CinemaKarnatakaLatestMain PostSandalwood

ಪೋಷಕ ಕಲಾವಿದರ ಸಂಘದ ಕಾರ್ಯದರ್ಶಿ ಅಶ್ಲೀಲ ವಿಡಿಯೋ ಕಳಿಸ್ತಾರೆ : ನಟಿ ರಾಣಿ ಆರೋಪ

ರ್ನಾಟಕ ಪೋಷಕ ಕಲಾವಿದರ ಸಂಘದ ಭಿನ್ನಾಭಿಪ್ರಾಯ ಇದೀಗ ಬೀದಿಗೆ ಬಂದಿದೆ. ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ನಡೆಗೆ ಸಿನಿಮಾ ಹಾಗೂ ಕಿರುತೆರೆ ನಟಿ ರಾಣಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹಣಕಾಸಿನ ಅವ್ಯವಹಾರದ ಜೊತೆ ಮಹಿಳೆಯರಿಗೆ ಸಂಘದಲ್ಲಿರುವವರು ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದರು ಎಂದು ಗುರುತರ ಆರೋಪ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟಿ ರಾಣಿ, ‘ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಮತ್ತು ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಮೇಲೆ ಆರೋಪ ಮಾಡಿದ್ದು, ತಮ್ಮದು ಪೋಷಕ ಕಲಾವಿದರ ಸಂಘದ ಮೇಲೆ ಆರೋಪ ಮಾಡುವುದಿಲ್ಲ’  ಎಂದಿದ್ದಾರೆ. ಮಹಿಳೆಯರನ್ನು ಅಗೌರವದಿಂದ ಇವರು ನಡೆಸಿಕೊಳ್ಳುತ್ತಾರೆ. ಅದರಲ್ಲೂ ಸಂಘದ ಕಾರ್ಯದರ್ಶಿಗಳೇ ಸಂಘದಲ್ಲಿ ಇರುವಂತಹ ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ ಎಂದು ಆರೋಪ ಮಾಡಿದ್ದಾರೆ.

‘ನಾನು ಈ ಸಂಘದಲ್ಲಿ 15 ವರ್ಷಗಳಿಂದ ಇದ್ದೇನೆ. ಚುನಾವಣೆಯಲ್ಲಿ ಗೆದ್ದು ಉಪಾಧ್ಯಕ್ಷೆ ಆಗಿದ್ದೇನೆ. ಸಂಘದ ಚಟುವಟಿಕೆಗಳಲ್ಲಿ ಭಾಗಿ ಆಗಲು ಬಿಡುತ್ತಿಲ್ಲ. ಸಂಘದ ಲೆಕ್ಕಾಚಾರ ಕೇಳಿದರೆ, ನಮಗೆ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಾರೆ. ಅವರವರೇ ಸೇರಿಕೊಂಡು ಕೆಲಸ ಮಾಡಿಕೊಳ್ಳುತ್ತಾರೆ. ಪ್ರತಿಭಟಿಸಿದರೆ ಕೊಳಕು ಭಾಷೆ ಬಳಸುತ್ತಾರೆ. ಸುಮ್ಮನೆ ಇರದೇ ಇದ್ದರೆ ರಾಜಿನಾಮೆ ಕೊಟ್ಟು ಹೋಗಿ ಎಂದು ಹೆದರಿಸುತ್ತಾರೆ’ ಎನ್ನುತ್ತಾರೆ ರಾಣಿ.

ಸಂಘದ ಕಾರ್ಯದರ್ಶಿ ಬಗ್ಗೆಯೇ ಹೆಚ್ಚು ಮಾತನಾಡಿರುವ ರಾಣಿ, ‘ಮಹಿಳೆಯರಿಗೆ ಅಗೌರವ ತೋರೋ ರೀತಿಯಲ್ಲಿ ಅವರು ಮಾತಾಡಿದ್ದಾರೆ. ಕೆಲವೊಮ್ಮೆ ಅಶ್ಲೀಲ ವಿಡಿಯೋ ಕಳಿಸ್ತಿದ್ರು. ಆ ವಿಚಾರವಾಗಿ ಗಲಾಟೆಯೂ ಆಗಿದೆ. ಸಭೆಯಲ್ಲಿ ದೊಡ್ಡ ಚರ್ಚೆಯಾಗಿ ಸಮಾಧಾನ ಮಾಡಿದರು. ಹಣಕಾಸಿನ ದುರುಪಯೋಗದ ಬಗ್ಗೆ ಕೇಳೀದಾಗ ಅವಾಚ್ಯ ಶಬ್ದಗಳಿಂದ  ನಿಂದನೆ ಮಾಡಿದರು. ಉಪಾಧ್ಯಕ್ಷೆ ಸ್ಥಾನದಿಂದ ಏಕಾಏಕಿ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ. ಹೀಗಾಗಿ ನ್ಯಾಯ ಸಿಗಬೇಕು ಅಂತ ಹೋರಾಟ ಮಾಡ್ತಿದ್ದಿನಿ’ ಎಂದಿದ್ದಾರೆ ರಾಣಿ.

Live Tv

Leave a Reply

Your email address will not be published. Required fields are marked *

Back to top button