Connect with us

104 ಉಪಗ್ರಹಗಳನ್ನ ಕಕ್ಷೆಗೆ ಸೇರಿಸಿದ ಇಸ್ರೋ ರಾಕೆಟ್‍ನ ಸೆಲ್ಫೀ ವೀಡಿಯೋ ನೋಡಿ

104 ಉಪಗ್ರಹಗಳನ್ನ ಕಕ್ಷೆಗೆ ಸೇರಿಸಿದ ಇಸ್ರೋ ರಾಕೆಟ್‍ನ ಸೆಲ್ಫೀ ವೀಡಿಯೋ ನೋಡಿ

ಶ್ರೀಹರಿಕೋಟಾ: ಬುಧವಾರದಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ 104 ಉಪಗ್ರಹಗಳನ್ನು ಒಂದೇ ರಾಕೆಟ್‍ನಲ್ಲಿ ಉಡಾವಣೆ ಮಾಡಿ ಕಕ್ಷೆಗೆ ಸೇರಿಸುವ ಮೂಲಕ ವಿಶ್ವ ದಾಖಲೆ ಬರೆದು ಹೊಸ ಮೈಲಿಗಲ್ಲು ಸಾಧಿಸಿದೆ. 104 ಉಪಗ್ರಹಗಳನ್ನು ಹೊತ್ತೊಯ್ದ ಇಸ್ರೋದ ಪಿಎಸ್‍ಎಲ್‍ವಿ-ಸಿ37 ರಾಕೆಟ್‍ನಲ್ಲಿ ಅಳವಡಿಸಿಲಾಗಿದ್ದ ಕ್ಯಾಮೆರಾದಲ್ಲಿ ಉಪಗ್ರಹಗಳು ರಾಕೆಟ್‍ನಿಂದ ಬೇರ್ಪಡುವ ದೃಶ್ಯ ಸೆರೆಯಾಗಿದೆ.

ಇದರಿಂದ ಬಾಹ್ಯಾಕಾಶ ಇತಿಹಾಸದಲ್ಲಿ ಮೊದಲ ಬಾರಿಗೆ ಉಡಾವಣೆಯಲ್ಲಿ ಶತಕದ ಸಾಧನೆಯನ್ನು ಮಾಡಿದ ಹಿರಿಮೆ ಭಾರತಕ್ಕೆ ಸಿಕ್ಕಿದೆ. ಪ್ರತಿ ಉಪಗ್ರಹವೂ 4.7 ಕೆ.ಜಿ. ತೂಕ ಹೊಂದಿದ್ದು, ಗಂಟೆಗೆ 27 ಸಾವಿರ ಕಿ.ಮೀ. ಅಂದರೆ ಪ್ರಯಾಣಿಕ ವಿಮಾನಕ್ಕಿಂತ 40 ಪಟ್ಟು ಅಧಿಕ ವೇಗದಲ್ಲಿ 101 ಸಣ್ಣ ಉಪಗ್ರಹಗಳನ್ನು 600 ಸೆಕೆಂಡ್‍ಗಿಂತ ಕಡಿಮೆ ಅವಧಿಯಲ್ಲಿ ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಬುಧವಾರ 9.28ರ ಸಮಯಕ್ಕೆ ರಾಕೆಟನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯ್ತು. ಸುಮಾರು 16 ರಿಂದ 18 ನಿಮಿಷಗಳ ಪ್ರಯಾಣದ ನಂತರ ಭಾರತದ 3 ಉಪಗ್ರಗಳನ್ನ ರಾಕೆಟ್ ಕಕ್ಷೆಗೆ ಸೇರಿಸಿತು. ಇದಾದ ನಂತರ ಕೇವಲ 10 ನಿಮಿಷ(600 ಸೆಕೆಂಡ್)ಗಳ ಅವಧಿಯಲ್ಲಿ ರಾಕೆಟ್ ಉಳಿದ 101 ಉಪಗ್ರಹಳನ್ನ ಅವುಗಳ ಕಕ್ಷೆಗೆ ಸೇರಿಸಿತು. ಘರ್ಷಣೆ ಆಗದಂತೆ ತಡೆಯಲು ಅವುಗಳನ್ನ 4 ರಿಂದ 10 ಸೆಕೆಂಡ್‍ಗಳ ಅಂತರದಲ್ಲಿ ಬಿಡುಗಡೆ ಮಾಡಲಾಯ್ತು.

104 ಉಪಗ್ರಹಗಳ ಪೈಕಿ ಭಾರತದ 3 (ಕಾರ್ಟೊಸ್ಯಾಟ್-2 ಉಪಗ್ರಹ ಹಾಗೂ ನ್ಯಾನೋ ಉಪಗ್ರಹಗಳಾದ ಐಎನ್‍ಎಸ್-1 ಮತ್ತು 2), ಅಮೆರಿಕದ 96 ಉಪಗ್ರಹಗಳು ಸೇರಿದ್ದವು. ಉಳಿದಂತೆ ಇಸ್ರೇಲ್, ಕಜಕಿಸ್ತಾನ, ನೆದರ್ಲೆಂಡ್, ಸ್ವಿಜರ್ಲೆಂಡ್ ಹಾಗೂ ಯುಎಇಯ ತಲಾ ಒಂದು ಉಪಗ್ರಹ ಇಸ್ರೋ ರಾಕೆಟ್‍ನಲ್ಲಿ ಕಕ್ಷೆ ಸೇರಿದವು.

2014ರಲ್ಲಿ ರಷ್ಯಾ ಒಂದೇ ರಾಕೆಟ್‍ನಲ್ಲಿ 37 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ್ದೇ ಈವರೆಗಿನ ದಾಖಲೆಯಾಗಿತ್ತು. 2016ರ ಜೂನ್‍ನಲ್ಲಿ ಇಸ್ರೋ ಒಂದೇ ರಾಕೆಟ್‍ನಲ್ಲಿ 20 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಅಮೆರಿಕದ ನಾಸಾಕ್ಕೆ ಹೋಲಿಸಿದರೆ ಉಡಾವಣೆ ದರ ಅಗ್ಗವಾಗಿರುವ ಹಿನ್ನೆಲೆಯಲ್ಲಿ ವಿದೇಶಿ ಕಂಪನಿಗಳು ಉಪಗ್ರಹ ಉಡಾವಣೆಗೆ ಇಸ್ರೋವನ್ನು ಅವಲಂಬಿಸಿವೆ.

104 ಉಪಗ್ರಹಗಳು ರಾಕೆಟ್‍ನಿಂದ ಬೇರ್ಪಡುವ ಅದ್ಭುತ ಕ್ಷಣಗಳು ರಾಕೆಟ್‍ನ ಸೆಲ್ಫೀ ವೀಡಿಯೋದಲ್ಲಿ ಸೆರೆಯಾಗಿದೆ.

Advertisement
Advertisement