ನವದೆಹಲಿ: ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗರಿಯಾ ಅವರು ಮಂಗಳವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
64 ವರ್ಷದ ಭಾರತೀಯ ಅಮೆರಿಕನ್ ಅರ್ಥ ಶಾಸ್ತ್ರಜ್ಞ, ಪನಗರಿಯಾ ಅವರ ಕಾರ್ಯಾವಧಿ ಇದೇ ಆಗಸ್ಟ್ 31ರಂದು ಮುಗಿಯುತಿತ್ತು. ಆದರೆ ಅವರು ಅವಧಿಗೂ ಮುನ್ನವೇ ಹುದ್ದೆಗೆ ರಾಜೀನಾಮೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
Advertisement
ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವನ್ನು ಹೊಂದಿದ್ದ ಹುದ್ದೆಗೆ ಪನಗರಿಯಾ ಅವರನ್ನು ಮೋದಿ ಸರ್ಕಾರ 2015ರ ಜನವರಿಯಲ್ಲಿ ಆಯ್ಕೆ ಮಾಡಿತ್ತು. ರಾಜೀನಾಮೆ ನೀಡಿದ ಬಳಿಕ ತಾನು ನ್ಯೂಯಾರ್ಕ್‍ನ ಕೊಲಂಬಿಯ ವಿಶ್ವವಿದ್ಯಾಲಯಕ್ಕೆ ಅಧ್ಯಾಪನಕ್ಕೆ ಮರಳುತ್ತಿದ್ದೇನೆ ಎಂದು ಪನಗರಿಯಾ ತಿಳಿಸಿದ್ದಾರೆ.
Advertisement
ನೀತಿ ಆಯೋಗದ ಉಪಾಧ್ಯಕ್ಷರಾಗುವುದಕ್ಕೂ ಮೊದಲು ಏಷ್ಯನ್ ಡೆವಲಪ್‍ಮೆಂಟ್ ಬ್ಯಾಂಕ್ ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿದ್ದರು. ವಿಶ್ವ ಬ್ಯಾಂಕ್, ಐಎಂಎಫ್, ಡಬ್ಲ್ಯುಟಿಓ ಹಾಗೂ ವಿಶ್ವಸಂಸ್ಥೆಯ ವಾಣಿಜ್ಯ ಅಭಿವೃದ್ಧಿ ಮಂಡಳಿಯಲ್ಲೂ ಕೆಲಸ ಮಾಡಿರುವ ಪನಗರಿಯಾ ಪ್ರಿನ್ಸ್‍ಟನ್ ಯುನಿವರ್ಸಿಟಿಯಿಂದ ಅರ್ಥಶಾಸ್ತ್ರದಲ್ಲಿ ಪಿಎಚ್‍ಡಿ ಪಡೆದಿದ್ದಾರೆ.
Advertisement
ಏನಿದು ನೀತಿ ಆಯೋಗ?
ಯೋಜನಾಬದ್ಧ ಆರ್ಥಿಕ ಬೆಳವಣಿಗೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ 2014 ರವರೆಗೆ ಯೋಜನಾ ಆಯೋಗ ಸಲಹೆ ನೀಡುತಿತ್ತು. 2015ರ ಜನವರಿಯಲ್ಲಿ ಮೋದಿ ಸರ್ಕಾರ ಯೋಜನ ಆಯೋಗವನ್ನು ನೀತಿ ಆಯೋಗ ಎಂದು ಬದಲಿಸಿತ್ತು. ಈ ನೀತಿ ಆಯೋಗದ ಅಧ್ಯಕ್ಷರಾಗಿ ಪ್ರಧಾನಿ ನರೇಂದ್ರ ಮೋದಿ ಇದ್ದರೆ, ಉಪಾಧ್ಯಕ್ಷರಾಗಿ ಅರವಿಂದ ಪನಗರಿಯಾ ಇಲ್ಲಿಯವರೆಗೆ ಕಾರ್ಯನಿರ್ವಹಿಸಿದ್ದರು.