ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 37ಂ ನೇ ವಿಧಿಯನ್ನು (Article 370) ರದ್ದುಗೊಳಿಸಿರುವ ಕೇಂದ್ರ ಸರ್ಕಾರ, ತನ್ನ ಆಡಳಿತದಲ್ಲಿ ಕಾಶ್ಮೀರಕ್ಕೆ ನಿಜವಾದ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದು, ಸ್ವಾತಂತ್ರ್ಯ ದೊರಕಿದೆ ಎಂದು ಸದಾ ಹೇಳುತ್ತಿದೆ. ಈ ಮೂಲಕ 37ಂನೇ ವಿಧಿಯನ್ನು ರದ್ದುಗೊಳಿಸಿದ್ದನ್ನು ಚುನಾವಣಾ ಅಸ್ತ್ರವಾಗಿ ಬಿಜೆಪಿ (BJP) ಬಳಸಿಕೊಳ್ಳುತ್ತಿದೆ.
ಇತ್ತೀಚೆಗೆ ನಾಗ್ಪುರದಲ್ಲಿ ನಡೆದ ಚುನಾವಣಾ (Lok Sabha Elections 2024) ರ‍್ಯಾಲಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ್ದಕ್ಕೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಆತ್ಮ ನನ್ನನ್ನು ಆಶೀರ್ವದಿಸುತ್ತಿರಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅಲ್ಲದೇ ಪ್ರತಿಪಕ್ಷಗಳು ಪ್ರತ್ಯೇಕತಾವಾದಿಗಳ ಬಗ್ಗೆ ಮೃದು ಧೋರಣೆ ಹೊಂದಿದ್ದು, 370ನೇ ವಿಧಿಯನ್ನು ರದ್ದು ಮಾಡಿದಾಗ ಅದಕ್ಕೆ ವಿರೋಧಿಸಿದವು ಎಂದು ವಾಗ್ದಾಳಿ ನಡೆಸಿದ್ದರು.
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವುದಕ್ಕೆ ಅಂಬೇಡ್ಕರ್ ವಿರೋಧಿಸಿದ್ದರು. ವಿಶೇಷ ಸ್ಥಾನಮಾನ ನೀಡಿದರೆ ಭಾರತದ ಸಮಗ್ರತೆ ಮತ್ತು ಏಕತೆಗೆ ಧಕ್ಕೆ ಆಗುತ್ತದೆ ಎಂದು ಹೇಳಿದ್ದರು. ಆದರೆ ಜವಾಹಾರಲಾಲ್ ನೆಹರು ಅವರು ವಿಶೇಷ ಸ್ಥಾನ ಪರ ಮಾತನಾಡಿದ್ದರು.
ಇತ್ತೀಚೆಗೆ ಚುನಾವಣಾ ಪ್ರಚಾರದ ವೇಳೆ, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಅಕಸ್ಮಾತ್ ಕಾಂಗ್ರೆಸ್ ಅಧಿಕಾರ ಹಿಡಿದರೆ, ಕೇಂದ್ರ ಸರ್ಕಾರ ರದ್ದು ಮಾಡಿರುವ ಆರ್ಟಿಕಲ್ 370ಯನ್ನು ಮತ್ತೆ ಬದಲಾಯಿಸುವ ಧೈರ್ಯ ಮಾಡಬೇಡಿ ಎಂದು ಎಚ್ಚರಿಸಿದ್ದರು.
ಭಯೋತ್ಪಾದನೆಗೆ ಅಂತ್ಯ:
2014ರ ನಂತರ ಭಯೋತ್ಪಾದನೆಯನ್ನು ನಿಯಂತ್ರಿಸಲಾಗಿದೆ. 2019ರ ಹೊತ್ತಿಗೆ ಭಯೋತ್ಪಾದನೆಯ ಮೂಲವಾಗಿದ್ದ ಜಮ್ಮು-ಕಾಶ್ಮೀರದ 370ನೇ ವಿಧಿಯನ್ನು ರದ್ದುಪಡಿಸುವಂಥ ಕೆಲಸವನ್ನು ಮೋದಿಜಿ ಮಾಡಿದರು. ಈ ಮೂಲಕ ಭಯೋತ್ಪಾದನೆ ಭಾರತದಲ್ಲಿ ನಾಶವಾಗಿದೆ. ಈಗ ಎಲ್ಲಿಯಾದರೂ ಪಟಾಕಿಗಳು ಸಿಡಿದರೂ ಪಾಕಿಸ್ತಾನವು ತನ್ನ ಕೈವಾಡವಿಲ್ಲ ಎಂದು ಸ್ಪಷ್ಟಪಡಿಸುತ್ತದೆ ಎಂದು ಉತ್ತರ ಪ್ರದೇಶ ಸಿಎಂ 370ನೇ ವಿಧಿಯ ರದ್ದು ಮಾಡಿದ್ದನ್ನು ಸಮರ್ಥಿಸಿದ್ದರು.
ಪ್ರಚಾರದ ಅಸ್ತ್ರವಾಗಿ `ಆರ್ಟಿಕಲ್ 370′ ಸಿನಿಮಾ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಕುಟುಂಬದೊಂದಿಗೆ ದೆಹಲಿಯಲ್ಲಿ `ಆರ್ಟಿಕಲ್ 370′ ಸಿನಿಮಾ ನೋಡಿದ್ದರು. ಈ ಕುರಿತಂತೆ ಅವರು ಎಕ್ಸ್‌ನಲ್ಲಿ, ಇದು ನೈಜ ಘಟನೆಗಳ ಪ್ರೇರಣೆಯಿಂದ ಆಗಿರುವ ಸಿನಿಮಾ ಎಂದು ಬರೆದುಕೊಂಡಿದ್ದರು. ಈ ಸಿನಿಮಾ ನೋಡುವಾಗ ಭಾವುಕರಾದ ಸಂಗತಿಯನ್ನೂ ಅವರು ಬಿಚ್ಚಿಟ್ಟಿದ್ದರು.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಕೂಡ ಆರ್ಟಿಕಲ್ 370 ಚಿತ್ರದ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ್ದರು. ಕಾಶ್ಮೀರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ, ಆರ್ಟಿಕಲ್ 370 ಸಿನಿಮಾ ಜಮ್ಮು ಕಾಶ್ಮೀರದ ವಿಶೇಷ ಅಧಿಕಾರವನ್ನು ಯಾಕೆ ತೆಗೆಯಲಾಯಿತು ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಹೇಳಿದ್ದರು.
ವಿಶೇಷ ಸ್ಥಾನಮಾನ ರದ್ದು:
1949 ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ 370 ನೇ ವಿಧಿಯು ಕಾಶ್ಮೀರಕ್ಕೆ ಆಂತರಿಕ ಆಡಳಿತದ ವಿಷಯಗಳಲ್ಲಿ ಸ್ವಾಯತ್ತತೆ ನೀಡಿತ್ತು. ವಿದೇಶಾಂಗ ವ್ಯವಹಾರಗಳು, ಹಣಕಾಸು, ರಕ್ಷಣೆ ಮತ್ತು ಸಂವಹನಗಳನ್ನು ಹೊರತುಪಡಿಸಿ ಬೇರೆಲ್ಲಾ ವಿಚಾರಗಳಲ್ಲೂ ತನ್ನದೇ ನಿಯಂತ್ರಣ ಹೊಂದಲು 370 ನೇ ವಿಧಿ ಅವಕಾಶ ನೀಡಿತ್ತು. ಇದನ್ನು ಐತಿಹಾಸಿಕ ಪ್ರಮಾದ ಎಂದು ಪರಿಗಣಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ವಿಧಿಯನ್ನು ಆಗಸ್ಟ್ 5, 2019 ರಂದು ರದ್ದು ಪಡೆಸಿತ್ತು.
ಕಾಶ್ಮೀರ ಏಕೆ ವಿವಾದಾತ್ಮಕವಾಗಿದೆ?
ಈ ಪ್ರದೇಶವು ಒಂದು ಕಾಲದಲ್ಲಿ ಜಮ್ಮು ಮತ್ತು ಕಾಶ್ಮೀರ ಎಂದು ಕರೆಯಲ್ಪಡುವ ರಾಜಪ್ರಭುತ್ವದ ರಾಜ್ಯವಾಗಿತ್ತು. 1947 ರಲ್ಲಿ ಬ್ರಿಟೀಷ್ ಆಳ್ವಿಕೆಯ ಕೊನೆಯಲ್ಲಿ ಉಪಖಂಡವಾಗಿ ಇದನ್ನು ವಿಭಜಿಸಿತ್ತು. ಭಾರತ ಸ್ವಾತಂತ್ರ್ಯದ ಬಳಿಕ ಮಹಾರಾಜ ಹರಿ ಸಿಂಗ್ ಸ್ವತಂತ್ರವಾಗಿ ಉಳಿಯಲು ಮೊದಲು ಪ್ರಯತ್ನಿಸಿದರು, ಆದರೆ ಅಕ್ಟೋಬರ್ 1947 ರಲ್ಲಿ ಪಾಕಿಸ್ತಾನ ಆಕ್ರಮಣಕ್ಕೆ ಮುಂದಾದ ಬಳಿಕ ಕಾಶ್ಮೀರ ಭಾರತದ ಜೊತೆಗೆ ವಿಲೀನವಾಗಲು ಒಪ್ಪಿಕೊಂಡಿತ್ತು.
ಭಾರತ ಮತ್ತು ಪಾಕಿಸ್ತಾನ ಎರಡೂ ಸಂಪೂರ್ಣವಾಗಿ ಈ ಪ್ರದೇಶವನ್ನು ತಮ್ಮದು ಎಂದು ಹೇಳುತ್ತವೆ. ಭಾರತದ ಆಡಳಿತದ ವಿರುದ್ಧ ಪ್ರತ್ಯೇಕತಾವಾದಿ ದಂಗೆಯಿಂದಾಗಿ 30 ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಹಿಂಸಾಚಾರಗಳು ನಡೆದಿವೆ.
370ನೇ ವಿಧಿಯ ರದ್ದು
ಭಾರತೀಯ ಜನತಾ ಪಕ್ಷವು 370ನೇ ವಿಧಿಯನ್ನು ದೀರ್ಘಕಾಲ ವಿರೋಧಿಸಿತ್ತು. ಅದನ್ನು ಹಿಂತೆಗೆದುಕೊಳ್ಳುವುದು ಪಕ್ಷದ 2019ರ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿತ್ತು. ಕಾಶ್ಮೀರವನ್ನು ಏಕೀಕರಿಸಲು ಮತ್ತು ಅದನ್ನು ಭಾರತದ ಉಳಿದ ಭಾಗಗಳಂತೆಯೇ ಇರಿಸಲು ಅದನ್ನು ರದ್ದುಗೊಳಿಸಬೇಕು ಎಂದು ಬಿಜೆಪಿ ನಿರಂತರ ವಾದಿಸಿತ್ತು. 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಭಾರಿ ಜನಾದೇಶದೊಂದಿಗೆ ಅಧಿಕಾರಕ್ಕೆ ಮರಳಿದ ಬಿಜೆಪಿ, 370ನೇ ವಿಧಿಯನ್ನು ರದ್ದುಗೊಳಿಸಿತ್ತು.
ಬಿಜೆಪಿಯ ನಿಲುವೇನು?
ಕಾಶ್ಮೀರದ 370ನೇ ವಿಧಿಯಿಂದ ಈ ಭಾಗದಲ್ಲಿ ಪ್ರಜಾಪ್ರಭುತ್ವ ಎಂದಿಗೂ ಸಂಪೂರ್ಣವಾಗಿ ಜಾರಿಯಾಗಲಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಯಿತು, ಯಾವುದೇ ಅಭಿವೃದ್ಧಿ ನಡೆಯಲು ಸಾಧ್ಯವಾಗಲಿಲ್ಲ ಎಂದು ಸಂಸತ್‍ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು.
ಕಾಂಗ್ರೆಸ್ ಹೇಳಿದ್ದೇನು?
ಕಾಂಗ್ರೆಸ್‍ನ ಹಿರಿಯ ನಾಯಕ ಪಿ ಚಿದಂಬರಂ ಅವರು ಈ ನಿರ್ಧಾರವನ್ನು ಅಪಾಯಕಾರಿ. ಇದು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಸಂಸತ್ತಿನಲ್ಲಿ ಎಚ್ಚರಿಸಿದ್ದರು. ಅಲ್ಲದೇ ನೀವು ಗೆಲುವು ಸಾಧಿಸಿದ್ದೀರಿ ಎಂದು ಭಾವಿಸಬಹುದು, ಆದರೆ ಇತಿಹಾಸವು ನೀವು ತಪ್ಪು ಎಂದು ಸಾಬೀತುಪಡಿಸುತ್ತದೆ ಎಂದು ವಾದಿಸಿದ್ದರು.
ಈಗ ಏನಾಗಿದೆ?
ಕಾಶ್ಮೀರವು ಇನ್ನು ಮುಂದೆ ಪ್ರತ್ಯೇಕ ಸವಲತ್ತನ್ನು ಹೊಂದಿರುವುದಿಲ್ಲ. ಉಳಿದ ರಾಜ್ಯಗಳಂತೆ ಭಾರತೀಯ ಸಂವಿಧಾನಕ್ಕೆ ಕಾಶ್ಮೀರ ಬದ್ಧವಾಗಿರಬೇಕು. ಎಲ್ಲಾ ಭಾರತೀಯ ಕಾನೂನುಗಳು ಕಾಶ್ಮೀರಿಗಳಿಗೆ ಅನ್ವಯವಾಗುತ್ತವೆ ಮತ್ತು ರಾಜ್ಯದ ಹೊರಗಿನ ಜನರು ಅಲ್ಲಿ ಆಸ್ತಿಯನ್ನು ಖರೀದಿಸಲು ಸಾಧ್ಯವಾಗುತ್ತದೆ. ಇದರಿಂದ ಈ ಭಾಗದ ಅಭಿವೃದ್ಧಿಯಾಗುತ್ತದೆ ಎಂದು ಕೇಂದ್ರ ಹೇಳಿತ್ತು.
ನ್ಯಾಯಾಲಯ ಏನು ಹೇಳಿತ್ತು?
ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿ, ಕೇಂದ್ರದ ಎಲ್ಲಾ ನಿರ್ಧಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದಿತ್ತು. ಅಲ್ಲದೇ ಕೇಂದ್ರದ ನಿರ್ಧಾರವನ್ನು ಸರ್ವೋಚ್ಛ ನ್ಯಾಯಾಲಯ ಎತ್ತಿ ಹಿಡಿದಿತ್ತು.
ಆರ್ಟಿಕಲ್ 370 ಮತ್ತು 35ಎ ಎಂದರೇನು?
ಆರ್ಟಿಕಲ್ 370: ಇದು ಜಮ್ಮು ಮತ್ತು ಕಾಶ್ಮೀರದ ಕೊನೆಯ ಡೋಗ್ರಾ ಮಹಾರಾಜ ಹರಿ ಸಿಂಗ್ ಅವರು ಅಕ್ಟೋಬರ್ 27, 1947 ರಂದು ಸಹಿ ಮಾಡಿದ ಭಾರತೀಯ ಸಂವಿಧಾನಕ್ಕೆ ತಾತ್ಕಾಲಿಕ ನಿಬಂಧನೆಯಾಗಿದೆ.
ಈ ದಾಖಲೆಯು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸಾಂವಿಧಾನಿಕ ಸ್ಥಾನಮಾನವನ್ನು ಒದಗಿಸಿತ್ತು. ಈ ನಿಬಂಧನೆಯ ಮೂಲಕ ಇತರ ರಾಜ್ಯಗಳಿಗೆ ಅನ್ವಯವಾಗುವ ಕಾನೂನುಗಳು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಅನ್ವಯಿಸುತ್ತಿರಲಿಲ್ಲ.
2019ರ ಅಕ್ಟೋಬರ್ 31 ರವರೆಗೆ ಕಾಶ್ಮೀರಕ್ಕೆ, ಭಾರತದ ಒಂದು ರಾಜ್ಯವಾಗಿ ಪ್ರತ್ಯೇಕ ಸಂವಿಧಾನ, ರಾಜ್ಯ ಧ್ವಜ ಮತ್ತು ಆಂತರಿಕ ಆಡಳಿತಾತ್ಮಕ ಸ್ವಾಯತ್ತತೆಯನ್ನು ಹೊಂದುವ ಅಧಿಕಾರವನ್ನು 370ನೇ ವಿಧಿ ನೀಡಿತ್ತು. ಇದರ ಅಡಿಯಲ್ಲಿ ರಕ್ಷಣೆ, ವಿದೇಶಾಂಗ ವ್ಯವಹಾರ ಹಾಗೂ ಸಂವಹನ ಈ ಮೂರು ಕ್ಷೇತ್ರಗಳನ್ನು ಹೊರತು ಪಡಿಸಿ, ಬೇರೆ ಯಾವುದೇ ಕಾನೂನು ಜಾರಿಗೊಳಿಸುವ ಮುನ್ನ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕಿತ್ತು.
ದ್ವಿಪೌರತ್ವ ರದ್ದು:
ವಿಶೇಷ ಸ್ಥಾನಮಾನ ರದ್ದಾದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕ ಧ್ವಜ, ಸಂವಿಧಾನ ಹೊಂದಲು ಅನುಮತಿ ಇಲ್ಲ. ಇಲ್ಲಿನ ನಾಗರಿಕರು ದ್ವಿ ಪೌರತ್ವವನ್ನು ಹೊಂದಿರದೇ ಭಾರತದ ಪ್ರಜೆಗಳಾಗಿರುತ್ತಾರೆ. ಭಾರತೀಯ ಸಂವಿಧಾನದಲ್ಲಿ ಪ್ರಕಾರ ಮೂಲಭೂತ ಹಕ್ಕುಗಳನ್ನು ಹೊಂದಿರುತ್ತಾರೆ. ಮಾಹಿತಿ ಹಕ್ಕು ಕಾಯಿದೆ ಮತ್ತು ಶಿಕ್ಷಣ ಹಕ್ಕು ಕಾಯಿದೆ ಸೇರಿದಂತೆ ಸಂಸತ್ತು ಅಂಗೀಕರಿಸಿದ ಎಲ್ಲಾ ಕಾನೂನುಗಳು ಅನ್ವಯವಾಗುತ್ತವೆ. ದೇಶದ ಯಾವುದೇ ಭಾಗದ ಯಾವುದೇ ಭಾರತೀಯ ಪ್ರಜೆಯು ರಾಜ್ಯದಲ್ಲಿ ಆಸ್ತಿಯನ್ನು ಖರೀದಿಸಬಹುದು. ರಾಜ್ಯ ಸರ್ಕಾರಿ ಕೆಲಸವನ್ನು, ವಿದ್ಯಾರ್ಥಿವೇತನಗಳನ್ನು ತೆಗೆದುಕೊಳ್ಳಬಹುದು.