ತಮ್ಮ ನಿವಾಸದಲ್ಲೇ ಸೆಹ್ವಾಗ್ ಮದ್ವೆ ಮಾಡಿಸಿದ್ದ ಅರುಣ್ ಜೇಟ್ಲಿ

Public TV
1 Min Read
sehwag arun

ನವದೆಹಲಿ: ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಅವರು ಶನಿವಾರ ಮಧ್ಯಾಹ್ನ ನಿಧನರಾಗಿದ್ದು, ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ. ಈ ಮಧ್ಯೆ ಅಗಲಿದ ದಿವ್ಯ ಚೇತನರ ಅಂತಿಮ ದರ್ಶನ ಪಡೆದು ಸಾವಿರಾರು ಮಂದಿ ಕಂಬನಿ ಮಿಡಿಯುವ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.

ಕೇವಲ ರಾಜಕಾರಣ ಮಾತ್ರವಲ್ಲದೇ ಜೇಟ್ಲಿ ಅವರಿಗೆ ಬೇರೆ ಕ್ಷೇತ್ರಗಳಲ್ಲಿಯೂ ಆಸಕ್ತಿ ಹೆಚ್ಚಾಗಿತ್ತು. ಕ್ರಿಕೆಟ್ ಪ್ರಿಯರಾಗಿದ್ದ ಅವರು ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಜೇಟ್ಲಿ ಮೃತಪಟ್ಟ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಕ್ರಿಕೆಟ್ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿ ಕಂಬನಿ ಮಿಡಿದಿದ್ದರು. ಅಲ್ಲದೆ ನನಗೆ ಹಾಗೂ ಇತರ ಆಟಗಾರರಿಗೆ ಜೇಟ್ಲಿ ಅವರು ಹೇಗೆ ಸಹಾಯ ಮಾಡಿದ್ದರು ಎಂಬುದನ್ನು ಮೆಲುಕು ಹಾಕಿಕೊಂಡಿದ್ದರು.

ಕುತೂಹಲಕಾರಿ ವಿಚಾರವೆಂದರೆ, ಸೆಹ್ವಾಗ್ ಹಾಗೂ ಆರತಿ ಅವರ ವಿವಾಹವನ್ನು 2004ರಲ್ಲಿ ಅರುಣ್ ಜೇಟ್ಲಿ ಅವರು ತಮ್ಮ ನಿವಾಸದಲ್ಲಿಯೇ ಮಾಡಿಸಿದ್ದರು. ಮದುವೆಯನ್ನು ತನ್ನ ಅಧಿಕೃತ ಬಂಗಲೆಯಲ್ಲೇ ನಡೆಸಬೇಕೆಂದು ಸೆಹ್ವಾಗ್ ಅವರ ತಂದೆಗೆ ಜೇಟ್ಲಿ ಸೂಚಿಸಿದ್ದರು. ಹೀಗಾಗಿ 9 ನೇಯ ಅಶೋಕ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ವಿವಾಹ ಸಮಾರಂಭ ನೆರವೇರಿತ್ತು.

ಸೆಹ್ವಾಗ್ ಮದುವೆ ಸಮಾರಂಭಕ್ಕೋಸ್ಕರ ಜೇಟ್ಲಿ ತಮ್ಮ ನಿವಾಸವನ್ನು ಅಲಂಕಾರ ಮಾಡಿದ್ದರು. ಅಲ್ಲದೆ ಅತಿಥಿಗಳಿಗಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದರು. ಆದರೆ ಜೇಟ್ಲಿ ಅವರು ಮಾತ್ರ ಬೆಂಗಳೂರಿನಲ್ಲಿ ಇದ್ದುದ್ದರಿಂದ ಮದುವೆಗೆ ಹಾಜರಾಗಿರಲಿಲ್ಲ. ಇದನ್ನೂ ಓದಿ: ಭಾನುವಾರ ನಿಗಮ್‍ಬೋಧ್ ಘಾಟ್‍ನಲ್ಲಿ ಅರುಣ್ ಜೇಟ್ಲಿ ಅಂತ್ಯಕ್ರಿಯೆ

ಮದುವೆಗೆ ಕ್ರೀಡಾಲೋಕದ ಗಣ್ಯರು, ಬಾಲಿವುಡ್ ನಟ-ನಟಿಯರು, ರಾಜಕೀಯ ನಾಯಕರುಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಹೀಗಾಗಿ ಮದುವೆಗೆ ಬರುವವರು ಆಮಂತ್ರಣ ಪತ್ರಿಕೆ ತರುವುದು ಕಡ್ಡಾಯ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ತಮ್ಮನ್ನು ಅಗಲಿದ ಸುದ್ದಿ ತಿಳಿದ ತಕ್ಷಣವೇ ಸೆಹ್ವಾಗ್ ಅವರು ಟ್ವೀಟ್ ಮಾಡಿ ತಮಗೆ ಸಹಾಯ ಮಾಡಿರುವ ಜೇಟ್ಲಿ ಅವರನ್ನು ನೆನೆದು ಕಣ್ಣೀರಾದರು.

Share This Article
Leave a Comment

Leave a Reply

Your email address will not be published. Required fields are marked *