ರಾಮನಗರ: ಗೋವು ಸಾಗಾಣಿಕೆ ವೇಳೆ ವ್ಯಕ್ತಿ ಅನುಮಾನಸ್ಪದವಾಗಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಸಾತನೂರು ಪೊಲೀಸರು (Sathanoor Police) ಕಾರ್ಯಾಚರಣೆ ನಡೆಸಿ ಪ್ರಕರಣದ ಐವರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಐದು ದಿನಗಳಿಂದ ತಲೆಮರೆಸಿಕೊಂಡಿದ್ದ ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ (Puneeth Kerehalli) ಸೇರಿ ಐವರು ಆರೋಪಿಗಳನ್ನ ರಾಜಸ್ಥಾನದಲ್ಲಿ ಬಂಧಿಸಿ ರಾಮನಗರಕ್ಕೆ ಕರೆತರಲು ಸಿದ್ಧತೆ ನಡೆಸಿದ್ದಾರೆ.
ಕನಕಪುರ ತಾಲೂಕಿನ ಸಾತನೂರು ಬಳಿ ಮಾ.31ರ ರಾತ್ರಿ ಮಂಡ್ಯದಿಂದ ಗೋವುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ವಾಹವವನ್ನು ಪುನೀತ್ ಕೆರೆಹಳ್ಳಿ ಹಾಗೂ ಸಂಗಡಿಗರು ತಡೆದು, ಜಾಲತಾಣಗಳಲ್ಲಿ ವೀಡಿಯೋ ಹಂಚಿಕೊಂಡಿದ್ದರು. ಈ ವೇಳೆ ಕ್ಯಾಂಟರ್‍ನಲ್ಲಿನ ಚಾಲಕ ಹಾಗೂ ಮತ್ತೊಬ್ಬ ಪರಾರಿಯಾಗಿದ್ದರೆ, ವಾಹನದಲ್ಲಿದ್ದ ಇದ್ರೀಶ್ ಪಾಷ (Idrish Pasha) ಘಟನೆ ನಡೆದ 200 ಮೀಟರ್ ದೂರದಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿದ್ದರು. ಈ ಪ್ರಕರಣ ಸಂಬಂಧ ಹಿಂದೂ ಕಾರ್ಯಕರ್ತ (Hindu Activist) ಪುನೀತ್ ಕೆರೆಹಳ್ಳಿ ನೈತಿಕ ಪೊಲೀಸ್ ಗಿರಿ (Moral Policing) ಮಾಡಿದ್ದು ಇದ್ರಿಷ್ ಪಾಷಾ ಎಂಬ ವ್ಯಕ್ತಿ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಮೃತ ವ್ಯಕ್ತಿ ಇದ್ರಿಷ್ ಪಾಷಾ ಕುಟುಂಬಸ್ಥರು ಸೇರಿ ರಾಜ್ಯದ ಹಲವೆಡೆ ಮುಸ್ಲಿಂ ಸಮುದಾಯ ಪ್ರತಿಭಟನೆ ನಡೆಸಿ ಪುನೀತ್ ಬಂಧನಕ್ಕೆ ಒತ್ತಾಯಿಸಿತ್ತು. ಪ್ರಕರಣ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ 3ಎಫ್‍ಐಆರ್ ದಾಖಲಾಗಿದ್ದ ಹಿನ್ನೆಲೆ ಇಂದು ಸಾತನೂರು ಪೊಲೀಸರು ಪುನೀತ್ ಕೆರೆಹಳ್ಳಿ ಸೇರಿ ಐವರನ್ನ ಬಂಧಿಸಿದ್ದಾರೆ.
Advertisement
Advertisement
ಏ.1 ರಂದು ಪುನಿತ್ ಕೆರೆಹಳ್ಳಿ ಮೇಲೆ ದೂರು ದಾಖಲಾದ ಬಳಿಕ ಆತ ನಾಪತ್ತೆಯಾಗಿದ್ದ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಅಪ್ಲೋಡ್ ಮಾಡಿ ನಾನು ದೇವಾಲಯಕ್ಕೆ ಬಂದಿದ್ದೇನೆ. ಓಡಿಹೋಗಿಲ್ಲ ಎಂದು ಹೇಳಿಕೆಯನ್ನು ನೀಡುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡಿದ್ದ. ಆತನನ್ನು ಬಂಧಿಲು ಒಟ್ಟು 4 ತಂಡಗಳನ್ನು ರಚನೆ ಮಾಡಿದ್ದ ಜಿಲ್ಲಾ ಪೊಲೀಸರು ಮೊದಲು ಹುಬ್ಬಳ್ಳಿ, ಮಹಾರಾಷ್ಟ್ರ, ಗುಜರಾತ್, ಸೂರತ್‍ಗಳಲ್ಲಿ ಸುತ್ತಾಡಿ, ರಾಜಸ್ಥಾನದಲ್ಲಿ ಓಡಾಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಬಳಿಕ ರಾಜಸ್ಥಾನ ಪೊಲೀಸರ ಸಹಾಯದಿಂದ ರಾಜಸ್ಥಾನದ ಗಡಿ ಜಿಲ್ಲೆ ಬನಸ್ವಾರ ಎಂಬಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಪುನೀತ್ ಕೆರೆಹಳ್ಳಿ ಸೇರಿ ರಾಮನಗರದ ಗೋಪಿ, ತೀರ್ಥಹಳ್ಳಿಯ ಪವನ್ ಕುಮಾರ್, ಬಸವನಗುಡಿಯ ಪಿಲ್ಲಿಂಗ್ ಅಂಬಿಗಾರ್, ರಾಯಚೂರಿನ ಸುರೇಶ್ ರನ್ನ ಬಂಧಿಸಲಾಗಿದೆ. ಅಲ್ಲಿನ ನ್ಯಾಯಾಲಯದ ಅನುಮತಿ ಬಳಿಕ ಆರೋಪಿಗಳನ್ನು ರಾಜ್ಯಕ್ಕೆ ಕರೆತರಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ತಲೆ ಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ಸೇರಿ ಐವರ ಬಂಧನ
Advertisement
ಮಂಡ್ಯದಿಂದ ತಮಿಳುನಾಡಿನ ಕಡೆಗೆ ಕ್ಯಾಂಟರ್ ನಲ್ಲಿ ಗೋವುಗಳನ್ನು ಸಾಗಿಸಲಾಗುತ್ತಿತ್ತು. ಚೆಕ್‍ಪೋಸ್ಟ್‍ಗಳ ಕಣ್ತಪ್ಪಿಸಿಕೊಳ್ಳಲು ಕಳ್ಳದಾರಿಯನ್ನು ಬಳಸಲಾಗಿತ್ತು. ಈ ಬಗ್ಗೆ ಕೂಡಾ ತನಿಖೆ ಮುಂದುವರಿದಿದೆ. ಅಲ್ಲದೇ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ನೈತಿಕ ಪೊಲೀಸ್ ಗಿರಿ ಪ್ರದರ್ಶನಕ್ಕೆ ಪುನಿತ್ ಕೆರೆಹಳ್ಳಿ ಮೇಲೆ ಪ್ರಕರಣವನ್ನೂ ಸಹ ದಾಖಲಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ. ಇನ್ನೂ ಆರೋಪಿಗಳನ್ನು ಬಂಧಿಸುವಲ್ಲಿ ಶ್ರಮಿಸಿದ್ದ ಪೊಲೀಸರಿಗೆ 1 ಲಕ್ಷ ಬಹುಮಾನ ನೀಡುವುದಾಗಿ ಎಸ್ಪಿ ಕಾರ್ತಿಕ್ ರೆಡ್ಡಿ ಘೋಷಿಸಿದ್ದಾರೆ.
Advertisement
ಆರೋಪಿ ಬಂಧನ ಕುರಿತು ಮಾತನಾಡಿದ ಮುಸ್ಲಿಂ ಮುಖಂಡ ಮುಸಾರ್ವಿ ಖಾನ್, ಗೋವುಗಳನ್ನು ಸಾಗಿಸುವುದಕ್ಕೆ ಎಲ್ಲ ದಾಖಲೆಗಳಿದ್ದವು. ಪುನೀತ್ ಕೆರೆಹಳ್ಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಬಳಿಕ ಈತ ಕರೆಂಟ್ ನೀಡಿ ಇದ್ರೀಶ್ ಪಾಷನನ್ನು ಹತ್ಯೆ ಮಾಡಿದ್ದಾನೆ. ಈತನ ಹಿಂದೆ ಕಾಣದ ಶಕ್ತಿಗಳು ಕೆಲಸ ಮಾಡುತ್ತಿವೆ. ಹಿಂದೂ -ಮುಸ್ಲಿಮರುಗಳು ಅಣ್ಣತಮ್ಮರಂತೆ ಬಾಳುತ್ತಿದ್ದೇವೆ. ಕೆಲವರು ಸಮಾಜದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಇಂತಹವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದಿದ್ದಾರೆ.
ಒಟ್ಟಾರೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಇದ್ರಿಷ್ ಪಾಷಾ ಅನುಮಾನಸ್ಪದ ಸಾವಿನ ಬಗ್ಗೆ ಇನ್ನೂ ಕೂಡ ಸ್ಪಷ್ಟತೆ ದೊರಕಿಲ್ಲ. ಇದ್ರಿಷ್ ಪಾಷಾರನ್ನ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದ್ಯಾ.? ಅಥವಾ ಸಾವಿನ ನಿಖರ ಕಾರಣ ಏನು ಎಂಬುದು ಎಫ್‍ಎಸ್‍ಎಲ್ ವರದಿ ಬಳಿಕಷ್ಟೇ ಗೊತ್ತಾಗಲಿದೆ. ಇದನ್ನೂ ಓದಿ: ಪುನೀತ್ ಕೆರೆಹಳ್ಳಿ ಬಂಧನಕ್ಕೆ ನಾಲ್ಕು ತಂಡ ರಚನೆ, ಪ್ರಕರಣದಲ್ಲಿ 3 ಎಫ್‌ಐಆರ್ – ಎಸ್ಪಿ ಕಾರ್ತಿಕ್ ರೆಡ್ಡಿ