ನಿನ್ನೆ ಉರಿ ಬಿಸಿಲಿನ ಹೊತ್ತಲ್ಲಿ ತಾಳಗುಪ್ಪದಿಂದ ಹೊನ್ನೆಮರಡಿನ (Honnemaradu) ದಾರಿಯಲ್ಲಿ ನಡೆದುಕೊಂಡು ಹೋಗ್ತಾ ಇದ್ದೆ.. ಉರಿ ಬಿಸಿಲು… ಝರಿ ಸದ್ದು…. ನಡುವೆ ಗಹಗಹಿಸಿ ನಗುವ ಸದ್ದು! ಯಾರು ಎಂದು ನೋಡಿದರೆ, ಸುತ್ತಮುತ್ತ ಯಾರೂ ಕಾಣ್ತಿಲ್ಲ..! ಸುಮ್ಮನೆ ಮತ್ತಷ್ಟು ದೂರ ನಡೆದಾಗ ಗೊತ್ತಾಗಿದ್ದು ಇದು ಭೂಮಿಯ (Earth) ನಗು..!
ಹೌದು ಭೂಮಿ ನಗುತ್ತದೆ…! ಸುಡುವ ಬಿಸಿಲಿನ ಪ್ರೇಮದಲ್ಲಿ..! ಹೇಗೆ ಚಿನ್ನ ಸುಟ್ಟು ಹೊಳಪು ಪಡೆಯುತ್ತದೆಯೋ ಹಾಗೆ ಭೂಮಿಯೂ ಸುಡುವ ಬಿಸಿಲಲ್ಲಿ ಬೆಂದು ತನ್ನ ನಗುವಿನ ಹೊಳಪನ್ನ ಪಡೆದುಕೊಳ್ಳುತ್ತದೆ. ಆಶ್ಚರ್ಯ ಆಯ್ತಾ? ಆದ್ರೂ ಇದು ಸತ್ಯ! ಭೂಮಿ ನಗುತ್ತದೆ. ಹೂಗಳ (Malnad Flowers) ರೂಪದಲ್ಲಿ! ಭೂಮಿ ತನ್ನೆಲ್ಲ ಗಂಧ, ಪ್ರೇಮವನ್ನು ಹೂಗಳಲ್ಲಿ ಸೇರಿಸಿ ಚಲುವಿನ ವನವನ್ನು ಸೃಷ್ಠಿಸಿ, ಉರಿ ಬಿಸಿಲಿಗೆ ಸವಾಲೆಸೆದು ನಗುತ್ತದೆ.
ಕವಿ ಹಾಗೂ ತತ್ವಜ್ಞಾನಿ ರಾಲ್ಫ್ ವಾಲ್ಡೋ ಎಮರ್ಸನ್ ʻಭೂಮಿಯು ಹೂವುಗಳಲ್ಲಿ ನಗುತ್ತದೆʼ ಎಂದು ಒಂದು ಕಡೆ ಬರೆಯುತ್ತಾನೆ. ಹೌದಲ್ಲವೇ? ಭೂಮಿ ಹೀಗೆ ಅಲ್ವಾ ನಗೋದು..? ನಮಗೆ ನೋಡೋಕೆ ಕಣ್ಣು ಬೇಕು ಅಷ್ಟೇ! ಬೇಕಿದ್ರೆ ಇಂದೇ ಪರೀಕ್ಷೆ ಮಾಡ್ನೋಡಿ. ನಿಮ್ಮ ಮನೆಯ ಅಕ್ಕಪಕ್ಕದ ಗಿಡಗಳ ಬಳಿ ನಿಂತು ಆ ನಗುವನ್ನು ಆನಂದಿಸಿ, ಗಿಡಗಳ ಜೊತೆ ಕೆಲಕಾಲ ಮಾತಾಡಿ! ಆ ಅಂದ ಗಂಧವನ್ನು ಆಸ್ವಾದಿಸಿ!
ಇಂತಹ ಅನುಭವ ನಮಗೆ ಸಿಗುವುದು, ರಾಶಿ ರಾಶಿ ಹೂಗಳು ಬೆಟ್ಟದ ಮೇಲೆ, ರಸ್ತೆಯ ಬದಿಯ ಮೇ ಫ್ಲವರ್ ಅರಳಿ ನಿಂತಾಗ ಮಾತ್ರ ಏನಲ್ಲ. ಕೆಲವೊಮ್ಮೆ ಒಂದೇ ಹೂ ಸಹ ನಮ್ಮನ್ನು ಹೀಗೆ ಸೆಳೆಯಬಹುದು. ಉದಾಹರಣೆಗೆ ʻವರ್ಡ್ಸ್ ವರ್ತ್ ಡ್ಯಾಫೋಡಿಲ್ಸ್ ಪದ್ಯದಲ್ಲಿ Ten thousand saw I at a glance ಸಾಲು ಬರೆಯುವಾಗ… ಅವನು 10,000 ಡ್ಯಾಫೋಡಿಲ್ಸ್ ಹೂಗಳನ್ನು ನೋಡಿ ಲೆಕ್ಕ ಮಾಡಿರಲ್ಲ, ಅದೊಂದು ಮಾತಷ್ಟೇ! ಹಾಗೆ ಒಂದೇ ಒಂದು ಹೂವು ಸಹ ನಮಗೆ ಸಾವಿರಾರು ಹೂಗಳ ಅನುಭವ ಕೊಡಬಹುದು!
ನಮ್ಮ ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿ ಎಪ್ರಿಲ್, ಮೇ ತಿಂಗಳ ಅವಧಿಯಲ್ಲಿ ಅದೆಷ್ಟು ರಾಶಿ ರಾಶಿ ಮೇ ಫ್ಲವರ್ ಅರಳಿ ನಿಂತಿರುತ್ತವೆ ಅಂದ್ರೆ, ಈ ಹೂಗಳ ಲೋಕದಲ್ಲಿ ಕಳೆದು ಹೋಗದವರಿಲ್ಲ. ಅಂತಹ ಒಂದು ಅನುಭವ ಅಲ್ಲಿ ಪಡೆದಿದ್ದೇನೆ. ಕೆಂಪು ಹಳದಿಯ ಆ ಹೂಗಳು ಕನ್ನಡದ ಭಾವುಟ ನೆಟ್ಟಂತೆ ವಿಶೇಷವಾದ ಅನುಭವಕ್ಕೆ ನಮ್ಮನ್ನು ತೆರೆದಿಡುತ್ತವೆ. ನಮ್ಮಲ್ಲಿಯ ಅನೇಕ ನೋವುಗಳಿಗೆ ಗಂಧವನ್ನು, ನಗುವನ್ನು ಲೇಪಿಸಿ, ಹೊಸಬರನ್ನಾಗಿ ಮಾಡಿ ಕಳಿಸುವ ಈ ಹೂಗಳಿಗೆ ನಾನಂತೂ ಥ್ಯಾಂಕ್ಸ್ ಹೇಳ್ತೇನೆ!
ನನ್ನ ಸ್ನೇಹಿತೆ ಒಬ್ಬಳು ಹೇಳ್ತಿದ್ರು, ಪ್ರವಾಸಿಗರ ಕಿರಿಕಿರಿ ಇಲ್ಲದೇ ಇದ್ದಾಗ 12 ವರ್ಷಕ್ಕೊಮ್ಮೆ ಚಿಕ್ಕಮಗಳೂರಲ್ಲಿ ಅರಳುವ ಕುರಂಜಿ (Neelakurinji) ಹೂ ನೋಡೋಕೆ ಹೋಗ್ಬೇಕು… ಅದೆಷ್ಟು ಮಜಾ ಕೊಡುತ್ತೆ ಗೊತ್ತಾ ಅಂತ! ಹೌದು ಇಂತಹ ಜಾಗಗಳಿಗೆ ಒಬ್ಬಂಟಿಯಾಗೇ ಹೋಗ್ಬೇಕು! ಆಗಷ್ಟೇ ಹೂವುಗಳು ನಮ್ಮ ಬಳಿ ಮಾತಾಡ್ತವೆ! ಇನ್ನೂ ಸಸ್ಯ ವಿಜ್ಞಾನದಲ್ಲಿ ಕುರುಂಜಿಗೆ ‘ಸ್ಟ್ರೋಬಿಲಾಂಥಿಸ್’ ಎಂಬ ಹೆಸರು ಇದ್ದು, 70ಕ್ಕೂ ಹೆಚ್ಚು ಪ್ರಬೇಧಗಳು ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತವೆ.
ನೀವು ಈ ನಗುವನ್ನು ನೋಡಲು ವಿಶೇಷವಾದ ಶಕ್ತಿ ಬೇಕು..! ಆ ಶಕ್ತಿ ಕಣ್ಣಿಗೆ ಬರಬೇಕಾದರೆ ಅದಕ್ಕೊಂದು ಆಧ್ಯಾತ್ಮದ ಪ್ರೇಮವೇ ಘಟಿಸಬೇಕು! ಆಗಾಧವಾದ ಪ್ರೇಮದಿಂದ ಕಣ್ಣುಗಳನ್ನು ತೆರೆಯಬೇಕು, ಆಗಷ್ಟೇ ನಮಗೆ ನಮ್ಮಿಷ್ಟದ ವಿಶೇಷ ಸಂಗತಿಗಳು ಕಾಣ ಸಿಗುತ್ತವೆ. ಕೈಗೆ ಎಟುಕುತ್ತವೆ. ನಮ್ಮನ್ನು ಯಾವುದೋ ಆನಂದ ಬಿಂದುವಿನ ಮಧ್ಯದಲ್ಲಿ ತಂದು ನಿಲ್ಲಿಸುತ್ತದೆ. ಅಂತಹ ದಿವ್ಯವಾದ ಧ್ಯಾನದ ಕಣ್ಣನ್ನು ತೆರೆದುಕೊಳ್ಳುವ ಮಾರ್ಗವನ್ನು ಕಂಡುಕೊಳ್ಳುವ ಯತ್ನ ಮಾಡಬೇಕು. ಇನ್ನೂ ಕೆಲವರಿಗೆ ಅದು ದೈವ ಕೃಪೆ.
ಹಾಗೆಯೇ ಈ ಗಿಡಗಳು, ಹೂಗಳು, ಹರಿವ ನದಿಗಳು, ಎಲ್ಲೋ ಹಾಡುವ ಹಕ್ಕಿಗಳಲ್ಲಿ ಅಂತಹ ದೈವಿಕ ಅಂಶಗಳನ್ನು ಹೆಕ್ಕಲು ಸಾಧ್ಯವಾಗುತ್ತದೆ. ಅದನ್ನೇ ಬಹುಶಃ ರಾಲ್ಫ್ ವಾಲ್ಡೋ ಎಮರ್ಸನ್ ಅನುಭವಿಸಿದ್ದಾನೆ. ಅಂತಹ ಅನುಭವವನ್ನು ನಾನು ಪಡೆದಿದ್ದೇನೆ ಎಂಬ ಹೆಮ್ಮೆಯೊಂದು ನನ್ನ ಹೆಗಲ ಮೇಲೆ ಕೂತಿದೆ! ಹಾಗೆ ಮನೆಗೆ ನಡೆದುಕೊಂಡು ಹೋದವನಿಗೆ ಹೂಗಳ ನಗುವಿನ ನೆರಳಲ್ಲಿ ಬಿಸಿಲ ಝಳದ ಅರಿವೇ ಆಗಲಿಲ್ಲ.
ಹೂಗಳು ಮಾತಾಡುತ್ತವೆ, ನಗುತ್ತವೆ… ಭೂಮಿಯ ಗಂಧವನ್ನೆಲ್ಲ ಹೊದ್ದು, ನಮ್ಮ ಆತ್ಮಕ್ಕೆ ಸಂತೃಪ್ತಿಯನ್ನೀಯಲು?! ಆ ದಿವ್ಯ ಅನುಭವ ನಿಮಗೂ ಸಿಗಲಿ ಎಂಬುದೇ ನನ್ನ ಆಶಯ. – ಗೋಪಾಲಕೃಷ್ಣ