Dakshina KannadaDistrictsKarnatakaLatestMain Post

ಚಂಡಮಾರುತದಿಂದ ಕರಾವಳಿಯಲ್ಲಿ ಮಳೆ ಆರ್ಭಟ – ತೀರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ

ಮಂಗಳೂರು: ಬಂದರು ನಗರಿ ಮಂಗಳೂರಿನಲ್ಲಿ ತಣ್ಣನೆಯ ಗಾಳಿ ಬೀಸುತ್ತಿದೆ. ಕರಾವಳಿ ಜಿಲ್ಲೆ ಉಡುಪಿಯಲ್ಲಿ ಅಕಾಲಿಕ ಮಳೆ ಶುರುವಾಗಿದೆ. ಬಿರು ಬೇಸಿಗೆಯಿಂದ ಬೆಂದಿದ್ದ ಉಭಯ ಜಿಲ್ಲೆಯಲ್ಲಿ ಮಳೆಗಾಲದ ವಾತಾವರಣ ಸೃಷ್ಟಿಯಾಗಿದೆ. ಅಸನಿ ಚಂಡಮಾರುತ ದೂರದೂರಿನ ಪ್ರವಾಸಿಗರಿಗೆ ಕಿರಿಕ್ ಕೊಟ್ಟಿದೆ.

ಬಂಗಾಳ ಕೊಲ್ಲಿಯಲ್ಲಿ ಉಂಟಾದ ಚಂಡಮಾರುತದ ಪರಿಣಾಮ ರಾಜ್ಯದ ಕರಾವಳಿ ಭಾಗದಲ್ಲಿ ಭಾರೀ ಮಳೆ ಆಗ್ತಿದೆ. ಗಾಳಿಯೂ ವೇಗವಾಗಿ ಬೀಸುತ್ತಿದೆ. ಸಾಲು ಸಾಲು ರಜೆಗಳ ನಡುವೆ ಮಂಗಳೂರಿಗೆ ಹೊರಟಿದ್ದ ಪ್ರವಾಸಿಗರಿಗೆ ನಿರಾಶೆಯಾಗಿದೆ. ಬೀಚ್ ಮತ್ತು ದೇವಸ್ಥಾನದ ಟೂರ್ ಪ್ಲಾನ್ ಮಾಡಿ ಬಂದವರು ದೇವರ ದರ್ಶನ ಮಾಡಿ ವಾಪಸ್ಸಾಗುತ್ತಿದ್ದಾರೆ.

ಜೋರು ಅಲೆಗಳಿರುವ ಕಾರಣ ವಾಟರ್ ಸ್ಟೋರ್ಸ್, ಸೈಂಟ್ ಮೇರಿಸ್ ಐಲ್ಯಾಂಡ್ ಹೋಗುವುದು ನಿಷೇಧ ಮಾಡಲಾಗಿದೆ. ಸಮುದ್ರದ ದೂರಕ್ಕೆ ಹೋಗಿ ಸ್ನಾನ ಮಾಡುವುದಕ್ಕೂ ನಿಷೇಧ ಮಾಡಲಾಗಿದೆ. ನಿಷೇಧ ಮಾಹಿತಿ ಇಲ್ಲದೇ ದೂರದ ಊರುಗಳಿಂದ ಪ್ರವಾಸಕ್ಕೆ ಅಂತ ರಜೆ ಹಾಕಿ ಮಲ್ಪೆ ಸಮುದ್ರ ತೀರಕ್ಕೆ ಬಂದವರು ನಿರಾಶೆ ವ್ಯಕ್ತಪಡಿಸುತ್ತಿದ್ದಾರೆ. ಹೋಟೆಲ್ ಬುಕ್ಕಿಂಗ್ ಕೂಡ ಕ್ಯಾನ್ಸಲ್ ಮಾಡುತ್ತಿದ್ದಾರೆ. ಹೆಚ್ಚು ದಿನ ಇದ್ದು ಎಂಜಾಯ್ ಮಾಡಬೇಕು ಅಂದುಕೊಂಡ ಪ್ರವಾಸಿಗರು, ತಮ್ಮ ಪ್ಲಾನ್ ಡ್ರಾಪ್ ಮಾಡಿ ತಮ್ಮ ಊರಿಗೆ ಹಿಂದಿರುಗುತ್ತಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಅಸಾನಿ ಚಂಡಮಾರುತದಿಂದಾಗಿ ಅಬ್ಬರದ ಮಳೆ ಸುರಿಯುತ್ತಿದೆ. ಜಿಲ್ಲೆಯ ಭಟ್ಕಳ, ಹೊನ್ನಾವರ, ಅಂಕೋಲಾ ಭಾಗದಲ್ಲಿ ಮಳೆ ಅಬ್ಬರಿಸುತ್ತಿದೆ. ಕರಾವಳಿ ಭಾಗದ ಕಡಲು ಪ್ರಕ್ಷುಬ್ದಗೊಂಡಿದೆ. ಕಳೆದ ಎರಡು ದಿನದಿಂದಲೂ ಕೆಂಡದಂತಿದ್ದ ಕರಾವಳಿ ಭಾಗದಲ್ಲಿ ಮಳೆ ತಂಪಾಗಿಸಿದೆ. ಅರಬ್ಬಿ ಸಮುದ್ರದಲ್ಲಿ ಆಳೆತ್ತರದ ಅಲೆಗಳು ಏಳುತಿದ್ದು ಆಳ ಸಮುದ್ರದ ಮೀನುಗಾರಿಕೆಯನ್ನು ಬಂದ್ ಮಾಡಲಾಗಿದೆ. ಇದನ್ನೂ ಓದಿ: ಅಸನಿ ಎಫೆಕ್ಟ್‌ನಿಂದ ಬಿಟ್ಟು ಬಿಡದೆ ಮಳೆ – ಡೆಂಗ್ಯೂ, ಮಲೇರಿಯಾ, ಗುನ್ಯಾ ಹೆಚ್ಚಳ ಭೀತಿ

ಸೈಕ್ಲೋನ್ ಎಫೆಕ್ಟ್ ಕೊಪ್ಪಳ ಮೇಲೂ ಬಿದ್ದಿದೆ. ಹನುಮನಹಳ್ಳಿ, ಭೀಮನೂರು, ಕುಟುಗನಹಳ್ಳಿ ಸೇರಿ ಹಲವೆಡೆ ತೋಟಗಾರಿಕಾ ಬೆಳೆಗಳು ಸಂಪೂರ್ಣ ನಾಶವಾಗಿದೆ. 12 ಎಕರೆಯಲ್ಲಿ ಬೆಳೆದಿದ್ದ ಮಾವು, 10ಕ್ಕೂ ಹೆಚ್ಚು ಎಕರೆಯಲ್ಲಿ ಬೆಳೆದಿದ್ದ ಪಪ್ಪಾಯಿ ಬೆಳೆ ನೆಲಕಚ್ಚಿದೆ. ಕುಷ್ಟಗಿ ತಾಲೂಕಿನ ಶೋ ರೂಮ್ ಗಾಜಿನ ಬಾಗಿಲು ಕಿತ್ತು ಹೋಗಿದೆ. ಹೊಸಪೇಟೆ ರಸ್ತೆಯಲ್ಲಿ ಕಾಮಗಾರಿಗಾಗಿ ಅಗೆದಿದ್ದ ಗುಂಡಿಯಲ್ಲಿ ನೀರು ತುಂಬಿ ಬಾಲಕಿಯೋರ್ವಳು ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾಳೆ.

ಕೋಲಾರ ಜಿಲ್ಲೆಯಲ್ಲೂ ಮಳೆ ಅಬ್ಬರಿಸುತ್ತಿದ್ದು, ಕೆಜಿಎಫ್ ತಾಲೂಕು ವೆಂಕಟಾಪುರ ಗ್ರಾಮದಲ್ಲಿ ಬಿರುಗಾಳಿಗೆ 130 ಎಕರೆ ಮಾವಿನ ತೋಟ ಹಾಗೂ ದೇವರಹಳ್ಳಿಯ ಗ್ರಾಮದ ಪಾಲಿಹೌಸ್ ಮತ್ತು ಕ್ಯಾಪ್ಸಿಕಂ ನೆಟ್‍ಹೌಸ್ ಸಂಪೂರ್ಣ ಹಾನಿ ಆಗಿದೆ.

Leave a Reply

Your email address will not be published.

Back to top button