ಬೆಂಗಳೂರು: ಆರೋಗ್ಯ ಇಲಾಖೆಯ ಆಧಾರಸ್ತಂಭ ಆಶಾ ಕಾರ್ಯಕರ್ತೆಯರು ಇಂದು ಪುಟಾಣಿ ಕಂದಮ್ಮಗಳನ್ನು ಮಡಿಲಲ್ಲಿ ಹಾಕಿಕೊಂಡು ಬೀದಿಯಲ್ಲಿ ಪರದಾಡುವಂತಾಯ್ತು. ವೇತನ ಪರಿಷ್ಕರಣೆ ಸೇರಿದಂತೆ ನಾನಾ ಬೇಡಿಕೆ ಮುಂದಿಟ್ಟು ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಕಿಚ್ಚು ಹೆಚ್ಚಾಗಿದೆ.
ದೂರದೂರಿನಿಂದ ಬಂದಿರುವ ಆಶಾ ಕಾರ್ಯಕರ್ತೆಯರು ಪುಟಾಣಿ ಕಂದಮ್ಮಗಳನ್ನು ಕರೆದುಕೊಂಡು ಬಂದು ಪ್ರತಿಭಟನೆ ಮಾಡಿದರು. ಮಡಿಲಲ್ಲಿ ಕಂದಮ್ಮಗಳನ್ನು ಇಟ್ಟಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕನಿಷ್ಟ ವೇತನ, ದುಡಿದ ದುಡ್ಡನ್ನು ಕೊಡೋದಕ್ಕೆ ಆಗದಷ್ಟು ರಾಜ್ಯ ಹಾಗೂ ಕೇಂದ್ರ ಸರ್ಕಾರ ಬರಗೆಟ್ಟಿದೆಯೇ? ಮೋದಿ ಬೆಂಗಳೂರಿನಲ್ಲಿ ಇದ್ದಾರೆ. ನಮ್ಮ ಬೇಡಿಕೆ ಅವರಿಗೆ ತಲುಪಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
Advertisement
ಬೆಳ್ಳಂಬೆಳಗ್ಗೆ ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಕೆ.ಆರ್ ಸರ್ಕಲ್ ಮಾರ್ಗವಾಗಿ ತೆರಳುವವರಿಗೆ ಟ್ರಾಫಿಕ್ ಬಿಸಿ ಇಂದು ಕೊಂಚ ಜೋರಾಗಿಯೇ ತಟ್ಟಿದೆ. ಇಂದು ಎಲ್ಲೆಲ್ಲೂ ಗುಲಾಬಿ ರಂಗಿನ ಸೀರೆ ಧರಿಸಿ ಬಂದ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ. ಮಾಸಿಕ ವೇತನ 12 ಸಾವಿರ ರೂಪಾಯಿಗೆ ಆಗ್ರಹಿಸಿ ಹಾಗೂ ಹದಿನೈದು ತಿಂಗಳಿಂದ ಪ್ರೋತ್ಸಾಹ ಧನ ಬಾಕಿ ಬಿಡುಗಡೆಗೆ ಆಗ್ರಹಿಸಿ ರಾಜ್ಯಾದ್ಯಂತ ಇಂದು ಆಶಾ ಕಾರ್ಯಕರ್ತೆಯರು ಬೀದಿಗಿಳಿದಿದ್ದರು.
Advertisement
ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್‍ವರೆಗೆ ಕಾಲ್ನಡಿಗೆಯಲ್ಲಿಯೇ ಸುಮಾರು ಹತ್ತು ಸಾವಿರ ಮಂದಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಇದರಿಂದ ಬೆಂಗಳೂರು ಟ್ರಾಫಿಕ್ ಜಾಮ್‍ಗೆ ಸಿಲುಕಿ ಹೈರಾಣಾಯ್ತು.
Advertisement
ನೃಪತುಂಗ ರೋಡ್, ಆನಂದ್ ರಾವ್ ಸರ್ಕಲ್, ಶೇಷಾದ್ರಿಪುರಂ ರಸ್ತೆ, ಅರಮನೆ ಮೈದಾನದ ಮುಂಭಾಗದ ರಸ್ತೆ, ಕೆ.ಆರ್ ಸರ್ಕಲ್‍ನಲ್ಲಿ ವಾಹನ ಸವಾರರು ಭರ್ತಿ ಎರಡು ಮೂರು ಗಂಟೆಗಳ ಕಾಲ ಟ್ರಾಫಿಕ್‍ನಲ್ಲಿ ಸಿಲುಕಿಕೊಂಡರು. ಈ ಮಧ್ಯೆ ಅಂಬುಲೆನ್ಸ್ ಕೂಡ ಪರದಾಟ ಪಡುವಂತಾಯ್ತು.
ಆಶಾ ಕಾರ್ಯಕರ್ತೆಯರು ಆಹೋರಾತ್ರಿ ಧರಣಿಗೆ ನಿರ್ಧರಿಸಿದ್ದು, ಇಡೀ ಬೆಂಗಳೂರು ಟ್ರಾಫಿಕ್ ಬಿಸಿ ಅನುಭವಿಸಿದರೂ ಸರ್ಕಾರ ಮಾತ್ರ ತಲೆಕೆಡಿಸಿಕೊಳ್ಳದೇ ಕನಿಷ್ಠ ಅಹವಾಲನ್ನು ಸ್ವೀಕರಿಸಲು ಕೂಡ ಪ್ರತಿಭಟನಾ ಸ್ಥಳಕ್ಕೆ ಬರಲಿಲ್ಲ. ರಾತ್ರಿ ಹಾಗೂ ನಾಳೆ ಬೆಳಗ್ಗೆ ಫ್ರೀಡಂ ಪಾರ್ಕ್ ಮುಂಭಾಗದ ರಸ್ತೆಯಲ್ಲಿ ಆಶಾ ಕಾರ್ಯಕರ್ತೆಯರು ವಾಸ್ತವ್ಯ ಮಾಡೋದರಿಂದ ಇನ್ನಷ್ಟು ಟ್ರಾಫಿಕ್ ಬಿಸಿ ವಾಹನ ಸವಾರರಿಗೆ ತಟ್ಟಲಿದೆ.