– ಮೂಲ ಸೌಕರ್ಯವೇ ಅಭಿವೃದ್ಧಿ ಅಂದುಕೊಂಡ್ರೆ ನಮ್ಮಂತಹ ಮೂರ್ಖರು ಮತ್ತೊಬ್ಬರಿಲ್ಲ
– ಮತ್ತೆ ನಾಲಿಗೆ ಹರಿಬಿಟ್ಟ ಸಂಸದ
ಕಾರವಾರ: ಎಲ್ಲಿಯವರೆಗೆ ಇಸ್ಲಾಂ ಇರುತ್ತದೆಯೋ, ಅಲ್ಲಿಯವರೆಗೆ ಜಗತ್ತಿಗೆ ನೆಮ್ಮದಿಯಿಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ (Ananth Kumar Hegde) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Advertisement
ಬನವಾಸಿಯಲ್ಲಿ ನಡೆದ ಬಿಜೆಪಿ (BJP) ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಕಾಲಘಟ್ಟದಲ್ಲಿ ಹಿಂದೂ ಧರ್ಮ, ದೇಶ ಉಳಿಯಲು ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಬೇಕಾಗಿದೆ. ಬಿಜೆಪಿ ಮತ್ತು ಸಂಘ ಪರಿವಾರ ಇದ್ದಲ್ಲಿ ಜಗತ್ತಿಗೆ ನೆಮ್ಮದಿ ಸಿಗಲಿದೆ. ನಾವು ಇಲ್ಲದಿದ್ದರೆ ಜಗತ್ತಿನಲ್ಲಿ ನೆಮ್ಮದಿ ಇಲ್ಲ. ಹಿಂದುತ್ವವು ನಮ್ಮ ದೇಶದ ಉಸಿರಾಗಿದೆ. ಕಾಂಗ್ರೆಸ್‍ನವರು (Congress) ಲೋಕಸಭಾ ಚುನಾವಣೆಗೂ (Lok Sabha Election 2024) ಮುನ್ನ ಬಿಜೆಪಿಯ ಉತ್ಸಾಹ ನೋಡಿ ಶಸ್ತ್ರ ತ್ಯಜಿಸಿದ್ದಾರೆ. ವೈಚಾರಿಕವಾಗಿ ನಾವು ಚುನಾವಣೆ ಗೆದ್ದು ತೋರಿಸಬೇಕಿದೆ ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಕೆಲವೇ ಕ್ಷಣಗಳಲ್ಲಿ ಬಜೆಟ್ ಮಂಡನೆ – ಕೈ ಶಾಸಕರು ಕಾಂಗ್ರೆಸ್ ಪಕ್ಷದ ಶಾಲು ಧರಿಸಲು ಸೂಚನೆ!
Advertisement
Advertisement
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನಮ್ಮವರಿಗೆ ಏಕವಚನದಲ್ಲಿ ಮಾತನಾಡಿದ್ದು ನೋಡಿ ಸುಮ್ಮನಿರಲು ಸಾಧ್ಯವಿಲ್ಲ. ಅವರಿಗೆ ಮಗನೇ ಎನ್ನದೇ ಬೇರೆನು ಹೇಳಲು ಸಾಧ್ಯ? ಅಪ್ಪ ಅಂತಲೋ, ಅಜ್ಜ ಅಂತಲೋ, ಮಾಮಾ ಅಂತಲೋ ಕರೆಯಲು ಸಾಧ್ಯವೇ? ಯುದ್ಧ ಕಾಲದಲ್ಲಿ ಯಾವ ಭಾಷೆಯಲ್ಲಿ ಮಾತನಾಡಬೇಕೋ ಅದನ್ನೇ ಬಳಸಬೇಕು. ಅಲ್ಲಿ ಶಾಸ್ತ್ರೀಯ ಸಂಗೀತ ಬಳಸಲು ಸಾಧ್ಯವಿಲ್ಲ. ಮಸೀದಿಯ ಬಗ್ಗೆ ಹೇಳಿಕೆ ನೀಡಿದ್ದಕ್ಕೆ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಸಿಎಂಗೆ ಥ್ಯಾಂಕ್ಸ್ ಹೇಳಿದ್ದೇನೆ. ತುಂಬಾ ವರ್ಷ ಆಗಿತ್ತು, ಕೇಸ್ ಇರದೆ ಒಂದು ರೀತಿಯ ಮುಜುಗುರ ಉಂಟಾಗಿತ್ತು. ಏನೋ ಕಳೆದುಕೊಂಡಂತೆ ಅನಿಸುತ್ತಿತ್ತು. ಈಗ ಪುನಃ ಮತ್ತೆ ಬಂದ ಅನುಭವ ಆಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
Advertisement
ನನ್ನ ಅಧಿಕಾರವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಪ್ರಚಾರಕ್ಕಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಸಾಮಾಜಿಕ, ಸಾಂಸ್ಕೃತಿಕವಾಗಿ ಎಲ್ಲಾ ದೃಷ್ಠಿಯಿಂದ ಅಭಿವೃದ್ಧಿ ಹೊಂದಿದಾಗ ಮಾತ್ರ ಸಂಪೂರ್ಣ ಅಭಿವೃದ್ಧಿ ಹೊಂದಿದಂತೆ. ಕೇವಲ ಮೂಲ ಸೌಕರ್ಯವೇ ಅಭಿವೃದ್ಧಿ ಅಂದುಕೊಂಡರೆ ನಮ್ಮಂತಹ ಮೂರ್ಖರು ಮತ್ತೊಬ್ಬರಿಲ್ಲ ಎಂದು ಲೇವಡಿ ಮಾಡಿದ್ದಾರೆ.
ರಾಜಕೀಯ ಅಂದ್ಮೇಲೆ ವಲಸೆ ಪ್ರಕ್ರಿಯೆ ಸಹಜವಾಗಿರುವ ಸಂಗತಿ. ಇತ್ತೀಚಿನ ದಿನಗಳಲ್ಲಿ ಯಾವ ರೀತಿಯಲ್ಲಿ ರಾಜಕೀಯ ದೊಂಬರಾಟ ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಅದೆಲ್ಲವನ್ನೂ ಬದಿಗಿಟ್ಟು ಸಂಘಟನೆಯ ಕಡೆಗೆ ಗಮನಹರಿಸೋಣ. ಮುಂಬರುವ ಲೋಕಸಭಾ ಮಹಾ ಸಂಘರ್ಷದಲ್ಲಿ ನಾವೆಲ್ಲರೂ ಒಟ್ಟಾಗಿ ದುಡಿಯೋಣ ಎಂದು ಕಾರ್ಯಕರ್ತರಿಗೆ ಕರೆಕೊಟ್ಟಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಸಂಸತ್ತಿನಲ್ಲಿ ಒಂದೇ ಒಂದು ಪ್ರಶ್ನೆ ಕೇಳಿಲ್ಲ ಎಂಬ ವಿಚಾರವಾಗಿ, ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದ್ದಾರೆ. 17ನೇ ಲೋಕಸಭಾ ಅಧಿವೇಶನದಲ್ಲಿ ಒಟ್ಟು 18 ಪ್ರಶ್ನೆಗಳನ್ನು ಕೇಳಿದ್ದಾಗಿ ಅದರಲ್ಲಿ ಉಲ್ಲೇಖಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ಉದ್ಯೋಗಾವಕಾಶಗಳು, ವಿದ್ಯಾರ್ಥಿಗಳ ಪಠ್ಯಕ್ರಮ, ವಾಯು ಮಾಲಿನ್ಯ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುತ್ತಿರುವ ನ್ಯುಮೋನಿಯಾ, ಕ್ಯಾನ್ಸರ್ ಹಾಗೂ ಉಡಾನ ಯೋಜನೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದೇನೆ. ಲೋಕಸಭಾ ವೆಬ್‍ಸೈಟ್‍ನಲ್ಲಿ ಈ ಕುರಿತು ವಿಸ್ತ್ರತ ಮಾಹಿತಿ ಲಭ್ಯವಿದೆ. ಕೇಳಿದ ಪ್ರಶ್ನೆಗಳು ಹಾಗೂ ಅದಕ್ಕೆ ಸಚಿವರು ನೀಡಿದ ಉತ್ತರವನ್ನು ದಾಖಲೆ ಸಹಿತ ಸಾರ್ವಜನಿಕರು ವೀಕ್ಷಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಆನ್‌ಲೈನ್‌ನಲ್ಲೇ ಸಿಗಲಿದೆ ಮ್ಯಾರೇಜ್ ಸರ್ಟಿಫಿಕೇಟ್ – ಪಡೆಯೋದು ಹೇಗೆ?