ಓವರ್‌ಕಾನ್ಫಿಡೆನ್ಸ್‌ಗೆ ಇಂಗ್ಲೆಂಡ್‌ ಬಲಿ – ಕ್ರಿಕೆಟ್‌ ಅಭಿಮಾನಿಗಳಿಂದ ಫುಲ್‌ ಕ್ಲಾಸ್‌

Public TV
2 Min Read
ben stokes

ಬರ್ಮಿಂಗ್‌ಹ್ಯಾಮ್‌: ಆ್ಯಶಸ್ ಟೆಸ್ಟ್‌ ಸರಣಿಯ (Ashes Test Series) ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) 2 ವಿಕೆಟ್‌ಗಳ ರೋಚಕ ಜಯ ಸಾಧಿಸಿದ ಬೆನ್ನಲ್ಲೇ ಕ್ರಿಕೆಟ್‌ ಅಭಿಮಾನಿಗಳು ಇಂಗ್ಲೆಂಡ್‌ (England) ತಂಡವನ್ನು ಟೀಕಿಸಲು ಆರಂಭಿಸಿದ್ದಾರೆ. ಅತಿಯಾದ ಆತ್ಮವಿಶ್ವಾಸಕ್ಕೆ (Overconfidence) ಇಂಗ್ಲೆಂಡ್‌ ತಂಡ ಬಲಿಯಾಗಿದೆ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಕ್ರಿಕೆಟ್‌ ಅಭಿಮಾನಿಗಳು ಇಂಗ್ಲೆಂಡ್‌ ತಂಡವನ್ನು ತರಾಟೆಗೆ ತೆಗೆದುಕೊಳ್ಳಲು ಕಾರಣವಿದೆ. ಗೆಲುವಿಗೆ 281 ರನ್‌ಗಳ ಗುರಿಯನ್ನು ಪಡೆದ ಆಸ್ಟ್ರೇಲಿಯಾ 4ನೇ ದಿನದ ಅಂತ್ಯಕ್ಕೆ 3 ವಿಕೆಟ್‌ ನಷ್ಟಕ್ಕೆ 174 ರನ್‌ಗಳಿಸಿತ್ತು. ಕೊನೆಯ ದಿನ ಇನ್ನೂ 4.3 ಓವರ್‌ ಬಾಕಿ ಇರುವಂತೆ 8 ವಿಕೆಟ್‌ ಕಳೆದುಕೊಂಡು 282 ರನ್‌ ಹೊಡೆದು ರೋಚಕ ಜಯಗಳಿಸಿತು.

ಕೊನೆಯಲ್ಲಿ ಅಲೆಕ್ಸ್‌ ಕ್ಯಾರಿ 20 ರನ್‌, ನಾಯಕ ಪ್ಯಾಟ್‌ ಕಮ್ಮಿನ್ಸ್‌ 44 ರನ್‌, ನಥನ್‌ ಲಿಯಾನ್‌ 16 ರನ್‌ ಸಾಹಸದಿಂದ ಆಸ್ಟ್ರೇಲಿಯಾ ಗೆಲುವಿನ ನಗೆ ಬೀರಿತು.

ಮುಳುವಾಯಿತು ಅತಿಯಾದ ಆತ್ಮವಿಶ್ವಾಸ:
ಇಂಗ್ಲೆಡ್‌ ತಂಡ 8 ವಿಕೆಟ್‌ ನಷ್ಟಕ್ಕೆ 393 ರನ್‌ ಗಳಿಸಿದ್ದಾಗ ಮೊದಲ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತ್ತು. ಡಿಕ್ಲೇರ್‌ ಮಾಡಿಕೊಳ್ಳುವ ವೇಳೆ ಜೋ ರೂಟ್‌ 118 ರನ್‌, ಒಲಿ ರಾಬಿನ್‌ಸನ್‌ 17 ರನ್‌ ಗಳಿಸಿ ಕ್ರೀಸ್‌ನಲ್ಲಿ ಇದ್ದರು.

ಸಾಧಾರಣವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 500ಕ್ಕಿಂತಲೂ ಹೆಚ್ಚು ರನ್‌ ಗಳಿಸಿ ತಂಡಗಳು ಡಿಕ್ಲೇರ್‌ ಮಾಡಿಕೊಳ್ಳುತ್ತವೆ. ಆದರೆ ಇಂಗ್ಲೆಂಡ್‌ 393 ರನ್‌ಗಳಿಸಿದ್ದಾಗ ಡಿಕ್ಲೇರ್‌ ಮಾಡಿಕೊಂಡಿದ್ದು ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.  ಇದನ್ನೂ ಓದಿ: ಭಾರತ ತಂಡ ಪಾಕಿಸ್ತಾನಕ್ಕೆ ಬರದಿದ್ರೆ ನಾವೂ ಹೋಗಲ್ಲ – ಜಾವೆದ್‌ ಮಿಯಾಂದದ್‌

ಜೋ ರೂಟ್‌ ಶತಕ ಬಾರಿಸಿ ಉತ್ತಮ ಆಟ ಆಡುತ್ತಿದ್ದರು. ರೂಟ್‌ ಮತ್ತು ಒಲಿ ರಾಬಿನ್‌ಸನ್‌ ಮುರಿಯದ 9ನೇ ವಿಕೆಟಿಗೆ 43 ರನ್‌ ಜೊತೆಯಾಟವಾಡಿದ್ದರು. ಉತ್ತಮ ಜೊತೆಯಾಟ ನಡೆಯುತ್ತಿದ್ದಾಗ ಮತ್ತು ಕಡಿಮೆ ಸ್ಕೋರ್‌ ಇದ್ದಾಗ ಡಿಕ್ಲೇರ್‌ ಮಾಡಿಕೊಂಡಿದ್ದು ಸರಿಯಲ್ಲ. ತವರು ನೆಲದಲ್ಲಿ ಕಡಿಮೆ ರನ್‌ಗಳಿಸಿದರೂ ಜಯಗಳಿಸುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸವೇ ಇಂಗ್ಲೆಂಡ್‌ ತಂಡವನ್ನು ಮುಳುಗಿಸಿದೆ ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

ಸಂಕ್ಷಿಪ್ತ ಸ್ಕೋರ್‌
ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ 393/8 ಡಿಕ್ಲೇರ್‌
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ 386
ಇಂಗ್ಲೆಂಡ್‌ ಎರಡನೇ ಇನ್ನಿಂಗ್ಸ್‌ 273
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ 282/8

Share This Article