ಮಂಡ್ಯ: ಅಂಬರೀಶ್, ನಾನು, ಅಭಿಷೇಕ್ ಕುಟುಂಬ ರಾಜಕೀಯ ಮಾಡಲ್ಲ. ನಾನು ರಾಜಕೀಯದಲ್ಲಿ ಇರುವವರೆಗೆ ಅಭಿಷೇಕ್ ರಾಜಕೀಯಕ್ಕೆ ಬರಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಬೆಂಬಲಿಗರು, ಅಂಬರೀಶ್ (Abhishek Ambareesh) ಅವರ ಅಭಿಮಾನಿಗಳಿಗೆ ಒಂದು ನೆಲೆಕೊಡಿಸಬೇಕು. ಆ ಜವಾಬ್ದಾರಿ ನನ್ನ ಮೇಲೆ ಇದೆ. ನಮ್ಮ ಪಕ್ಷಕ್ಕೆ ಸೇರಿ ಎಂದು ನನ್ನ ಎಲ್ಲಾ ಕಡೆಯಿಂದ ಆಹ್ವಾನ ಬಂದಿದೆ ಎಂದರು. ಇದನ್ನೂ ಓದಿ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನನ್ನ ಸಂಪೂರ್ಣ ಬೆಂಬಲ: ಸುಮಲತಾ
ನನ್ನ ಬೆಂಬಲಿಗರು ಸಭೆ ಮಾಡಿದ್ದಾರೆ. ನಾನು ಬೆಂಬಲಿಗರಿಗೆ ಹೇಳಿದ್ದೆ, ಒತ್ತಡಕ್ಕೆ ಮಣಿಯಬೇಡಿ, ನಿಮ್ಮ ಭವಿಷ್ಯವೂ ಬೇಕು. ನೋಡಿ ಮಂಡ್ಯ ಅಭಿವೃದ್ಧಿಗೆ ನನ್ನ ಕೈ ಜೋಡಿಸುತ್ತೀರಾ ಎಂದಿದ್ದೆ. ನಮ್ಮ ಕುಟುಂಬದಲ್ಲಿ ಕುಟುಂಬ ರಾಜಕೀಯ ಮಾಡಿಲ್ಲ. ಚಾಮುಂಡಿ ತಾಯಿ ಮೇಲೆ ಆಣೆ ನಾನು ಅಭಿಷೇಕ್‍ಗೆ ಟಿಕೆಟ್ ಕೊಡಿ ಎಂದು ಹೇಳಿಲ್ಲ ಎಂದು ಹೇಳಿದರು.
ನಾನು ರಾಜಕೀಯದಲ್ಲಿ ಇರುವವರೆಗೆ ಅಭಿಷೇಕ್ ರಾಜಕೀಯಕ್ಕೆ ಬರಲ್ಲ. ಎರಡು ಪಕ್ಷಗಳಿಂದ ಅಭಿಷೇಕ್‍ಗೆ ಮಂಡ್ಯ, ಮದ್ದೂರಿನಿಂದ ಆಹ್ವಾನ ಬಂದಿತ್ತು. ಅಭಿಷೇಕ್, ಈಗ ನಮ್ಮ ತಾಯಿ ಕೆಲಸ ಮಾಡ್ತಾ ಇದ್ದಾರೆ. ಅವರು ರಾಜಕೀಯ ಮಾಡಲಿ. ನಾನು ರಾಜಕೀಯಕ್ಕೆ ಬರಬೇಕು ಎಂದ್ರೆ ಒಂದು ಪಕ್ಷ ಸೇರಿ ಕಾರ್ಯಕರ್ತನಾಗಿ ದುಡಿದು ಚುನಾವಣೆಗೆ ನಿಲ್ಲುತ್ತೇನೆ ಎಂದು ಅಭಿ ಹೇಳಿದ್ದಾನೆ ಎಂದು ತಿಳಿಸಿದರು.
ಈ ವರ್ಷ ಅಭಿ ಮದುವೆ ಆಗ್ತಾನೆ. ಸಿನಿಮಾ ಮಾಡ್ತಾನೆ ಅಷ್ಟೇ. ಅಭಿಯನ್ನು ಸಿನಿಮಾಗೂ ನಾವು ತಂದಿಲ್ಲ. ಬೇರೆ ನಿರ್ಮಾಪಕರು ಬಂದು ಸಿನಿಮಾ ಮಾಡಿದ್ದು ಎಂದು ಮಗನ ಬಗ್ಗೆಯೂ ಸ್ಪಷ್ಟನೆ ನೀಡಿದರು.