ವಿಜಯಪುರ: ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಪ್ಪನ ಮನೆಯ ಆಸ್ತಿಯಲ್ಲ, ಇದು ಕನ್ನಡಿಗರ ಆಸ್ತಿ ಎಂದು ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ವಾಗ್ದಾಳಿ ನಡೆಸಿದ್ದಾರೆ.
ತಾಳಿಕೋಟೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, ಬೆಂಗಳೂರಿನಿಂದ ಬರುವ ಆದಾಯದಲ್ಲಿ ಶೇಕಡಾ 60ರಷ್ಟು ಉತ್ತರ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಹಾಗಾದರೆ ಬೆಂಗಳೂರು ಅವರ ಆಸ್ತಿಯೇ, ಕನ್ನಡಿಗರಿಗೆ ಸೇರಿಲ್ಲವೇ ಎಂದು ಪ್ರಶ್ನಿಸಿ, ಉತ್ತರ ಕರ್ನಾಟಕದ ಸುಮಾರು 12 ಲಕ್ಷ ಜನರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾಜಿ ಸಿಎಂ ಧರ್ಮಸಿಂಗ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯಲು ನಾನೇ ಕಾರಣವೆಂದು ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ. ಅವರಷ್ಟೇ ಅಲ್ಲದೆ ಉತ್ತರ ಕರ್ನಾಟಕದ ಅನೇಕ ನಾಯಕರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುವಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬದವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಿದರು.
ಅಭಿವೃದ್ಧಿಯಾಗಬೇಕೆಂದು ಜನತೆ ಕೇಳಿದ್ದು ಕುಮಾರಸ್ವಾಮಿಯನ್ನಲ್ಲ, ನಾಡಿನ ಮುಖ್ಯಮಂತ್ರಿಯನ್ನು. ಆದರೆ ಇದಕ್ಕೆ ಸೂಕ್ತ ಉತ್ತರ ನೀಡದೆ, ಉತ್ತರ ಕರ್ನಾಟಕದ ಜನತೆ ನಮಗೆ ಮತ ಹಾಕಿಲ್ಲವೆಂದು ಅವರು ಹೇಳಿದ್ದು ಸರಿಯಲ್ಲ. ಹೀಗೆ ಮಾತನಾಡುವ ಮೂಲಕ ಪ್ರತ್ಯೇಕತೆ ಬೇಡಿಕೆಗೆ ಕುಮ್ಮಕ್ಕು ನೀಡುತ್ತಿದ್ದು, ತಮ್ಮ ಮನಸ್ಸಿನಲ್ಲಿರುವ ಕರ್ನಾಟಕ ಇಬ್ಭಾಗವಾಗಬೇಕೆಂಬ ಆಸೆಯನ್ನು ಹೊರಹಾಕಿದ್ದಾರೆ ಎಂದು ಆರೋಪಿಸಿದರು.