ಶ್ರೀನಗರ: ತನ್ನ ಕುಟುಂಬದವರಿಗೆ ಜೀವಂತವಾಗಿದ್ದೇನೆ ಎಂದು ತಿಳಿಸಲು ಯೋಧ ಪ್ರತಿದಿನ ಎಟಿಎಂನಿಂದ ಹಣ ಡ್ರಾ ಮಾಡುತ್ತಿದ್ದಾರೆ ಎಂಬ ಭಾವನಾತ್ಮಕ ಫೇಸ್‍ಬುಕ್ ಪೋಸ್ಟೊಂದು ವೈರಲ್ ಆಗುತ್ತಿದೆ.
ಜಮ್ಮು-ಕಾಶ್ಮೀರದ ಪರಿಸ್ಥಿತಿ ಬಗ್ಗೆ ಜನರು ವಿವಿಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. 370ನೇ ವಿಧಿ ರದ್ದುಗೊಳಿಸಿದ ನಂತರ ಈ ಪ್ರದೇಶದಲ್ಲಿ ಮೊಬೈಲ್ ಹಾಗೂ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಹೀಗಿರುವಾಗ ಕಾಶ್ಮೀರದಲ್ಲಿರುವ ಸೈನಿಕರು ಹಾಗೂ ಸಾಮಾನ್ಯ ಜನರು ತಮ್ಮ ಕುಟುಂಬದ ಜೊತೆ ಮಾತನಾಡಲು ಆಗುತ್ತಿಲ್ಲ. ಅಲ್ಲದೆ ತಮ್ಮ ಕುಟುಂಬಸ್ಥರ ಜೊತೆ ಮಾತನಾಡಲು ಸೈನಿಕರು ಸೇರಿದಂತೆ ಅಲ್ಲಿನ ಜನರು ಟೆಲಿಫೋನ್ ಬೂತ್‍ನಲ್ಲಿ ಸಾಲಾಗಿ ನಿಲ್ಲುತ್ತಿದ್ದಾರೆ. ಹೀಗಿರುವಾಗ ಸೈನಿಕರೊಬ್ಬರು ಪ್ರತಿದಿನ ಸಾಲಿನಲ್ಲಿ ನಿಂತು ಎಟಿಎಂನಿಂದ 100 ರೂ. ಹಣ ಡ್ರಾ ಮಾಡುತ್ತಿದ್ದಾರೆ.
Advertisement
Advertisement
ಪೋಸ್ಟ್ ನಲ್ಲಿ ಏನಿದೆ?
ಸೈನ್ಯದ ಯೋಧರೊಬ್ಬರನ್ನು ಕಾಶ್ಮೀರದ ಬಾರಾಮುಲ್ಲಾದಲ್ಲಿ ನೇಮಕ ಮಾಡಲಾಗಿದೆ. ಖವಾಜಾ ಬಾಗ್‍ನ ಎಟಿಎಂನಲ್ಲಿ ಯೋಧ ಪ್ರತಿದಿನ 100 ರೂ. ಡ್ರಾ ಮಾಡುತ್ತಿದ್ದರು. ಬಳಿಕ ಆ 100ರೂ. ಅನ್ನು ತನ್ನ ಪರ್ಸ್ ನಲ್ಲಿಟ್ಟು ಅಲ್ಲಿಂದ ಹೊರಟು ಹೋಗುತ್ತಿದ್ದರು. ಮಾರನೇ ದಿನ ಮತ್ತೆ ಎಟಿಎಂನ ಹೊರಗೆ ಸಾಲಿನಲ್ಲಿ ನಿಂತು 100 ರೂ. ಡ್ರಾ ಮಾಡಿದ್ದರು. ಯೋಧ ಪ್ರತಿದಿನ 100 ರೂ. ಡ್ರಾ ಮಾಡುತ್ತಿರುವುದನ್ನು ಸೆಕ್ಯೂರಿಟಿ ಗಾರ್ಡ್ ಗಮನಿಸಿದ್ದಾನೆ. ಅಲ್ಲದೆ ಈ ಬಗ್ಗೆ ಯೋಧನ ಬಳಿ “ಸರ್ ನೀವು ಪ್ರತಿದಿನ 100 ರೂ. ಏಕೆ ಡ್ರಾ ಮಾಡುತ್ತೀರಾ? ನೀವು ಪ್ರತಿದಿನ ಇಲ್ಲಿಗೆ ಬರಲು ಏಕೆ ಇಷ್ಟು ತೊಂದರೆ ತೆಗೆದುಕೊಳ್ಳುತ್ತೀರಾ. ನೀವು ಒಂದು ವಾರದ ಮಟ್ಟಿಗೆ ಆಗುವ ಹಣವನ್ನು ಡ್ರಾ ಮಾಡಬಹುದಲ್ಲವೇ? ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ನನ್ನ ಬ್ಯಾಂಕ್ ಖಾತೆ ನನ್ನ ಪತ್ನಿಯ ಫೋನ್ ನಂಬರ್ ಗೆ ಲಿಂಕ್ ಆಗಿದೆ. ನನ್ನ ಪತ್ನಿ ಮನೆಯಲ್ಲಿ ಇದ್ದಾರೆ. ನಾನು ಎಟಿಎಂನಿಂದ ಹಣ ಡ್ರಾ ಮಾಡಿದಾಗ ಆಕೆಗೆ ಮೆಸೇಜ್ ಹೋಗುತ್ತದೆ. ಈ ಮೂಲಕ ನಾನು ಇನ್ನೂ ಬದುಕಿದ್ದೇನೆ ಎಂದು ಆಕೆ ತಿಳಿದುಕೊಳ್ಳುತ್ತಾಳೆ ಎಂದು ಯೋಧ, ಸೆಕ್ಯೂರಿಟಿ ಗಾರ್ಡ್ ಪ್ರಶ್ನೆಗೆ ಉತ್ತರಿಸಿದ್ದಾರೆ. ಯೋಧನ ಈ ಉತ್ತರ ಕೇಳಿ ಅಲ್ಲಿಯೇ ಇದ್ದ ಸಾಮಾನ್ಯ ಜನರು ಕೂಡ ಭಾವುಕರಾಗಿದ್ದಾರೆ.
ವೈರಲ್ ಆಗಿರುವ ಈ ಪೋಸ್ಟ್ ನಿಜವೋ ಅಥವಾ ಸುಳ್ಳೋ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಈ ಪೋಸ್ಟ್ ಸಾಕಷ್ಟು ವೈರಲ್ ಆಗುತ್ತಿದೆ. ಇಂಡಿಯನ್ ಆರ್ಮಿ ಫ್ಯಾನ್ ಫೇಸ್‍ಬುಕ್ ಪೇಜ್ ಅಕ್ಟೋಬರ್ 1ರಂದು ಇದನ್ನು ಪೋಸ್ಟ್ ಮಾಡಿಕೊಂಡಿದೆ. ಈ ಪೋಸ್ಟ್ ನಲ್ಲಿ ಇರುವ ಯೋಧನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಪೋಸ್ಟ್ ಗೆ ಇದುವರೆಗೂ 24 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, 6 ಸಾವಿರಕ್ಕೂ ಹೆಚ್ಚು ಶೇರ್ ಆಗಿದೆ. ಮತ್ತೊಂದು ವಿಷಯ ಏನೆಂದರೆ ಈ ಪೋಸ್ಟ್ ಜೊತೆ ಬೇರೆ ಸೈನಿಕರ ಫೋಟೋ ಕೂಡ ವೈರಲ್ ಆಗುತ್ತಿದೆ.