ಇಟಾನಗರ: ನೋವಿನಿಂದ ಬಳಲುತ್ತಿದ್ದ ತುಂಬು ಗರ್ಭಿಣಿಯನ್ನು ಸ್ವತಃ ಅರುಣಾಚಲ ಪ್ರದೇಶದ ರಾಜ್ಯಪಾಲ ಹಾಗೂ ನಿವೃತ್ತ ಬ್ರಿಗೇಡಿಯರ್ ಆರ್.ಡಿ.ಮಿಶ್ರಾರವರು ತಮ್ಮ ಹೆಲಿಕಾಪ್ಟರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬುಧವಾರ ಅರುಣಾಚಲ ಪ್ರದೇಶದ ತವಾಂಗ್ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭಕ್ಕೆ ಆರ್.ಡಿ. ಮಿಶ್ರಾ ಆಗಮಿಸಿದ್ದರು. ಈ ವೇಳೆ ಮುಖ್ಯಮಂತ್ರಿ ಪೇಮಾ ಖಂಡು ಹಾಗೂ ಸ್ಥಳೀಯ ಶಾಸಕರ ಜೊತೆ ಚರ್ಚೆ ನಡೆಸುತ್ತಿದ್ದರು. ಈ ವೇಳೆ ಗರ್ಭಿಣಿಯೊಬ್ಬರು ತೀವ್ರ ನೋವಿನಿಂದ ಬಳಲುತ್ತಿದ್ದಲ್ಲದೇ, ಚಿಂತಾಜನಕ ಸ್ಥಿತಿಯಲ್ಲಿರುವುದು ಅವರ ಗಮನಕ್ಕೆ ಬಂದಿತ್ತು. ಅಲ್ಲದೇ ಮುಂದಿನ ಮೂರು ದಿನಗಳ ಕಾಲ ತವಾಂಗ್ ಮತ್ತು ಗುವಾವಟಿ ಮಧ್ಯೆ ಹೆಲಿಕಾಪ್ಟರ್ ಸೇವೆ ಇಲ್ಲವೆಂಬ ಮಾಹಿತಿಯನ್ನು ಶಾಸಕರಿಂದ ಪಡೆದ ಅವರು, ಕೂಡಲೇ ತಮ್ಮ ಇಬ್ಬರು ಅಧಿಕಾರಿಗಳೊಂದಿಗೆ ಮಾತನಾಡಿ ತಮ್ಮ ಹೆಲಿಕಾಪ್ಟರಿನಲ್ಲೇ ಗರ್ಭಿಣಿ ಹಾಗೂ ಪತಿಯನ್ನು ಕರೆದೊಯ್ಯವ ವ್ಯವಸ್ಥೆ ಮಾಡಿದ್ದರು.
Advertisement
Advertisement
ಗವರ್ನರ್ ಹಾಗೂ ತುಂಬು ಗರ್ಭಿಣಿ ಹೊರಟಿದ್ದ ಹೆಲಿಕಾಪ್ಟರ್ ಇಂಧನ ತುಂಬಿಸಿಕೊಳ್ಳಲು ತೇಜ್ಪುರದಲ್ಲಿ ಇಳಿದಿತ್ತು. ಆದರೆ ಇಂಧನ ತುಂಬಿಸಿಕೊಂಡ ಬಳಿಕ ಹೆಲಿಕಾಪ್ಟರಿನಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಕೂಡಲೇ ಎಚ್ಚೆತ್ತ ಗವರ್ನರ್ ವಾಯುಪಡೆಯ ಹೆಲಿಕಾಪ್ಟರಿಗೆ ಮನವಿ ಮಾಡಿ, ಗರ್ಭಿಣಿ ಹಾಗೂ ಆಕೆಯ ಪತಿಯನ್ನು ಮೊದಲು ರಾಜಧಾನಿ ತಲುಪುವಂತೆ ಮಾಡಿದ್ದರು. ಅಲ್ಲದೇ ತಮ್ಮ ರಾಜಭವನದ ಹೆಲಿಪ್ಯಾಡ್ ನಲ್ಲಿ ಪ್ರಸೂತಿ ತಜ್ಞರನ್ನು ಒಳಗೊಂಡ ಅಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿದ್ದರು. ಆಸ್ಪತ್ರೆಗೆ ಕರೆದೊಯ್ಯಲು ತೊಂದರೆಯಾಗದಂತೆ ನೋಡಿಕೊಂಡು, ನಂತರ ಬೇರೆ ವಿಮಾನದಲ್ಲಿ ಇಟಾನಗರಕ್ಕೆ ತೆರಳಿದ್ದರು.
Advertisement
ಇಟಾನಗರದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿ, ಸಿಸೇರಿಯನ್ ಮೂಲಕ ವೈದ್ಯರು ಯಶಸ್ವಿಯಾಗಿ ಹೆರಿಗೆ ಮಾಡಿದ್ದಾರೆ. ಸದ್ಯ ಮಹಿಳೆ ಮತ್ತು ಮಗು ಆರೋಗ್ಯವಾಗಿದ್ದು, ಗವರ್ನರ್ ಅವರ ಕಾರ್ಯಕ್ಕೆ ಆಕೆಯ ಕುಟುಂಬಸ್ಥರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
Advertisement
ತವಾಂಗ್ ಪಟ್ಟಣದಿಂದ ಇಟಾನಗರಕ್ಕೆ ಸುಮಾರು 200 ಕಿ.ಮೀ. ಅಂತರವಿದ್ದು, ಬೆಟ್ಟ-ಗುಡ್ಡ ಹಾಗೂ ಕಣಿವೆಗಳ ಮೂಲಕ ರಸ್ತೆ ಮಾರ್ಗವಾಗಿ ತಲುಪಲು ಸುಮಾರು 15 ತಾಸುಗಳು ಬೇಕಾಗುತ್ತದೆ. ಇದನ್ನು ಅರಿತ ಗವರ್ನರ್ ತಮ್ಮ ಹೆಲಿಕಾಪ್ಟರ್ ಮೂಲಕ ಮಹಿಳೆಯನ್ನು 2 ಗಂಟೆಯೊಳಗೆ ಆಸ್ಪತ್ರೆಗೆ ದಾಖಲು ಮಾಡಲು ಸಹಕರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv