ದಾವಣಗೆರೆ: ಮೊಗಲ್ ದೊರೆ ಶಹಜಾನ್ ತನ್ನ ಪ್ರೇಯಸಿಗಾಗಿ ಆಗ್ರಾದಲ್ಲಿ ತಾಜ್ ಮಹಲ್ ಕಟಿಸಿದ್ರೆ, ಬೆಣ್ಣೆನಗರಿ ದಾವಣಗೆರೆಯಲ್ಲಿ ಜನರಿಗಾಗಿ ಎಕ್ಸ್ಫೋ ಸಂಘಟನೆಯಿಂದ ತಾಜ್ ಮಹಲ್ ನಿರ್ಮಾಣ ಮಾಡಲಾಗಿದೆ.
ಇದು ಕೃತಕ ತಾಜ್ ಮಹಲ್. ಪ್ಲೈವುಡ್ ಬಳಸಿ ಮೊಗಲ್ ಶೈಲಿಯಲ್ಲಿ, ಗುಮ್ಮಟಾಕಾರದಲ್ಲಿ, ಅಮೃತ ಶಿಲೆಯ ಬಣ್ಣದಲ್ಲಿ ನಿರ್ಮಿಸಿರೋ ಈ ತಾಜ್ ಮಹಲ್ ನೋಡಲು ನೂರಾರು ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ಪ್ರತಿ ವರ್ಷ ಯಾವುದಾದರೊಂದು ಅದ್ಭುತಗಳನ್ನು ನಿರ್ಮಾಣ ಮಾಡುವ ಎಕ್ಸ್ಫೋ ಸಂಘಟನೆ ಈ ಬಾರಿ ತಾಜ್‍ಮಹಲ್ ನಿರ್ಮಿಸಿದೆ. 1 ಕೋಟಿ ರೂ. ವೆಚ್ಚದಲ್ಲಿ 20 ದಿನಗಳ ಕಾಲ 60 ಮಂದಿ ಕಲಾವಿದರು ಈ ಪ್ರೇಮಸೌಧವನ್ನ ನಿರ್ಮಿಸಿದ್ದಾರೆ.
ರಿಯಲ್ ತಾಜ್‍ಮಹಲ್ ಮುಂಭಾಗದಲ್ಲಿ ಇರುವಂತೆ ಇಲ್ಲಿಯೂ ನೀರಿನ ಕಾರಂಜಿ, ಉದ್ಯಾನವನ, ಫೋಟೋ ಕ್ಲಿಕ್ಕಿಸಲು ಆಸನದ ವ್ಯವಸ್ಥೆ ಮಾಡಲಾಗಿದ್ದು ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ತಾಜ್ ಮಹಲ್ ಬಳಿ ಪ್ರೇಮಿಗಳು, ಚಿಕ್ಕಮಕ್ಕಳು, ಯುವಕ ಯುವತಿಯರು ಸೆಲ್ಫೀ ಕ್ಲಿಕಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ. ಒಟ್ಟಾರೆ ಸಾವಿರಾರು ರೂಪಾಯಿ ಖರ್ಚು ಮಾಡಿ, ನೂರಾರು ಕಿಲೋ ಮೀಟರ್ ಪ್ರಯಾಣ ಮಾಡದೇ ತಾಜ್‍ಮಹಲ್ ನೋಡ್ತಿರೋ ದಾವಣಗೆರೆ ಜನ ಫುಲ್ ಖುಷಿಯಾಗಿದ್ದಾರೆ.