LatestMain PostNationalUncategorized

ತಾಯಿಯ ಶವವನ್ನು ಹೊತ್ತು ಹಿಮದ ಮೇಲೆಯೇ 30 ಕಿ.ಮೀ ನಡೆದ ಭಾರತೀಯ ಯೋಧ!

ನವದೆಹಲಿ: ಭಾರತೀಯ ಸೇನಾ ಯೋಧರೊಬ್ಬರು ದಟ್ಟವಾದ ಹಿಮದ ರಾಶಿಯನ್ನು ಲೆಕ್ಕಿಸದೆ 10 ಗಂಟೆಯಲ್ಲಿ ಸುಮಾರು 30 ಕಿ. ಮೀವರೆಗೂ ತಾಯಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತು ಸ್ವಗ್ರಾಮಕ್ಕೆ ತಂದಂತಹ ಮನಕಲಕುವ ಘಟನೆ ನಡೆದಿದೆ.

ಏನಿದು ಘಟನೆ?: ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕರ್ನಾ ತಹಸಿಲ್ ಪ್ರಾಂತ್ಯದ ಮೊಹಮದ್ ಅಬ್ಬಾಸ್ ಎಂಬ ಯೋಧ ಪಂಜಾಬಿನ ಪಠಣ್‍ಕೋಟ್‍ನಲ್ಲಿ ಸೇವಾ ನಿರತರಾಗಿದ್ದರು. ಜಮ್ಮು ಕಾಶ್ಮೀರದಲ್ಲಿ ಚಳಿ ಹೆಚ್ಚಿರುವ ಕಾರಣ ಕೆಲ ದಿನಗಳ ಹಿಂದೆಯಷ್ಟೇ ಅವರ ತಾಯಿಯನ್ನು ಪಠಾಣಕೋಟ್‍ಗೆ ಕರೆಸಿದ್ದರು. ಆದ್ರೆ ವಾರದ ಹಿಂದೆ ಅಬ್ಬಾಸ್ ಅವರ ತಾಯಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಮರುದಿನ ಸೇನೆಯು ತಾಯಿಯ ಮೃತದೇಹವನ್ನು ಶ್ರೀನಗರಕ್ಕೆ ರವಾನಿಸಿದೆ. ಬಳಿಕ ಅಲ್ಲಿಂದ ಗಡಿಯಲ್ಲಿರುವ ಯೋಧನ ಸ್ವಗ್ರಾಮ ಕರ್ನಾ ತಲುಪಲು ದಟ್ಟವಾದ ಹಿಮದಿಂದಾಗಿ ಸಂಚಾರಕ್ಕೆ ಅಡಚಣೆಯಾಗಿದೆ. ಹೀಗಾಗಿ ಯೋಧ ಮತ್ತೆ ಸ್ಥಳೀಯ ಆಡಳಿತದ ಸಹಾಯವನ್ನು ಬಯಸಿದ್ದರು. ಆದ್ರೆ ಪರಿಸ್ಥಿತಿ ಕ್ಲಿಷ್ಟವಾಗಿದ್ದರಿಂದ ಸೇನೆಗೆ ಸಹಾಯ ಮಾಡಲು ಸಾಧ್ಯವಾಗಿಲ್ಲ. ಕುಪ್ವಾರಾದವರೆಗೆ ಹೇಗಾದ್ರೂ ಮಾಡಿ ಅಬ್ಬಾಸ್ ತಾಯಿಯ ದೇಹವನ್ನು ತಂದಿದ್ದರು. ಆದ್ರೆ ಅಲ್ಲಿಂದ ಅವರ ಸ್ವಗ್ರಾಮಕ್ಕೆ 30 ಕಿ.ಮಿ. ದೂರವಿದೆ. ಈ ಗ್ರಾಮವು ಎತ್ತರದಲ್ಲಿರುವುದರಿಂದ ಅಲ್ಲಿಗೆ ವಾಹನ ಸಂಚರಿಸುತ್ತಿಲ್ಲ. ಹೀಗಾಗಿ ಈ ಕೆಟ್ಟ ಪರಿಸ್ಥಿಯಲ್ಲೂ ತನ್ನ ಹಠ ಬಿಡೆದೆ ಕೊರೆಯುವ ಚಳಿಯಲ್ಲಿಯೂ ತಾಯಿ ದೇಹವನ್ನು ಹೆಗಲ ಮೇಲೆ ಹೊತ್ತು 10 ಗಂಟೆಯಲ್ಲಿ ಸುಮಾರು 30 ಕಿ.ಮಿ. ದೂರ ಸಾಗಿದ್ದಾರೆ.

ಈ ಸಂದರ್ಭದಲ್ಲಿ ಕೆಲ ಸಂಬಂಧಿಕರು ಹಾಗೂ ಸ್ಥಳೀಯರು ಅಬ್ಬಾಸ್ ಸಹಾಯಕ್ಕೆ ಧಾವಿಸಿದ್ದಾರೆ. `ಸೇನೆಯವರು ಹೆಲಿಕಾಪ್ಟರ್ ಮೂಲಕ ಮೃತದೇಹವನ್ನು ತಲುಪಿಸಬಹುದಿತ್ತು. ಸೇನಾಧಿಕಾರಿಗಳು ಮಾನವೀಯತೆ ಮರೆತಿದ್ದಾರೆ’ ಅಂತಾ ಅಬ್ಬಾಸ್ ಸಂಬಂಧಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ರೆ ಇವರ ಈ ಆರೋಪವನ್ನು ಸೇನೆ ತಳ್ಳಿಹಾಕಿದೆ.

ಒಟ್ಟಿನಲ್ಲಿ ಕಠಿಣ ಪರಿಸ್ಥಿತಿಯಲ್ಲಿಯೂ ತನ್ನ ತಾಯಿಯ ಅಂತ್ಯಸಂಸ್ಕಾರ ವನ್ನು ಗುರುವಾರ ಸಂಜೆ ಸ್ವಗ್ರಾಮದಲ್ಲೇ ಅಬ್ಬಾಸ್ ನೆರವೇರಿಸಿದ್ದಾರೆ.

Related Articles

Leave a Reply

Your email address will not be published. Required fields are marked *