- ತವರಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಅಂತ್ಯಕ್ರಿಯೆ
ಬೆಳಗಾವಿ/ ಉಡುಪಿ/ ಬಾಗಲಕೋಟೆ: ಜಮ್ಮು ಕಾಶ್ಮೀರದ (Jammu And Kashmir) ಪೂಂಚ್‍ನಲ್ಲಿ ನಡೆದ ಸೇನಾ (Indian Army) ವಾಹನ ಅಪಘಾತದಲ್ಲಿ ಹುತಾತ್ಮರಾಗಿದ್ದ ರಾಜ್ಯದ ಮೂವರು ಯೋಧರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನಡೆದಿದೆ.
ಬೆಳಗಾವಿ: ಅಪಘಾತದಲ್ಲಿ ಹುತಾತ್ಮರಾದ ಯೋಧ ಪಂತ ಬಾಳೇಕುಂದ್ರಿ ದಯಾನಂದ ತಿರಕನ್ನವರ್ ಅವರ ಅಂತ್ಯಸಂಸ್ಕಾರ ಸಾಂಬ್ರಾ ಲಿಂಗಾಯತ ರುದ್ರಭೂಮಿಯಲ್ಲಿ ನೆರವೇರಿತು. ಯೋಧನ ಪಾರ್ಥಿವ ಶರೀರಕ್ಕೆ ಮಗ ಗಣೇಶ್ ಬಿಲ್ವಪತ್ರೆ ಹಾಕಿ ಅಗ್ನಿ ಸ್ಪರ್ಶ ಮಾಡಿದ್ದಾರೆ.
ಈ ವೇಳೆ ಯೋಧನ ತಾಯಿ ಶ್ರೀಮತಿ, ತಂದೆ ಕಲ್ಲಪ್ಪಾ ಹಾಗೂ ಪತ್ನಿ ನಂದಾ ಹಾಗೂ ಮಗಳು ವೈಷ್ಣವಿ ಇದ್ದರು. ಯೋಧನ ಅಂತ್ಯಕ್ರಿಯೆಯಲ್ಲಿ ಅಪಾರ ಸಂಖ್ಯೆಯ ಜನ ಭಾಗಿಯಾಗಿದ್ದರು.
ಉಡುಪಿ: ಇನ್ನೂ ದುರಂತದಲ್ಲಿ ಮೃತಪಟ್ಟ ಮತ್ತೋರ್ವ ಯೋಧ ಅನೂಪ್ ಪೂಜಾರಿಯವರ ಅಂತ್ಯಕ್ರಿಯೆ ಬಿಜಾಡಿ ಕಡಲ ಕಿನಾರೆಯಲ್ಲಿ ನಡೆದಿದೆ.
ಅಂತ್ಯ ಸಂಸ್ಕಾರಕ್ಕೂ ಮುನ್ನ ಸೇನಾಧಿಕಾರಿಗಳಿಂದ ಅನೂಪ್ ಪೂಜಾರಿಯವರ ಮೃತದೇಹಕ್ಕೆ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ, ಉಡುಪಿ -ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸೇನಾಧಿಕಾರಿಗಳು ಗೌರವ ನಮನ ಸಲ್ಲಿಸಿದ್ದಾರೆ. ಅವರ ಪಾರ್ಥಿವ ಶರೀರಕ್ಕೆ ಸಹೋದರ ಶಿವರಾಮ್ ಅಗ್ನಿ ಸ್ಪರ್ಶ ಮಾಡಿದ್ದಾರೆ.
ಬಾಗಲಕೋಟೆ: ದುರಂತದಲ್ಲಿ ಹುತಾತ್ಮರಾದ ಮತ್ತೋರ್ವ ಯೋಧ ಮುಧೋಳ್‍ನ ಮಹಾಲಿಂಗಪುರದ ಮಹೇಶ್ ಮರಿಗೊಂಡ ಅವರ ಅಂತ್ಯಕ್ರಿಯೆ ಸ್ವಗ್ರಾಮ ಕೆಂಗೇರಿಮಡ್ಡಿಯ ಸರ್ಕಾರಿ ಜಮೀನಿನಲ್ಲಿ ನೆರವೇರಿದೆ.
ಅಂತ್ಯಕ್ರಿಯೆ ವೇಳೆ ಯೋಧನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಅಗಲಿದ ವೀರ ಯೋಧನಿಗೆ ಗ್ರಾಮಸ್ಥರು ಅಮರ್ ರಹೇ ಎಂಬ ಘೋಷಣೆ ಮೊಳಗಿತು.
ಮಂಗಳವಾರ ಸಂಜೆ 5:30ಕ್ಕೆ 300 ಅಡಿ ಕಂದಕಕ್ಕೆ ಸೇನಾ ವಾಹನ ಬಿದ್ದು ಮರಾಠಾ ರೆಜಿಮೆಂಟ್‌ನ (Maratha Light Infantry) ಐವರು ಮೃತಪಟ್ಟಿದ್ದರು. ಐವರು ಪೈಕಿ ಮೂವರು ಕರ್ನಾಟಕದವರಾಗಿದ್ದರು.