ಲಕ್ನೋ: ಬಿಜೆಪಿ ಆಡಳಿತದಲ್ಲಿ ಮುಸ್ಲಿಮರು ಎಂದಿಗೂ ಸುರಕ್ಷಿತರಾಗಿರಲು ಸಾಧ್ಯವಿಲ್ಲ ಎಂದು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವೇ ತಿಂಗಳಷ್ಟೇ ಬಾಕಿಯಿದ್ದು, ಎಲ್ಲಾ ರಾಜಕೀಯ ಪಕ್ಷಗಳು ರ‍್ಯಾಲಿ ವೇಳೆ ವಾಕ್ಚಾತುರ್ಯ, ಯೋಜನೆಗಳ ಬಗ್ಗೆ ಮತ್ತು ಪ್ರತಿಸ್ಪರ್ಧಿಗಳನ್ನು ಕೆಣಕುವ ಮೂಲಕ ಮತದಾರರನ್ನು ತಮ್ಮ ಸೆಳೆಯಲು ಪ್ರಯತ್ನಿಸುತ್ತಿವೆ. ಇದನ್ನೂ ಓದಿ: 18ನೇ ವಯಸ್ಸಿಗೆ ಪ್ರಧಾನಿಯನ್ನೇ ಆಯ್ಕೆ ಮಾಡುವ ಹೆಣ್ಣಿಗೆ ಬಾಳ ಸಂಗಾತಿ ಹೊಂದುವ ಹಕ್ಕು ಯಾಕಿಲ್ಲ: ಓವೈಸಿ ಪ್ರಶ್ನೆ
ಈ ಮಧ್ಯೆ ಅಸಾದುದ್ದೀನ್ ಓವೈಸಿ ಅವರು ಸಹ ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಮುಸ್ಲಿಮರಿಗೆ ತಮ್ಮದೇ ಆದ ರಾಜಕೀಯ ಶಕ್ತಿಬೇಕಾಗಿದೆ. ನಾಯಕತ್ವವನ್ನು ಗೌರವಿಸಬೇಕು ಮತ್ತು ತಾರತಮ್ಯ ಮಾಡಬಾರದು ಎಂದು ಸ್ಪಷ್ಟವಾದ ಸಂದೇಶವನ್ನು ರವಾನಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಮುಸ್ಲಿಮರು ಎಂದಿಗೂ ಸುರಕ್ಷಿತರಾಗಿರಲು ಸಾಧ್ಯವಿಲ್ಲ. ಬಿಜೆಪಿಯ ಕಾರಣದಿಂದಾಗಿ ಮುಸ್ಲಿಮರನ್ನು ಅನುಮಾನದಿಂದ ನೋಡಲಾಗುತ್ತದೆ. ಬಿಜೆಪಿಯು ಮುಸ್ಲಿಂ ಸಮುದಾಯದ ವ್ಯವಹಾರಗಳನ್ನು ನಾಶಪಡಿಸುತ್ತಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಲ್ಲಿದೆ. ಜ್ಞಾನವಾಪಿ ಮಸೀದಿ ಮತ್ತು ಅಜ್ಮೀರ್ ದರ್ಗಾವನ್ನು ಸರ್ಕಾರ ಏಕೆ ಅಭಿವೃದ್ಧಿಪಡಿಸುತ್ತಿಲ್ಲ? ಎಂದು ಪ್ರಶ್ನಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹೆಣ್ಣುಮಕ್ಕಳ ವಿವಾಹದ ವಯಸ್ಸು 18ರಿಂದ 21ಕ್ಕೆ ಏರಿಕೆ – ಕೇಂದ್ರ ಸಂಪುಟ ಅನುಮೋದನೆ
ಈ ಮುನ್ನ ಉತ್ತರ ಪ್ರದೇಶದ ಮೀರತ್‍ನ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಸ್ಲಿಮರು ಯಾವಾಗ ಎಚ್ಚುತ್ತುಕೊಳ್ಳುತ್ತೀರಾ ಎಂದು ನಾನು ನಿಮ್ಮೆಲ್ಲರನ್ನು ಕೇಳಲು ಬಯಸುತ್ತೇನೆ. ಉತ್ತರ ಪ್ರದೇಶದಲ್ಲಿರುವ ಶೇಕಡ 19ರಷ್ಟು ಮುಸ್ಲಿಮರಿಗೆ ಗೌರವ, ನಮ್ಮ ಯುವಕರಿಗೆ ಶಿಕ್ಷಣ, ಸಮಾನ ಭಾಗವಹಿಸುವಿಕೆ ಮತ್ತು ಅವಕಾಶಗಳನ್ನು ಪಡೆಯಲು ತಮ್ಮದೇ ಆದ ರಾಜಕೀಯ ಶಕ್ತಿ, ನಾಯಕತ್ವಬೇಕು ಎಂದು ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತಿದ್ದೇನೆ ಎಂದು ಹೇಳಿದ್ದರು.