ಮುಂಬೈ: ದೃಶ್ಯ ಸಿನಿಮಾ ಮಾದರಿಯಲ್ಲಿ, ಯೋಧನೊಬ್ಬ (Soldier) ತನ್ನ ಗೆಳತಿಯನ್ನು ಹತ್ಯೆಗೈದು ಹೂತು ಸಿಮೆಂಟ್ ಹಾಕಿ ಮುಚ್ಚಿದ ಪ್ರಕರಣ (Nagpur) ನಾಗ್ಪುರದಲ್ಲಿ ನಡೆದಿದೆ.
ಹತ್ಯೆಗೊಳಗಾದ ಮಹಿಳೆಯನ್ನು ಜ್ಯೋತ್ಸ್ನಾ ಆಕ್ರೆ (32) ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ಅಜಯ್ ವಾಂಖೆಡೆ (33) ಎಂದು ಗುರುತಿಸಲಾಗಿದೆ. ಆತ ನಾಗ್ಪುರದ ಕೈಲಾಶ್ ನಗರ ಪ್ರದೇಶದ ನಿವಾಸಿಯಾಗಿದ್ದು, ನಾಗಾಲ್ಯಾಂಡ್‌ನಲ್ಲಿ ನೆಲೆಸಿದ್ದ.
ಆರೋಪಿ ತನ್ನ ಗೆಳತಿಯನ್ನು ಕೊಲೆಗೈದು ಆಕೆಯ ದೇಹವನ್ನು ಸಿಮೆಂಟ್‌ನಿಂದ ಮುಚ್ಚಿದ್ದ. ಬಳಿಕ ಆಕೆಯ ಮೊಬೈಲ್‌ನ್ನು ಲಾರಿಯೊಂದರ ಮೇಲೆ ಎಸೆದಿದ್ದ. ಇದು ದೃಶ್ಯ ಚಿತ್ರದ ಕತೆಯನ್ನು ಹೋಲುತ್ತದೆ. ಆರೋಪಿ ಕೊಲೆಗೆ ಯೋಜನೆ ರೂಪಿಸಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಾಂಖೆಡೆ ವಿವಾಹ ಪೋರ್ಟಲ್ ಮೂಲಕ ವಿಚ್ಛೇದಿತ ಜ್ಯೋತ್ಸ್ನಾ ಆಕ್ರೆ ಅವರನ್ನು ಪರಿಚಯ ಮಾಡಿಕೊಂಡಿದ್ದ. ಬಳಿಕ ಇಬ್ಬರೂ ಸ್ನೇಹ, ಪ್ರೇಮಕ್ಕೆ ತಿರುಗಿ, ಪರಸ್ಪರ ಸಂಬಂಧ ಹೊಂದಿದ್ದರು. ಆದರೆ ವಾಂಖೆಡೆ ಅವರ ಕುಟುಂಬ ಇದಕ್ಕೆ ವಿರೋಧಿಸಿ ಬೇರೆ ಮದುವೆ ಮಾಡಿದ್ದರು. ಬಳಿಕ ಆಕ್ರೆಯನ್ನು ಆರೋಪಿ ಕಡೆಗಣಿಸಿದ್ದ. ಅಲ್ಲದೇ ಆಕೆಯ ಹತ್ಯೆಗೆ ಯೋಜನೆ ರೂಪಿಸಿ, ನಿದ್ರೆ ಮಾತ್ರೆಗಳನ್ನು ತಂಪು ಪಾನಿಯದಲ್ಲಿ ಬೆರಸಿ ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕ್ರೆ ಮನೆಗೆ ಬಾರದೇ ಇದ್ದಾಗ ಆಕೆಯ ಮನೆಯವರು ಆಕೆ ಕಾಣೆಯಾಗಿರುವ ಬಗ್ಗೆ ಆ.29 ರಂದು ಬೆಲ್ತರೋಡಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ್ದ ಪೊಲೀಸರು ಸೆ.17ರಂದು ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆಯ ಸಮಯದಲ್ಲಿ, ಪೊಲೀಸರು ಕರೆ ವಿವರಗಳ ದಾಖಲೆಗಳನ್ನು ಪರಿಶೀಲಿಸಿದಾಗ ವಾಂಖೆಡೆ ಮತ್ತು ಆಕ್ರೆ ನಡುವೆ ನಿಯಮಿತವಾಗಿ ಫೋನ್ ಕರೆಗಳು ಬೆಳಕಿಗೆ ಬಂದಿತ್ತು.
ವಾಂಖೆಡೆ ನಾಗ್ಪುರದ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಆತನ ಮನವಿಯನ್ನು ತಿರಸ್ಕರಿಸಲಾಗಿತ್ತು. ನಂತರ ಆತ ಹೈಕೋರ್ಟ್ ಮೊರೆ ಹೋಗಿದ್ದ. ಹೈಕೋರ್ಟ್ ಸಹ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ನಿರೀಕ್ಷಣಾ ಜಾಮೀನು ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಬೆಲ್ತರೋಡಿ ಪೊಲೀಸರು ವಾಂಖೆಡೆಯನ್ನು ಬಂಧಿಸಿದ್ದಾರೆ.