ನವದೆಹಲಿ: ಭ್ರಷ್ಟಾಚಾರ, ಗಲಭೆ ಹಾಗೂ ಗೂಂಡಾಗಿರಿ ಮಾಡುವುದು ಗೊತ್ತಿಲ್ಲ, ಆದರೆ ಶಾಲೆ ಹಾಗೂ ಆಸ್ಪತ್ರೆಗಳನ್ನು ಕಟ್ಟುವುದು ಹೇಗೆ ಎಂದು ನಮಗೆ ತಿಳಿದಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಸರ್ಕಾರಿ ಶಾಲೆಗಳ ಸ್ಥಿತಿ ತೀರಾ ಹದಗೆಟ್ಟಿದೆ. ಈ ಹಿಂದೆ ದೆಹಲಿಯಲ್ಲೂ ಇದೇ ಪರಿಸ್ಥಿತಿ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಸರ್ಕಾರಿ ಶಾಲೆಗಳ ಪಿಯುಸಿ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ನಾಲ್ಕು ಲಕ್ಷಕ್ಕೂ ಹೆಚ್ಚು ಖಾಸಗಿ ಶಾಲೆಯ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳನ್ನು ಸೇರಿದ್ದಾರೆ ಎಂದರು.
ನಾವು ರಾಜಕೀಯಕ್ಕೆ ಬಂದಿದ್ದು ವೃತ್ತಿ ಮಾಡುವುದಕ್ಕಾಗಿ ಅಲ್ಲ, ಭಾರತ ಮಾತೆಯ ಸೇವೆಗಾಗಿ ಮತ್ತು ದೇಶವನ್ನು ಉಳಿಸಲು. ಭಾರತವು ವಿಶ್ವದ ನಂಬರ್ ಒನ್ ದೇಶವಾಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಗೆ ನೀಡಿದ ನೋಟಿಸ್ ಕಾನೂನು ಬಾಹಿರ: ಈಶ್ವರ್ ಖಂಡ್ರೆ
ನನಗೆ ರಾಜಕೀಯ ಗೊತ್ತಿಲ್ಲ. ಆದರೆ ಕೆಲಸ ಮಾಡುವುದು ಗೊತ್ತು. ಉಚಿತ ಶಿಕ್ಷಣ ವ್ಯವಸ್ಥೆಯನ್ನು ನೀಡಿದ್ದಕ್ಕಾಗಿ ಇತರ ಪಕ್ಷಗಳು ನನ್ನನ್ನು ನಿಂದಿಸಿವೆ. ಬಡವರಿಗೆ ಶಿಕ್ಷಣ, ಚಿಕಿತ್ಸೆ ಉಚಿತವಾಗಿ ನೀಡುವುದು ತಪ್ಪೇ ಎಂದು ಪ್ರಶ್ನಿಸಿದ ಅವರು, ದೆಹಲಿ ಸರ್ಕಾರವು ನಿರ್ವಹಿಸುತ್ತಿರುವ 12 ಕಾಲೇಜುಗಳಲ್ಲಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಬಾಕಿ ವೇತನ ಪಾವತಿಗೆ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಬಿಜೆಪಿ ಸರ್ಕಾರದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದೆ: ಮಲ್ಲಿಕಾರ್ಜುನ ಖರ್ಗೆ