ಇಂದಿರಾ ಗಾಂಧಿಯವರನ್ನು ಹಿಟ್ಲರ್ ಗೆ ಹೋಲಿಸಿದ ಅರುಣ್ ಜೇಟ್ಲಿ

Public TV
1 Min Read
ARUN JEITLEY INDIRA GANDHI

ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರುವ ಮೂಲಕ ಪ್ರಜಾಪ್ರಭುತ್ವವನ್ನು ಸಾಂವಿಧಾನಿಕ ಸರ್ವಾಧಿಕಾರವಾಗಿ ನಿರ್ಮಿಸಿ ಜರ್ಮನಿಯ ಹಿಟ್ಲರ್ ನಂತೆ ಅಧಿಕಾರ ಸಾಧಿಸಿದ್ದರು ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಆರೋಪಿಸಿದ್ದಾರೆ.

1975ರ ಜೂನ್ 25ರಂದು ತುರ್ತು ಪರಿಸ್ಥಿತಿಯ ದಿನಗಳನ್ನು ತಮ್ಮ ಫೇಸ್‍ಬುಕ್ ನಲ್ಲಿ ಸುಧೀರ್ಘವಾಗಿ ಮೂರು ಭಾಗಗಳಲ್ಲಿ ಪ್ರಕಟಿಸುತ್ತಿರುವ ಅವರು ಮೊದಲನೇ ಭಾಗವನ್ನು ಭಾನುವಾರ ಹಾಗೂ ಎರಡನೇ ಭಾಗವನ್ನು ಸೋಮವಾರ ಪ್ರಕಟಗೊಳಿಸಿದ್ದಾರೆ. ಮೂರನೇ ಭಾಗ ಪ್ರಕಟವಾಗಬೇಕಾಗಿದ್ದು, ಇದರಲ್ಲಿನ ಪ್ರಮುಖ ಅಂಶಗಳನ್ನು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇಂದಿರಾ ಗಾಂಧಿ ಮತ್ತು ಹಿಟ್ಲರ್ ಸಂವಿಧಾನವನ್ನು ರದ್ದುಗೊಳಿಸಲಿಲ್ಲ. ಅವರು ಪ್ರಜಾಪ್ರಭುತ್ವವನ್ನು ಸರ್ವಾಧಿಕಾರವನ್ನಾಗಿ ರೂಪಿಸಲು ಸಂವಿಧಾನವನ್ನೇ ಬಳಸಿಕೊಂಡಿದ್ದರು ಎಂದು ಉಲ್ಲೇಖಿಸಿದ್ದಾರೆ.

1975ರ ಜೂನ್ 25ರಂದು ಪ್ರತಿಪಕ್ಷಗಳು ದೇಶದಲ್ಲಿ ಅಸ್ಥಿರತೆ ಸೃಷ್ಟಿಸಲು ಸಂಚು ಹೂಡಿವೆ ಎಂದು ವಾದಮಾಡಿ, ಸಂವಿಧಾನದ ವಿಧಿ 352ರ ಅಡಿಯಲ್ಲಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಇದು ಹಿಟ್ಲರ್ ಧೋರಣೆಯ ಅನುಕರಣೆಯಾಗಿತ್ತು. ಹಿಟ್ಲರ್ ತನ್ನ ಅಧಿಕಾರದಲ್ಲಿ ಸಂಸತ್‍ನ ಬಹುತೇಕ ಪ್ರತಿಪಕ್ಷ ನಾಯಕರನ್ನು ಬಂಧಿಸಿ, ಕಡಿಮೆ ಸಂಖ್ಯಾಬಲ ಹೊಂದಿದ್ದ ಸರ್ಕಾರವನ್ನು 2/3 ಬಹುಮತದ ಸರ್ಕಾರವನ್ನಾಗಿ ಪರಿವರ್ತಿಸಿದ್ದು ಇದೇ ರೀತಿ ಇಂದಿರಾ ಗಾಂಧಿಯವರು ಸಂಚು ರೂಪಿಸಿದ್ದರು ಎಂದು ತಮ್ಮ ಬರಹದಲ್ಲಿ ಹೇಳಿಕೊಂಡಿದ್ದಾರೆ.

ಕಾನೂನಿನಲ್ಲಿ ಬದಲಾವಣೆ ಮಾಡುವ ಮೂಲಕ ಅಮಾನ್ಯ ಚುನಾವಣೆಯನ್ನು ಮಾನ್ಯ ಮಾಡುವುದಕ್ಕೋಸ್ಕರ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಿದ್ದರು. ಭಾರತವನ್ನು ವಂಶಾಡಳಿತಕ್ಕೆ ಒಳಪಡಿಸಲು ಇಂದಿರಾ ಗಾಂಧಿ ಮುಂದಾಗಿದ್ದರು ಎಂದು ಬರೆದುಕೊಂಡಿದ್ದಾರೆ.

ತುರ್ತು ಪರಿಸ್ಥಿತಿಯ ವಿರುದ್ಧ ಮೊದಲ ಸತ್ಯಾಗ್ರಹ ನಡೆಸಿದ್ದನ್ನು ನೆನಪಿಸಿಕೊಂಡ ಅವರು 1975ರ ಜೂನ್ 26ರಂದು ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಪ್ರತಿಭಟನೆಯ ನೇತೃತ್ವವಹಿಸಿಕ್ಕೆ ನನ್ನನ್ನು ತಿಹಾರ್ ಜೈಲಿಗೆ ಅಟ್ಟಿದ್ದರು ಎಂದು ಅವರು ಜ್ಞಾಪಿಸಿಕೊಂಡಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *