ನವದೆಹಲಿ: ಹಳೆ ದೆಹಲಿ ರೈಲ್ವೆ ನಿಲ್ದಾಣದ ಹಳಿಗಳ ಮೇಲೆ ತರಬೇತಿ ಮುಗಿಸಿಕೊಂಡು ಬರುತ್ತಿದ್ದ ಸೇನಾಧಿಕಾರಿಯ ಮೃತದೇಹ ಪತ್ತೆಯಾಗಿದೆ.
ಅಧಿಕಾರಿಯನ್ನು ಕ್ಯಾಪ್ಟನ್ ದಿವಾಕರ್ ಪುರಿ ಎಂದು ಗುರುತಿಸಲಾಗಿದೆ. ಇವರು ಆರ್ಮಿ ಮೆಡಿಕಲ್ ಕಾರ್ಪ್ಸ್ ಆಗಿದ್ದು, ದೆಹಲಿಯ ನಿವಾಸಿಯಾಗಿದ್ದರು. ಇವರ ಮೃತದೇಹ ಹಳೆ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಬೆಳಗ್ಗೆ ಪತ್ತೆಯಾಗಿದೆ. ಈ ಸಂದರ್ಭದಲ್ಲಿ ಶತಾಬ್ದಿ ಎಕ್ಸ್ ಪ್ರೆಸ್ ರೈಲು ಹಳಿಗಳ ಮೇಲೆ ಹಾದುಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಯಾಪ್ಟನ್ ದಿವಾಕರ್ ಪುರಿ ಅವರು ಲಕ್ನೋದಲ್ಲಿ ನಡೆದ ತರಬೇತಿಗೆ ಹಾಜರಾಗಿದ್ದು, ತರಬೇತಿ ಮುಗಿಸಿಕೊಂಡು ಶ್ರಮ್ಜೀವಿ ಎಕ್ಸ್ ಪ್ರೆಸ್‍ನಲ್ಲಿ ದೆಹಲಿಗೆ ಹಿಂದಿರುಗುತ್ತಿದ್ದರು. ಪುರಿ ಅವರು ಬೆಳಿಗ್ಗೆ ಸುಮಾರು 5.45ಕ್ಕೆ ರೈಲು ಹತ್ತಿದ್ದರು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈಲ್ವೆ ಅಧಿಕಾರಿಗಳು ಗಮನಿಸಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಅಧಿಕಾರಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಸದ್ಯಕ್ಕೆ ಪೊಲಿಸರು ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಪೊಲೀಸರು ಇದು ಆತ್ಮಹತ್ಯೆ ಎಂದು ಶಂಕಿಸಿದ್ದಾರೆ. ಆದರೆ ಅಧಿಕಾರಿಯ ಸಾವಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ.