ಲಕ್ನೋ: ಕಳೆದ ಕೆಲವು ದಿನಗಳ ಹಿಂದೆ ನಡೆದಿದ್ದ ಲಖೀಂಪುರ್ ಹಿಂಸಾಚಾರ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಪ್ರಕರಣದಲ್ಲಿ ನಿನ್ನೆ ಪೊಲೀಸರು ಬಂಧಿಸಿದ್ದ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆಶಿಶ್ ಮಿಶ್ರಾನನ್ನು ಹೆಚ್ಚಿನ ತನಿಖೆಗೆ ತಮ್ಮ ವಶಕ್ಕೆ ನೀಡುವಂತೆ ಎಸ್‍ಐಟಿ ತಂಡ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಾಳೆ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.
ನಿನ್ನೆ ವಿಚಾರಣೆಗೆ ಹಾಜರಾಗಿದ್ದ ಆಶಿಶ್ ಮಿಶ್ರಾ ಆರಂಭದಲ್ಲಿ ತನ್ನದೇನೂ ತಪ್ಪೇ ಇಲ್ಲ. ತಾನು ಘಟನೆ ನಡೆದ ಸ್ಥಳದಲ್ಲಿ ಇರಲೇ ಇಲ್ಲ ಎಂದು ವಾದಿಸಿದ್ದ. ಆದರೆ ಎಸ್‍ಐಟಿ ತಂಡ ಸೂಕ್ತ ಸಾಕ್ಷ್ಯಾಧಾರಗಳನ್ನು ಮುಂದಿಟ್ಟು ಸುದೀರ್ಘ 12 ತಾಸುಗಳ ವಿಚಾರಣೆ ನಡೆಸಿದ ಬಳಿಕ ಆತನನ್ನು ಬಂಧಿಸಿತು. ಕ್ರೈಂ ಬ್ರ್ಯಾಂಚ್ ಕಚೇರಿಯಲ್ಲಿ ಆಶಿಶ್ ಮಿಶ್ರಾ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲಾಯಿತು. ನ್ಯಾಯಾಲಯ ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಹಿರಿಯ ಪ್ರಾಸಿಕ್ಯೂಷನ್ ಅಧಿಕಾರಿ ಎಸ್.ಪಿ ಯಾದವ್ ಹೇಳಿದ್ದಾರೆ. ಇದನ್ನೂ ಓದಿ: ಚಾಲಕನ ಮೇಲೆ ದಾಳಿಯಾದಾಗ ನಿಯಂತ್ರಣ ತಪ್ಪಿ ಕಾರು ರೈತರ ಮೇಲೆ ಹರಿದಿದೆ: ಮಿಶ್ರಾ
ಕಳೆದ ಭಾನುವಾರ ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನುಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಹಿಂಸಾಚಾರ ಕೃತ್ಯ ನಡೆದಿದ್ದು, 8 ಜನ ಮೃತಪಟ್ಟಿದ್ದರು. ಸತ್ತವರಲ್ಲಿ ನಾಲ್ವರು ರೈತರಾಗಿದ್ದಾರೆ. ಮೂರು ಮಂದಿ ಬಿಜೆಪಿ ಕಾರ್ಯಕರ್ತರು ಮತ್ತು ಓರ್ವ ಪತ್ರಕರ್ತ ಸಾವನ್ನಪ್ಪಿದ್ದರು. ಉತ್ತರಪ್ರದೇಶದ ಲಖೀಂಪುರ್ ಖೇರಿಯಲ್ಲಿ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಮಗ ಮಹೀಂದ್ರ ಜೀಪ್ ಹತ್ತಿಸಿದ್ದಾರೆ ಎನ್ನುವುದರ ವೀಡಿಯೋ ಹರಿದಾಡುತ್ತಿತ್ತು. ಇದನ್ನೂ ಓದಿ: ಹತ್ಯೆ ಸ್ಥಳದಲ್ಲಿ ನನ್ನ ಮಗ ಇದ್ದಿದ್ದು ನಿಜವಾದ್ರೆ ರಾಜೀನಾಮೆ ನೀಡುತ್ತೇನೆ: ಅಜಯ್ ಮಿಶ್ರಾ
ಅತೀ ವೇಗದಲ್ಲಿದ್ದ ಮಹೀಂದ್ರ ಜೀಪನ್ನು ಕಪ್ಪು ಬಾವುಟ ಹಿಡಿದು ನಡೆದುಹೋಗ್ತಿದ್ದ ರೈತರ ಮೇಲೆ ಹತ್ತಿಸಲಾಗಿತ್ತು. ಆ ಜೀಪ್ ಹಿಂದೆ ಇನ್ನೊಂದು ಕಾರು ಕೂಡಾ ಅತೀ ವೇಗದಲ್ಲಿ ನುಗ್ಗಿದೆ. ಜೀಪ್ ಹತ್ತಿಸಿದ ಪರಿಣಾಮ ನಾಲ್ವರು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಆ ಜೀಪ್‍ನಿಂದ ಇಳಿದು ಓಡಿಹೋಗ್ತಿರುವ ದೃಶ್ಯವೂ ಲಭ್ಯ ಆಗಿತ್ತು. ಇದನ್ನೂ ಓದಿ: ಲಖೀಂಪುರದಲ್ಲಿ ನಾಲ್ವರು ರೈತರನ್ನು ಕೊಂದ ಪ್ರಕರಣ – ಇನ್ನೂ ಅರೆಸ್ಟ್ ಆಗಿಲ್ಲ ಮಂತ್ರಿ ಮಗ
ಲಖೀಂಪುರ್ ಖೇರಿ ಹಿಂಸಾಚಾರದ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‍ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತ್ತು.