ಹಾವೇರಿ: ಕುಂಚ ಹಿಡಿದುಕೊಂಡು ಒಂದು ಕೈಯಲ್ಲಿ ಚಿತ್ರ ಬಿಡಿಸುವ ಕಲಾವಿದರನ್ನು ನೀವು ನೋಡಿರಬಹುದು. ಆದರೆ ಜಿಲ್ಲೆಯ ಕಲಾವಿದರೊಬ್ಬರು ಕೈಯಲ್ಲಿನ ಐದೂ ಬೆರಳಿಗೆ ಕುಂಚ ಕಟ್ಟಿಕೊಂಡು ಸಲೀಸಾಗಿ ಚಿತ್ರ ಬಿಡಿಸುತ್ತಾರೆ.
ಬ್ಯಾಡಗಿ ಪಟ್ಟಣದ ಹೂಗಾರ ನಿವಾಸಿ ಸುಭಾಶ್ ಅವರು 5 ಬೆರಳಿನಲ್ಲಿ ಕುಂಚವನ್ನು ಕಟ್ಟಿಕೊಂಡು ಚಿತ್ರ ಬಿಡಿಸಿ ಫೇಮಸ್ ಆಗಿದ್ದಾರೆ. ವೃತ್ತಿಯಲ್ಲಿ ಚಿತ್ರಕಲಾ ಶಿಕ್ಷಕರಾಗಿರುವ ಸುಭಾಶ್ ಸದಾ ಹೊಸ ಹೊಸ ಪ್ರಯತ್ನ ಮಾಡುತ್ತಿರುತ್ತಾರೆ. ಬಾಲ್ಯದಿಂದಲೂ ಚಿತ್ರ ಬಿಡಿಸುವುದನ್ನು ಕರಗತ ಮಾಡಿಕೊಂಡಿರುವ ಸುಭಾಶ್ ಈಗಾಗಲೇ ಸಾವಿರಾರು ಚಿತ್ರಗಳನ್ನು ಬಿಡಿಸಿದ್ದಾರೆ.
Advertisement
Advertisement
ಆರಂಭದಲ್ಲಿ ಸುಭಾಶ್ ಸಹ ಕೈಯಲ್ಲಿ ಕುಂಚ ಹಿಡಿದುಕೊಂಡು ಚಿತ್ರ ಬಿಡಿಸುತ್ತಿದ್ದರು. ಆಗ ಒಂದು ಚಿತ್ರ ಬಿಡಿಸಲು ಹೆಚ್ಚಿನ ಸಮಯ ಬೇಕಾಗುತ್ತಿತ್ತು. ಹೀಗಾಗಿ ಕೈಯಲ್ಲಿನ ಐದೂ ಬೆರಳಿಗೆ ಕುಂಚ ಕಟ್ಟಿಕೊಂಡು ಚಿತ್ರ ಬಿಡಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಏಕಕಾಲಕ್ಕೆ ಐದೂ ಬೆರಳಿಗೆ ಕುಂಚ ಕಟ್ಟಿಕೊಂಡು ಚಿತ್ರ ಬಿಡಿಸುವುದರಿಂದ ಕಡಿಮೆ ಅವಧಿಯಲ್ಲಿ ಚಿತ್ರವನ್ನು ಸುಲಭವಾಗಿ ಬಿಡಿಸಬಹುದು ಎಂದು ಹೇಳುತ್ತಾರೆ.
Advertisement
Advertisement
ಬೆರಳಿಗೆ ಕುಂಚ ಕಟ್ಟಿಕೊಂಡು ಗೀಚಾಟ ಶುರು ಮಾಡಿದರೆ ಸಾಕು ನೋಡ ನೋಡುತ್ತಿದ್ದಂತೆ ಚಿತ್ರಗಳು ನಮ್ಮೆದುರಿಗೆ ನಿಲ್ಲುತ್ತವೆ. ನಿಸರ್ಗ, ಜಾನಪದ ಕಲೆ, ಮಹಾಪುರುಷರ ಚಿತ್ರಗಳು, ವಿಭಿನ್ನವಾದ ಕಲೆಗಳು ಜೀಗೆ ತರಹೇವಾರಿ ಚಿತ್ರಗಳನ್ನು ಕಲಾವಿದ ಸುಭಾಶ್ ಪಟಾಪಟ್ ಅಂತಾ ಬಿಡಿಸ್ತಾರೆ. ಬೆರಳಿಗೆ ಕುಂಚ ಕಟ್ಟಿಕೊಂಡು ಬಣ್ಣಗಳನ್ನು ರೆಡಿ ಮಾಡಿಕೊಂಡು ಚಿತ್ರಗಳನ್ನು ಸೊಗಸಾಗಿ ಬಿಡಿಸುತ್ತಾರೆ.
ಸುಭಾಶ್ ಕೈಯಲ್ಲಿ ಅರಳಿದ ಚಿತ್ರಗಳು ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಈಗಾಗಲೇ ಪ್ರದರ್ಶನ ಕಂಡಿವೆ. ಕನಿಷ್ಟ 10 ಸಾವಿರ ರೂ. ಹಾಗೂ ಲಕ್ಷ ಲಕ್ಷಕ್ಕೂ ಮಾರಾಟ ಆಗಿದೆ. ಅನೇಕ ಬಾರಿ ಚಿತ್ರ ಸಂತೆಗಳಲ್ಲಿ ಸುಭಾಶ್‍ರ ಕೈಯಲ್ಲಿ ಅರಳಿದ ಸಾಕಷ್ಟು ಚಿತ್ರಗಳು ಮಾರಾಟ ಆಗಿದೆ. ಶಿಕ್ಷಕ ಸುಭಾಶ್‍ರ ಚಿತ್ರಕಲೆಗೆ ಮನಸೋಲದವರೆ ಇಲ್ಲ. ಇವರ ಚಿತ್ರಗಳನ್ನು ನೋಡುತ್ತಾ ನಿಂತರೆ ಮನಸ್ಸಿಗೆ ಮುದ, ಕಣ್ಣಿಗೆ ಹಬ್ಬ ಉಂಟು ಮಾಡುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv