ಶ್ರೀನಗರ: 31 ತಿಂಗಳ ಕಾಲ ಮುಚ್ಚಿದ್ದ ಜಮ್ಮು ಮತ್ತು ಕಾಶ್ಮೀರದ ಶಾಲೆಗಳು ಮತ್ತೆ ಪುನಾರಂಭವಾಗಿದೆ.
ಆಗಸ್ಟ್ 5, 2019 ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಯಿತು. ಅಲ್ಲದೆ ಈ ಪ್ರದೇಶಗಳ ಇಂಟರ್ನೆಟ್ ಸೇವೆಗೂ ಸಹ ನಿರ್ಬಂಧ ಹೇರಲಾಗಿತ್ತು. ಇದೇ ವೇಳೆ ಗಡಿ ಪ್ರದೇಶದಲ್ಲಿ ಭದ್ರತೆ ಮತ್ತು ಕೋವಿಡ್ ಹಿನ್ನೆಲೆ ಶಾಲೆಗಳನ್ನು ಮುಚ್ಚಲಾಗಿತ್ತು. ಪರಿಣಾಮ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕ್ಲಾಸ್ ಕೇಳಿಸಿಕೊಳ್ಳುವುದು ಕಷ್ಟವಾಗಿತ್ತು. ಆದರೆ 31 ತಿಂಗಳ ಎಲ್ಲ ಕಷ್ಟಗಳ ನಂತರ ಮತ್ತೆ ಶಾಲೆ ಪ್ರಾರಂಭವಾಗಿದ್ದು, ಲಕ್ಷಾಂತರ ಮಕ್ಕಳು ಸಂತೋಷಗೊಂಡಿದ್ದಾರೆ.
Advertisement
Advertisement
ಶ್ರೀನಗರದ ದೆಹಲಿ ಪಬ್ಲಿಕ್ ಸ್ಕೂಲ್‍ನಲ್ಲಿ, 9 ನೇ ತರಗತಿಯ ವಿದ್ಯಾರ್ಥಿ ಖಾರಿಯಾ ತಮ್ಮ ಶಾಲೆ ಮತ್ತೆ ಆರಂಭವಾದ ಕುರಿತು ಮಾತನಾಡಿದ್ದಾರೆ. ಈ ವೇಳೆ ಅವರು, ಯಾವುದೇ ಸ್ನೇಹಿತರು ನನ್ನನ್ನು ಗುರುತಿಸುತ್ತಿಲ್ಲ. ನಾನು ನನ್ನ ಬಸ್ ಸಂಖ್ಯೆ, ನನ್ನ ತರಗತಿ ಯಾವುದು ಎಂಬುದನ್ನೆ ಮರೆತಿದ್ದೇನೆ. ಈಗ ನಾನು ನನಗೆ ನೆನಪಿರುವ ಯಾರನ್ನಾದರೂ ಹುಡುಕಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದನು.
Advertisement
Advertisement
ಶ್ರೀನಗರದ ದೆಹಲಿ ಪಬ್ಲಿಕ್ ಸ್ಕೂಲ್‍ನಲ್ಲಿ 4,500 ವಿದ್ಯಾರ್ಥಿಗಳಿದ್ದು, ಅವರಿಗೆ ಭವ್ಯ ಸ್ವಾಗತವನ್ನು ಏರ್ಪಡಿಸಲಾಗಿತ್ತು. ಪುನರಾರಂಭದ ಮೊದಲ ವಾರವನ್ನು ಎಲ್ಲ ಶಾಲೆಗಳು ‘ಸಂತೋಷದ ವಾರ’ ಎಂದು ಘೋಷಿಸಲಾಗಿದೆ.
ಶಿಕ್ಷಕ ಸೈಯದ್ ಸುಮೈರಾ ಈ ಕುರಿತು ಮಾತನಾಡಿದ್ದು, 31 ತಿಂಗಳ ನಂತರ ನಾನು ಇಂದು ಜೀವಂತವಾಗಿದ್ದೇನೆ. ನಾವು ಬದುಕಿದ್ದೇವೆ. ನಾನು ಮತ್ತೆ ಇತರ ಶಿಕ್ಷಕರು ಯಾವುದೇ ರೀತಿ ವಿರಾಮ ತೆಗೆದುಕೊಳ್ಳದೆ ಶಾಲೆಗೆ ಬರುತ್ತಿದ್ದೆವು. ಆದರೆ ಮಕ್ಕಳಿಲ್ಲದೆ ಶಾಲೆ ದೆವ್ವದ ಮನೆಯಂತೆ ಕಾಣುತ್ತಿತ್ತು. ನಮ್ಮ ಕಣ್ಣಿಗೆ ಶಾಲೆಯ ಕಟ್ಟಡ ಭಯಾನಕವಾಗಿ ಕಾಣುತ್ತಿತ್ತು. ಆದರೆ ಇಂದು ಶಾಲೆಗೆ ಜೀವ ಬಂದಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಶಾಲೆಯನ್ನು ಮುಚ್ಚಿದ ಪರಿಣಾಮ ಶಿಕ್ಷಣದ ಜೊತೆಗೆ ಮಕ್ಕಳ ಸಾಮಾಜಿಕ ಮತ್ತು ಭಾವನಾತ್ಮಕ ಬಾಂಧವ್ಯದ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು.