವರಿ 1984 ರಿಂದ 31 ಅಕ್ಟೋಬರ್ 1984 ಮತ್ತು 12 ನವೆಂಬರ್ 1984 ರಿಂದ 31 ಡಿಸೆಂಬರ್ 1984 ರವರೆಗೆ ಅವರು ಕ್ರೀಡಾ ಉಪ ಮಂತ್ರಿಯೂ ಆಗಿದ್ದರು. ಗೆಹ್ಲೋಟ್ ಅವರು 31 ಡಿಸೆಂಬರ್ 1984 ರಿಂದ 26 ಸೆಪ್ಟೆಂಬರ್ 1985 ರವರೆಗೆ ಕೇಂದ್ರ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದರು. 21 ಜೂನ್ 1991 ರಿಂದ 18 ಜನವರಿ 1993 ರವರೆಗೆ ಅವರು ಕೇಂದ್ರ ಜವಳಿ ರಾಜ್ಯ ಸಚಿವರಾಗಿದ್ದರು.
3 ಬಾರಿ ರಾಜಸ್ಥಾನದ ಮುಖ್ಯಮಂತ್ರಿ:
ಅಶೋಕ್ ಗೆಹ್ಲೋಟ್ 3 ಬಾರಿ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದಾರೆ. ಮೊದಲು ಅವರು 1998 ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 2003 ರವರೆಗೆ ಮುಖ್ಯಮಂತ್ರಿಯಾಗಿದ್ದರು. 2008ರಲ್ಲಿ 2ನೇ ಬಾರಿಗೆ ಮುಖ್ಯಮಂತ್ರಿಯಾದ ಅವರು 2013 ರ ವರೆಗೆ ಈ ಹುದ್ದೆಯಲ್ಲಿದ್ದರು. 2018 ರಲ್ಲಿ 3ನೇ ಬಾರಿ ಮುಖ್ಯಮಂತ್ರಿಯಾದ ಅವರು ಸದ್ಯ ಅದೇ ಸ್ಥಾನದಲ್ಲಿದ್ದಾರೆ. ಇದಲ್ಲದೆ, ಗೆಹ್ಲೋಟ್ ಅವರು ಜೂನ್ 1989 ಮತ್ತು ನವೆಂಬರ್ 1989 ರ ನಡುವೆ ರಾಜಸ್ಥಾನ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರು ಗೃಹ ಮತ್ತು ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ವಿಭಾಗವನ್ನು ಹೊಂದಿದ್ದರು.
ಕಾಂಗ್ರೆಸ್ ಪಕ್ಷದಲ್ಲಿಯೂ ಪ್ರಮುಖ ಸ್ಥಾನಮಾನ:
ಗೆಹ್ಲೋಟ್, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ವಿಶೇಷ ಆಹ್ವಾನಿತ ಸದಸ್ಯರನ್ನಾಗಿ ಜನವರಿ 2004 ರಿಂದ ಜುಲೈ 2004 ರವರೆಗೆ ಆಯ್ಕೆ ಮಾಡಲಾಯಿತು. ಈ ಅವಧಿಯಲ್ಲಿ ಹಿಮಾಚಲ ಮತ್ತು ಛತ್ತೀಸ್‌ಗಢದ ರಾಜ್ಯ ಉಸ್ತುವಾರಿಯೂ ಆಗಿದ್ದರು. ಜುಲೈ 2004 ರಲ್ಲಿ ಅವರನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಯಿತು. 18 ಫೆಬ್ರವರಿ 2009 ರವರೆಗೆ ಈ ಹುದ್ದೆಯಲ್ಲಿ ಅವರು ಕೆಲಸ ಮಾಡಿದರು. ಉತ್ತರ ಪ್ರದೇಶ, ದೆಹಲಿ, ಕಾಂಗ್ರೆಸ್ ಘಟಕಗಳು ಮತ್ತು ಸೇವಾದಳದ ಉಸ್ತುವಾರಿಯೂ ಆಗಿದ್ದರು. 30 ಮಾರ್ಚ್ 2018 ರಂದು ಅವರನ್ನು ಮತ್ತೊಮ್ಮೆ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಯಿತು.
28ರಂದು ಗೆಹ್ಲೋಟ್ ನಾಮಪತ್ರ:
ಅಪಾರ ರಾಜಕೀಯ ಅನುಭವ ಹೊಂದಿರುವ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸೆಪ್ಟೆಂಬರ್ 28 ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಸೆಪ್ಟೆಂಬರ್ 30 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದೆ. 19 ರಂದು ಮತ ಎಣಿಕೆ ನಡೆಯಲಿದ್ದು, ಅದೇ ದಿನ ಕಾಂಗ್ರೆಸ್‌ನ ನೂತನ ಅಧ್ಯಕ್ಷರ ಹೆಸರೂ ಹೊರಬೀಳುವ ಸಾಧ್ಯತೆಗಳಿವೆ.
– ಶಬ್ಬೀರ್ ನಿಡಗುಂದಿ