– ಏಕವಚನದಲ್ಲಿ ಮಾತನಾಡಿದ್ದ ಸಿಎಂಗೆ ಆರ್.ಅಶೋಕ್ ತಿರುಗೇಟು
ಬೆಂಗಳೂರು: ಕಾಶ್ಮೀರದ ಹಜರತ್ ಬಾಲ್ ದರ್ಗಾದಲ್ಲಿ ಉಗ್ರರು ಅಡಗಿಕೊಂಡಿದ್ದಾಗ ಅಂದಿನ ಯುಪಿಎ ಸರ್ಕಾರ ಉಗ್ರರಿಗೆ ಬಿರಿಯಾನಿ ಕಳುಹಿಸಿಕೊಟ್ಟಿತ್ತು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಆರೋಪಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಲೋಕಸಭಾ ಚುನಾವಣಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ಯುಪಿಎ ಕಾಶ್ಮೀರದ ಪ್ರತ್ಯೇಕವಾದಿ ನಾಯಕರಿಗೆ ಗನ್ ಮ್ಯಾನ್‍ಗಳಿಂದ ಭದ್ರತೆ ಒದಗಿಸಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತ್ಯೇಕವಾದಿ ನಾಯಕರಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆದಿದ್ದಾರೆ. ಅಷ್ಟೇ ಅಲ್ಲದೇ ಉಗ್ರರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದರು.
Advertisement
Advertisement
ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ಜನರನ್ನು ದೇಶದಿಂದ ಹೊರಹಾಕಲು ಕೇಂದ್ರ ಸರ್ಕಾರ ಆದೇಶಿಸಿದೆ. ಆದರೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವು ಅಕ್ರಮ ಬಾಂಗ್ಲಾ ವಲಸಿಗರಿಗೆ ಚುನಾವಣಾ ಗುರುತಿನ ಚೀಟಿ ಕೊಟ್ಟು, ಮತದಾರ ಪಟ್ಟಿಗೆ ಸೇರ್ಪಡೆ ಮಾಡಿದ್ದಾರೆ ಎಂದು ದೂರಿದರು.
Advertisement
ಬಿಜೆಪಿ ಮುಖಂಡ ಆರ್.ಅಶೋಕ್ ಅವರು ಮಾತನಾಡಿ, ಸಿಎಂ ಕುಮಾರಸ್ವಾಮಿ ಅವರು ಮಂಡಿಸಿರುವ ಎರಡು ಬಜೆಟ್‍ಗಳು ಹಾಸನ ಜಿಲ್ಲೆಯ ಹೊಳೆನರಸೀಪುರದ ಸುತ್ತಲೇ ಗಿರಗಿಟ್ಲೆ ಹೊಡೆಯುತ್ತಿವೆ. ಕರ್ನಾಟಕ ಅಂದ್ರೆ ರಾಮನಗರ ಮತ್ತು ಹೊಳೆನರಸೀಪುರ ಮಾತ್ರ ಎಂದೇ ಸಿಎಂ ಭಾವಿಸಿದ್ದಾರೆ. ತಾವು ಅಧಿಕಾರಕ್ಕೆ ಬರಲು ರಾಜ್ಯದ ಕಾರಣರಲ್ಲ. ನಮ್ಮ ತಂದೆ ಎಚ್.ಡಿ.ದೇವೇಗೌಡ ಅವರು ಮಾಡಿದ ಪೂಜೆ-ಪುನಸ್ಕಾರ, ಮಾಟ-ಮಂತ್ರಗಳೇ ಕಾರಣವೆಂದು ಕುಮಾರಸ್ವಾಮಿ ಅವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
Advertisement
ಕಾಂಗ್ರೆಸ್ ಹಿರಿಯ ಮುಖಂಡ ಶರದ್ ಪವಾರ್ ಅವರ ಮೊಮ್ಮಗ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ. ಹೀಗಾಗಿ ಅವರು ಚುನಾವಣಾ ಕಣದಿಂದಲೇ ಹಿಂದೆ ಸರಿದರು. ಇಂತಹ ಆಲೋಚನೆ ದೇವೇಗೌಡ ಅವರಿಗೆ ಬರಲೇ ಇಲ್ಲ. ದೇವೇಗೌಡರ ಕುಟುಂಬ ಕಣ್ಣೀರಿಗೆ ಬ್ರಾಂಡ್ ಆಗಿದೆ. ದೇವೇಗೌಡ ಅವರು ಮಕ್ಕಳು, ಮೊಮ್ಮಕ್ಕಳ ವಿಷಯಕ್ಕೆ ಮಾತ್ರ ಕಣ್ಣೀರು ಹರಿಸುತ್ತಾರೆ. ಆದರೆ ಬೇರೆಯವರ ನೋವಿಗೆ ಯಾಕೆ ಅಳುವುದಿಲ್ಲ ಎಂದು ಕಿಡಿಕಾರಿದರು.
ನಮ್ಮ ಕ್ಯಾಪ್ಟನ್, ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಎಂದು ಫಿಕ್ಸ್ ಆಗಿದೆ. ಆದರೆ ಪ್ರತಿಪಕ್ಷಗಳಿಂದ ಪ್ರಧಾನಿ ಅಭ್ಯರ್ಥಿ ಯಾರು? ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಬಿಎಸ್‍ಪಿ ನಾಯಕಿ ಮಾಯಾವತಿ ಇಲ್ಲವೇ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಅಭ್ಯರ್ಥಿಯೇ? ಇದೇ ತಮ್ಮ ಕೊನೆಯ ಚುನಾವಣೆ ಎಂದು ಹಲವು ವರ್ಷಗಳಿಂದ ಹೇಳುತ್ತಲೇ ಬಂದಿರುವ ದೇವೇಗೌಡ ಅವರೇ? ಎಂದು ಮಹಾಮೈತ್ರಿ ನಾಯಕರನ್ನು ಆರ್.ಅಶೋಕ್ ಕುಟುಕಿದರು.
ಏಕವಚನದಲ್ಲಿಯೇ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಕಿಡಿಕಾರಿದ ಆರ್.ಅಶೋಕ್ ಅವರು, ನಾವು ಕುಮಾರಸ್ವಾಮಿ ಅವರಿಂದ ಪಾಠ ಕಲಿಯಬೇಕಿಲ್ಲ. ಮೈತ್ರಿ ಸರ್ಕಾರ ಇದ್ದು ಸತ್ತಂತಾಗಿದೆ. ಆತ್ಮಹತ್ಯೆಗೆ ಶರಣಾಗಿದ್ದ ಮಂಡ್ಯ, ಕೋಲಾರ ರೈತರ ಮನೆಗೆ ನಾವು ಮೊದಲು ಹೋಗಿದ್ದವು. ಮೃತ ರೈತರಿಗೆ ಸಾಂತ್ವನ ಹೇಳಿದ ಬಂದ ಬಳಿಕ ಸಿಎಂ ಕುಮಾರಸ್ವಾಮಿ ಹೋಗಿ ಬಂದರು. ಸಿಎಂಗೆ ಅಧಿಕಾರದ ಮದವಿದೆ. ಹೀಗಾಗಿ ನನ್ನ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂದು ತಿರುಗೇಟು ನೀಡಿದರು.
ಬೆಂಗಳೂರು ಲೋಕಸಭಾ ಕ್ಷೇತ್ರಕ್ಕೆ ದೇವೇಗೌಡ ಅವರು ಯಾಕೆ ಬರುತ್ತಾರೆ ಎಂದು ಆಶ್ಚರ್ಯವಾಗುತ್ತಿದೆ. ಬಿಜೆಪಿ ಸರ್ಕಾರ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ಯೋಜನೆ ನೀಡಿದೆ. ಆದರೆ ಎಚ್.ಡಿ.ದೇವೇಗೌಡ ಅವರು ಬೆಂಗಳೂರಿಗೆ ಏನೂ ಮಾಡಿಲ್ಲ. ಹೀಗಾಗಿ ಬೆಂಗಳೂರಿನ ಮೂರಕ್ಕೆ ಮೂರೂ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ಇದರಿಂದಾಗಿ ದೇವೇಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲ್ಲವೆಂದು ಅನಿಸುತ್ತದೆ ಎಂದು ಹೇಳಿದರು.
ಮಂಡ್ಯ ಹೈ ವೋಲ್ಟೇಜ್ ಕ್ಷೇತ್ರವಾಗಿದೆ. ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬೇಸರ ತಂದಿದೆ. ಜೆಡಿಎಸ್‍ಗೆ ಒಬ್ಬ ಸ್ಥಳೀಯ ಕಾರ್ಯಕರ್ತ ಸಿಗಲಿಲ್ವಾ ಎನ್ನುವಂತಾಗಿದೆ. ಮತ್ತೊಂದೆಡೆ ಸುಮಲತಾ ಅವರು ಜನರ ಅಭಿಪ್ರಾಯದ ಮೇಲೆ ಸ್ಪರ್ಧೆ ಮಾಡುತ್ತಿದ್ದಾರೆ. ಕಾವೇರಿ ನೀರಿಗಾಗಿ ಅಂಬರೀಶ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸುಮಲತಾ ಈಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಾರೆ. ಈ ಕುರಿತು ಅವರ ಜೊತೆಗೆ ನಾನು ಚರ್ಚೆ ಮಾಡಿದ್ದೇನೆ. ಅಷ್ಟೇ ಅಲ್ಲದೆ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಜೊತೆಗೆ ಚರ್ಚೆ ಮಾಡಿ, ನಮ್ಮ ಪಕ್ಷದ ನಿರ್ಧಾರ ಪ್ರಕಟಿಸುತ್ತದೆ ಎಂದರು.
ಹಾಸನ ಕ್ಷೇತ್ರದ ಬಿಜೆಪಿ ಆಭ್ಯರ್ಥಿ ಅಯ್ಕೆ ವಿಚಾರವಾಗಿ ಮಾತನಾಡಿದ ಆರ್.ಅಶೋಕ ಅವರು, ಮಾಜಿ ಸಚಿವ ಎ.ಮಂಜು ಈಗಾಗಲೇ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಸ್ಥಳೀಯರಿಗೆ ಕೊಡಬೇಕು ಎಂಬ ಆಗ್ರಹವೂ ಇದೆ. ಈ ಸಂಬಂಧ ಎರಡು ಮೂರು ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv