ಬೆಂಗಳೂರು: ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದಿ ಮುಂದೆ ಡಾಕ್ಟರ್ ಆಗುವ ಕನಸು ಕಂಡಿದ್ದ ವಿದ್ಯಾರ್ಥಿಗಳು ಇಂದು ಕೇಂದ್ರ ಸರ್ಕಾರ ನಡೆಸುವ ನೀಟ್ ಪರೀಕ್ಷೆ ಎದುರಿಸಿದ್ದರು. ಆದರೆ ಈ ವೇಳೆ ಉಂಟಾದ ಹಲವು ಗೊಂದಲಗಳಿಂದ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ.
ತಡವಾದ ಹಂಪಿ ಎಕ್ಸ್ ಪ್ರೆಸ್: ಇಂದು ಮಧ್ಯಾಹ್ನ 2 ರಿಂದ ಸಂಜೆ 5 ರ ವರೆಗೆ ನೀಟ್ ಪರೀಕ್ಷೆಗೆ ಸಮಯ ನಿಗದಿಯಾಗಿತ್ತು. ರಾಜ್ಯ ಸೇರಿದಂತೆ ದೇಶಾದ ಹಲವು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಆದರೆ ಬಳ್ಳಾರಿಯಿಂದ ಬೆಂಗಳೂರಿಗೆ ಪರೀಕ್ಷೆಗೆ ಬರಬೇಕಾಗಿದ್ದ ಕೆಲ ವಿದ್ಯಾರ್ಥಿಗಳು ನಗರಕ್ಕೆ ಆಗಮಿಸಲು ಹಂಪಿ ಎಕ್ಸ್ ಪ್ರೆಸ್ ರೈನಲ್ಲಿ ಪ್ರಯಾಣ ಬೆಳೆಸಿದ್ದರು. ಆದರೆ ಇಂದು ಬೆಳಗ್ಗೆ 6 ಗಂಟೆಗೆ ನಗರಕ್ಕೆ ಆಗಮಿಸಿದ ಬೇಕಿದ್ದ ರೈಲು 8 ಗಂಟೆ ತಡವಾಗಿ ಆಗಮಿಸಿತ್ತು. ಇದರಿಂದ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾದರು.
ಬೆಂಗಳೂರಿನ ಒಟ್ಟು 931 ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆಯಿತು. ಆದರೆ ನಿಯಮದ ಪ್ರಕಾರ ವಿದ್ಯಾರ್ಥಿಗಳನ್ನು ಸರಿಯಾಗಿ 12.30ಕ್ಕೆ ಪರೀಕ್ಷಾ ಕೇಂದ್ರದ ಒಳಗೆ ಬಿಟ್ಟುಕೊಳ್ಳಲಾಯಿತು. ವಿದ್ಯಾರ್ಥಿಗಳು ಹಾಲ್ ಟಿಕೆಟ್ ಅಲ್ಲದೇ ಆಧಾರ್, ವೋಟರ್ ಮತ್ತು ಪಾನ್ ಕಾರ್ಡ್ ಗಳು, ಡ್ರೈವಿಂಗ್ ಲೈಸೆನ್ಸ್ ಗಳನ್ನು ತೋರಿಸಿ ಕೇಂದ್ರದೊಳಗೆ ಹೋಗಬೇಕಿತ್ತು. 1.30 ನಂತರ ಯಾವ ವಿಧ್ಯಾರ್ಥಿಗೂ ಪ್ರವೇಶವಿರುವುದಿಲ್ಲ ಎಂಬ ನಿಯಮ ಇದ್ದ ಪರಿಣಾಮ ಕೆಲ ವಿದ್ಯಾರ್ಥಿಗಳು, ಪೋಷಕರು ಗೊಂದಲಕ್ಕೀಡಾದರು.
ಪರೀಕ್ಷಾ ಕೇಂದ್ರ ಬದಲು: ನೀಟ್ ಪರೀಕ್ಷೆ ಹಿನ್ನೆಲೆಯಲ್ಲಿ ಯಲಹಂಕದಲ್ಲಿ ಎಕ್ಸಾಂ ಸೆಂಟರ್ ನಿಗದಿ ಮಾಡಲಾಗಿತ್ತು. ಆದರೆ ಏಕಾಏಕಿ ಪರಿಕ್ಷಾ ಕೇಂದ್ರವನ್ನು ಬೆಂಗಳೂರು ಹೊರವಲಯ ಹೊಸೂರು ರಸ್ತೆಯ ಕೂಡ್ಲು ಗ್ರಾಮದ ಬಳಿಯಿರುವ ದಯಾನಂದ್ ಸಾಗರ್ ಕಾಲೇಜಿಗೆ ಬದಲಾಯಿಸಿದ ಕಾರಣ ಪೋಷಕರು ಹಾಗೂ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಿದರು. ಪರಿಣಾಮ ಪರಿಕ್ಷಾ ಕೇಂದ್ರಕ್ಕೆ ತಡವಾಗಿ ಆಗಮಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಯಿತು. ಅಂತಿಮ ಕ್ಷಣದಲ್ಲಿ ಆದ ಎಡವಟ್ಟಿನಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಪರೀಕ್ಷ ಕೇಂದ್ರ ಮೂಲಭೂತ ಸೌಲಭ್ಯಗಳು ಇಲ್ಲದಿರುವುದು ಇದಕ್ಕೆ ಕಾರಣವಾಗಿತ್ತು.
ಇತ್ತ ಪರೀಕ್ಷೆ ಬರೆಯಲು ವಂಚಿತರಾದ ವಿದ್ಯಾರ್ಥಿಗಳ ಕುರಿತು ಪ್ರತಿಕ್ರಿಯೆ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ ಅವರು, ಹಂಪಿ ಎಕ್ಸ್ ಪ್ರೆಸ್ ರೈಲು ತಡವಾಗಿರುವುದು ಗಮನಕ್ಕೆ ಬಂದಿದ್ದು, ಈ ವಿಚಾರವಾಗಿ ಇಲಾಖೆಯ ಅಧಿಕಾರಿಗಳ ಜೊತೆ ಮಾತಾಡಿದ್ದೇನೆ. ಕಾನೂನು ಪ್ರಕಾರ ವಿದ್ಯಾರ್ಥಿಗಳು ಪರೀಕ್ಷೆ ಬರೆಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ, ಪರೀಕ್ಷೆ ಬರೆಯಲು ಅವಕಾಶ ಲಭಿಸದ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.