ಕನ್ನಡ ಸಿನಿಮಾ ರಂಗದ ಹಿರಿಯ ನಟಿ ಲೀಲಾವತಿ ಅವರ ಅಂತಿಮ ದರ್ಶನಕ್ಕೆ ಇಂದು ಬೆಳಗ್ಗೆಯಿಂದ ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ವ್ಯವಸ‍್ಥೆ ಮಾಡಲಾಗಿದೆ. ನೆಲಮಂಗಲ ಸುತ್ತಮುತ್ತಲಿನ ಗ್ರಾಮಸ್ಥರು, ಸಿನಿಮಾ ಅಭಿಮಾನಿಗಳು, ಹಾಗೂ ಕಲಾವಿದರು ಮತ್ತು ತಂತ್ರಜ್ಞರು ಮೈದಾನಕ್ಕೆ ಆಗಮಿಸಿ ಅಗಲಿದ ನೆಚ್ಚಿನ ನಟಿಯ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಬೆಳಗ್ಗೆ 10 ಗಂಟೆವರೆಗೂ ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲೇ ಪಾರ್ಥೀವ ಶರೀರ ಇರಿಸಲಾಗುತ್ತಿದ್ದು, ನಂತರ ಬೆಂಗಳೂರಿನತ್ತ (Bangalore) ತಗೆದುಕೊಂಡು ಹೋಗಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿರುವ (Ravindra Kalakshetra) ಸಂಸ ಬಯಲು ರಂಗ ಮಂದಿರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಿಎಂ ಸಿದ್ಧರಾಮಯ್ಯ ಸೇರಿದಂತೆ ಸಚಿವ ಸಂಪುಟದ ಅನೇಕ ಸಚಿವರು ಹಾಗೂ ಚಿತ್ರೋದ್ಯಮದ ಗಣ್ಯರು ಆಗಮಿಸಿ, ಅಂತಿಮ ದರ್ಶನ ಪಡೆಯಲಿದ್ದಾರೆ.
ಓಡೋಡಿ ಬಂದ ಮೊಮ್ಮಗ, ಸೊಸೆ
ಅಗಲಿದ ಹಿರಿಯ ಚೇತನ ಲೀಲಾವತಿ ಅವರ ಅಂತಿಮ ದರ್ಶನ ಪಡೆಯಲು ಚೆನ್ನೈನಿಂದ ಲೀಲಾವತಿ ಅವರ ಸೊಸೆ, ಅಂದರೆ ವಿನೋದ್ ರಾಜ್ ಅವರ ಪತ್ನಿ ಅನು (Anu) ಮತ್ತು ಲೀಲಾವತಿ (Leelavati) ಮೊಮ್ಮಗ ಯುವರಾಜ್ (Yuvraj) ಆಗಮಿಸಿದ್ದಾರೆ. ನಿನ್ನೆ ರಾತ್ರಿಯೇ ಅವರು ಚೆನ್ನೈನಿಂದ ಹೊರಟು ನೆಲಮಂಗಲ ತಲುಪಿ, ಇಂದು ಅಂತಿಮ ದರ್ಶನ ಪಡೆದಿದ್ದಾರೆ.
ವಿನೋದ್ ರಾಜ್ (Vinod Raj) ಮದುವೆ ವಿಚಾರವಾಗಿ ಹಲವಾರು ಗೊಂದಲಗಳು ಇದ್ದವು. ತಾಯಿಗಾಗಿ ವಿನೋದ್ ಮದುವೆ ಆಗದೇ, ತಾಯಿಯ ಸೇವೆಯಲ್ಲಿದ್ದಾರೆ ಎಂದು ಹೇಳಲಾಗಿತ್ತು. ಇತ್ತೀಚೆಗಷ್ಟೇ ವಿನೋದ್ ರಾಜ್ ಮದುವೆ ಆಗಿರುವ ಸುದ್ದಿಯನ್ನು ನಿರ್ದೇಶಕರೊಬ್ಬರು ಫೋಟೋ ಸಮೇತ ವಿವರಿಸಿದ್ದರು. ವಿನೋದ್ ರಾಜ್ ಮದುವೆ ವಿಚಾರವನ್ನು ಸ್ವತಃ ಲೀಲಾವತಿ ಮತ್ತು ವಿನೋದ್ ರಾಜ್ ಕೂಡ ಒಪ್ಪಿಕೊಂಡಿದ್ದರು.