ಮೈಸೂರು: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ವಿರಾಜಮಾನರಾಗಿರುವ ಭಗವಾನ್ ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ದಿನಗಣನೆ ಬಾಕಿಯಿದೆ. ಮಂದಸ್ಮಿತವಾಗಿ ಎದ್ದು ಕಾಣುತ್ತಿರುವ ಬಾಲರಾಮನ ಮೂರ್ತಿ ಹೆಸರಿನ ಹಿಂದೆ ಕೇಳಿಬರುತ್ತಿರುವುದು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಹೆಸರು. ಅದ್ಭುತವಾಗಿ ಮೂಡಿಬಂದಿರುವ ಶ್ರೀರಾಮನ ಮೂರ್ತಿಕಂಡು ದೇಶಾದ್ಯಂತ ನೆಲೆಸಿರುವ ಶ್ರೀರಾಮನ ಭಕ್ತರು ಶಿಲ್ಪಿಯನ್ನು ಹಾಡಿಹೊಗಳುತ್ತಿದ್ದಾರೆ.
ಈ ಸಂತಸವನ್ನು ʻಪಬ್ಲಿಕ್ ಟಿವಿʼ ಜೊತೆಗೆ ಹಂಚಿಕೊಂಡಿರುವ ಅರುಣ್ ಯೋಗಿರಾಜ್ ಪತ್ನಿ ವಿಜೇತಾ, ಅಚ್ಚರಿಯ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: Ram Mandir: ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ವಿಗ್ರಹ ಹೇಗಿದೆ ನೋಡಿ – Photos
ಹೌದು. ಅರುಣ್ ಶಿಲ್ಪ ಕೆತ್ತನೆ ಮಾಡುವಾಗ ಒಂದು ಕಣ್ಣನ್ನೇ ಕಳೆದುಕೊಳ್ಳುವ ಸ್ಥಿತಿ ಎದುರಾಗಿತ್ತು. ಮೂರ್ತಿ ಕೆತ್ತನೆ ಮಾಡುವಾಗ ಒಂದು ಕಲ್ಲಿನ ಚೂರು ಅರುಣ್ ಯೋಗಿರಾಜ್ ಕಣ್ಣಿನ ಗುಡ್ಡೆಗೆ ಬಡಿದಿತ್ತು. ಕಣ್ಣಿಗೆ ಗಾಯ ಸಹ ಆಗಿತ್ತು. ತಕ್ಷಣ ಅಯೋಧ್ಯೆ ಟ್ರಸ್ಟ್‌ನವರು ಅವರನ್ನ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಿಸಿ, ಕಲ್ಲಿನ ಚೂರನ್ನು ಹೊರ ತೆಗೆಸಿದ್ದರು. ಇದನ್ನೂ ಓದಿ: ಅಯೋಧ್ಯೆ ಗರ್ಭಗುಡಿ ಪೀಠದಲ್ಲಿ ಬಾಲರಾಮ – ಮೊದಲ ಚಿತ್ರ ವೈರಲ್
ಸರಿಸುಮಾರು 15 ದಿನಗಳ ಕಾಲ ಅರುಣ್ ಒಂದು ಕಣ್ಣು ಮುಚ್ಚಿಕೊಂಡೇ ಶಿಲ್ಪ ಕೆತ್ತನೆ ಮಾಡಿದ್ದರು. ಈ ಬಗ್ಗೆ ನನಗಾಗಲಿ ನಮ್ಮ, ಕುಟುಂಬಸ್ಥರಿಗಾಗಿ ಹೇಳಿರಲಿಲ್ಲ. ಅಲ್ಲಿ ಕೆಲಸ ಮಾಡುತ್ತಿದ್ದವರು ವಿಷಯ ತಿಳಿಸಿದಾಗ ತುಂಬಾ ಭಯವಾಗಿತ್ತು. ಚಿಕಿತ್ಸೆ ಪಡೆದ ಒಂದೆರಡು ದಿನಗಳಲ್ಲಿ ಅವರೇ ಕರೆ ಮಾಡಿ ವಿಷಯ ತಿಳಿಸಿ, ಆರಾಮಾಗಿದ್ದೇನೆ ಎಂದು ಹೇಳಿದರು. ನಂತರ ನಮಗೆ ಸಮಾಧಾನವಾಯಿತು. ಅಷ್ಟಾದರೂ ವಿಶ್ರಾಂತಿ ತೆಗೆದುಕೊಳ್ಳದೇ ಶಿಲ್ಪ ಕೆತ್ತನೆ ಮಾಡಿದ್ದರು. ಇದೆಲ್ಲವು ಆ ಭಗವಂತನದ್ದೇ ಕೃಪೆ ಎಂದು ಭಾವುಕರಾಗಿದ್ದಾರೆ.
ಇದೇ ಜನವರಿ 22ರಂದು ಅಯೋಧ್ಯೆಯ ರಾಮಮಂದಿರದ ಪೀಠದಲ್ಲಿ ನೆಲೆಸಿರುವ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ. ಇದನ್ನೂ ಓದಿ: Ayodhya Ram Mandir: ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ