ಬೆಳಗ್ಗೆದ್ದು ಸೆಲ್‌ ಕ್ಲೀನ್‌, ಯೋಗ ನಂತ್ರ 2 ಪೀಸ್‌ ಬ್ರೆಡ್-‌ ಜೈಲಲ್ಲಿರೋ ಕೇಜ್ರಿವಾಲ್‌ ದಿನಚರಿ ಹೇಗಿದೆ?

Public TV
2 Min Read
ARVIND KEJRIWAL

ನವದೆಹಲಿ: ಮದ್ಯ ಹಗರಣಕ್ಕೆ (Liquor Scam) ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ತಮ್ಮ ಸೆಲ್‌ನಲ್ಲಿ ಧ್ಯಾನ, ಪುಸ್ತಕಗಳನ್ನು ಓದುವುದು ಮತ್ತು ಯೋಗ ಮಾಡುವುದರಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ.

ಸೆಲ್‌ನಲ್ಲಿ ಟಿವಿ ವ್ಯವಸ್ಥೆ ಮಾಡಲಾಗಿದೆ. ಆದರೆ ಟಿವಿ ವೀಕ್ಷಿಸಲು ಕುರ್ಚಿ ಅಥವಾ ಸ್ಟೂಲ್ ಹೊಂದಿಲ್ಲ. ಇನ್ನು ಬೆಳಗ್ಗೆ ಬೇಗನೆ ಎದ್ದು ತನ್ನ ಸೆಲ್ ಅನ್ನು ಗುಡಿಸಿ, ಬಳಿಕ ಯೋಗ ಮಾಡುತ್ತಾರೆ. ನಂತರ ಉಪಾಹಾರಕ್ಕಾಗಿ ಎರಡು ಪೀಸ್ ಬ್ರೆಡ್ ಮತ್ತು ಚಹಾವನ್ನು ತೆಗೆದುಕೊಳ್ಳುತ್ತಾರೆ. ಬಳಿಕ ಜೈಲಿನ ಆವರಣದಲ್ಲಿ ನಡೆಯುತ್ತಾರೆ ಎಂದು ಜೈಲು ಮೂಲಗಳು ತಿಳಿಸಿವೆ.

arvind kejriwal 1

ದಿನದ ಬಹುಪಾಲು ಪುಸ್ತಕಗಳನ್ನು ಓದುತ್ತಾರೆ ಮತ್ತು ಯೋಗ ಮಾಡುತ್ತಾರೆ ಮತ್ತು ದಿನಕ್ಕೆ ಎರಡು ಬಾರಿ ಧ್ಯಾನ ಮಾಡುತ್ತಾರೆ. ಅವರಿಗೆ ಒದಗಿಸಿದ ಪುಸ್ತಕಗಳಲ್ಲಿ ಹಿಂದೂ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ಸೇರಿದೆ. ಕೆಲವೊಮ್ಮೆ ತಮ್ಮ ಪಾಡಿಗೆ ಬರೆಯುತ್ತಾ ಕುಳಿತಿರುತ್ತಾರೆ. ಕೇಜ್ರಿವಾಲ್ ಅವರು ಸ್ವಲ್ಪ ಬೆರಗುಗೊಂಡಂತೆ ತೋರುತ್ತಿದ್ದಾರೆ. ಸ್ವಲ್ಪ ಗೊಂದಲಕ್ಕೊಳಗಾಗಿದ್ದಾರೆ. ಅವರು ಇನ್ನೂ ಜೈಲಿನೊಳಗೆ ತಮ್ಮ ಸುತ್ತಮುತ್ತಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪ್ರತಿಯೊಬ್ಬ ಶಾಸಕರು ಪ್ರತಿದಿನ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ- ಜೈಲಿನಿಂದ್ಲೇ ಕೇಜ್ರಿವಾಲ್‌ ಪತ್ರ

ಕೇಜ್ರಿವಾಲ್ ಅವರ ತೂಕ, ಶುಗರ್‌ ಹಾಗೂ ರಕ್ತದೊತ್ತಡ ಸಂಬಂಧ ಹಿರಿಯ ವೈದ್ಯರೊಬ್ಬರು ದಿನಕ್ಕೆ ಎರಡು ಬಾರಿ ಮೇಲ್ವಿಚಾರಣೆ ಮಾಡುತ್ತಾರೆ. ದೆಹಲಿ ಮುಖ್ಯಮಂತ್ರಿ ಸಂಪೂರ್ಣವಾಗಿ ಚೆನ್ನಾಗಿದ್ದಾರೆ. ಬಿಪಿ ಉತ್ತಮವಾಗಿದೆ, ಶುಗರ್ ನಿಯಂತ್ರಣದಲ್ಲಿದೆ ಮತ್ತು ಅವರ ತೂಕ 65 ಕೆಜಿ ಸ್ಥಿರವಾಗಿದ್ದು, ತೂಕ ಕಡಿಮೆಯಾಗಿಲ್ಲ ಎಂದು ಜೈಲು ಅಧಿಕಾರಿ ತಿಳಿಸಿದ್ದಾರೆ. ಆದರೆ ಮಾರ್ಚ್ 21 ರಂದು ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದಾಗಿನಿಂದ 4.5 ಕೆಜಿ ಕಳೆದುಕೊಂಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಮತ್ತು ದೆಹಲಿ ಸಚಿವ ಅತಿಶಿ ಆರೋಪಿಸಿದ್ದರು.

55ರ ಹರೆಯದ ದೆಹಲಿ ಮುಖ್ಯಮಂತ್ರಿಗೆ ತಮ್ಮ ಸೆಲ್‌ನ ಹೊರಗೆ ನಡೆಯಲು ಅವಕಾಶ ನೀಡಲಾಗಿದೆ. ಆದರೆ ಭದ್ರತಾ ಕಾರಣಗಳಿಂದಾಗಿ ಅವರು ಇತರ ಕೈದಿಗಳೊಂದಿಗೆ ಮಾತನಾಡಲು ಸಾಧ್ಯವಿಲ್ಲ ಎಂದು ವರದಿ ಹೇಳಿದೆ.

ಏಷ್ಯಾದ ಅತಿದೊಡ್ಡ ಜೈಲಿನಲ್ಲಿ ಇರಿಸಲಾಗಿರುವ ಮೊದಲ ಹಾಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ತಿಹಾರ್‌ನ ಜೈಲು ಸಂಖ್ಯೆ 2 ರ ಸಾಮಾನ್ಯ ವಾರ್ಡ್ ಸಂಖ್ಯೆ 3 ರಲ್ಲಿ 14×8 ಅಡಿ ಕೊಠಡಿಯಲ್ಲಿ ಇರಿಸಲಾಗಿದೆ. ಜೈಲು ಕೈದಿಗಳ ಪ್ರಕಾರ, ಎಲ್ಲಾ ಕೈದಿಗಳಂತೆ ಕೇಜ್ರಿವಾಲ್‌ ಅವರಿಗೂ ಅವರ ಸೆಲ್‌ ಶುಚಿಗೊಳಿಸಲೆಂದು ಪೊರಕೆ, ಬಕೆಟ್‌ ಮತ್ತು ಬಟ್ಟೆ ನೀಡಲಾಗಿದೆ.

Share This Article