ನವದೆಹಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ಅವರು ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಡ್ಯಾನ್ಸ್ ವೀಡಿಯೋ ನೋಡಿ ಶರ್ಮಾ ಅವರು ಕಿಡಿಕಾರಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅಸ್ಸಾಂ ಸಿಎಂ, ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗವೊಂದರಲ್ಲಿ ¸ಸಿಲುಕಿಕೊಂಡ 41 ಮಂದಿ ಕಾರ್ಮಿಕರನ್ನು ಹೊರತರುವ ಪ್ರಯತ್ನ ನಡೆಯುತ್ತಿತ್ತು. ಈ ಕಾರ್ಯಾಚರಣೆಯ ವೇಳೆ ಇಡೀ ದೇಶದ ಜನ ಕಾರ್ಮಿಕರು ಸುರಕ್ಷಿತವಾಗಿ ಹೊರಬರುವಂತೆ ಪ್ರಾರ್ಥಿಸುತ್ತಿದ್ದರು. ಆದರೆ ಒಂದು ಕುಟುಂಬ ಮಾತ್ರ ಡ್ಯಾನ್ಸ್ ಮಾಡುವುದರಲ್ಲಿ ಮಗ್ನವಾಗಿತ್ತು ಎಂದು ಗರಂ ಆಗಿದ್ದಾರೆ.
26/11 ರ ಮುಂಬೈ ದಾಳಿ ಈ ತರ ಯಾವುದೇ ಗಂಭೀರವಾದ ಘಟನೆ ನಡೆದರೂ ಈ ಕುಟುಂಬ ಮಾತ್ರ ಅದಕ್ಕೆ ಕ್ಯಾರೇ ಅನ್ನಲ್ಲ. ಕೇವಲ ಮನರಂಜನೆಯನ್ನು ಮಾತ್ರ ಈ ಕುಟುಂಬ ಬಯಸುತ್ತದೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಕುಟುಂಬದ ವಿರುದ್ಧ ಶರ್ಮಾ ಅವರು ಹರಿಹಾಯ್ದರು.
ರಾಹುಲ್ ಗಾಂಧಿ (Rahul Gandhi) ಹಾಗೂ ಪ್ರಿಯಾಂಕಾ ಗಾಂಧಿ (Priyanka Gandhi) ಜೊತೆ ಇತರ ಕಾಂಗ್ರೆಸ್ ನಾಯಕರು ಡ್ಯಾನ್ಸ್ ಮಾಡುತ್ತಿರುವುದು ವೀಡಿಯೋದಲ್ಲಿ ಕಾಣಬಹುದಾಗಿದೆ. ಸದ್ಯ ಈ ಡ್ಯಾನ್ಸ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣೆಯಾಯ್ತು.. ದೇಗುಲಕ್ಕೆ ತೆರಳಿ ದೇವರಿಗೆ ಧನ್ಯವಾದ ಹೇಳ್ತೀನಿ: ಸುರಂಗ ತಜ್ಞ ಅರ್ನಾಲ್ಡ್
17 ದಿನಗಳ ಸತತ ಕಾರ್ಯಾಚರಣೆಯ ಬಳಿಕ ಮಂಗಳವಾರ ರಾತ್ರಿ ಸುರಂಗದೊಳಗಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಯಿತು. ಬಳಿಕ ಅವರನ್ನು ನೇರವಾಗಿ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ಮಾಡಲಾಗಿತ್ತು. ಎಲ್ಲಾ ಕಾರ್ಮಿಕರು ಆರೋಗ್ಯವಾಗಿದ್ದು, ಇಂದು ಮತ್ತೆ ಅವರನ್ನು ಹೆಚ್ಚಿನ ತಪಾಸಣೆಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.