– 13 ಕೋಟಿ ಬೆಲೆ ಬಾಳುವ ಚಿನ್ನದೊಂದಿಗೆ ಎಸ್ಕೇಪ್
ಲೂದಿಯಾನ: ಹಾಡಹಗಲೇ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದು ದರೋಡೆ ಮಾಡಿರುವ ಭಯಾನಕ ಘಟನೆಯೊಂದು ಪಂಜಾಬಿನ ಲೂದಿಯಾನದಲ್ಲಿ ಇಂದು ನಡೆದಿದೆ.
ಲೂದಿಯಾನದಲ್ಲಿರುವ ಐಐಎಫ್‍ಎಲ್ ಗೋಲ್ಡ್ ಲೋನ್ ಬ್ಯಾಂಕ್‍ನಲ್ಲಿ ಈ ದರೋಡೆ ನಡೆದಿದೆ. ಖದೀಮರು ಸುಮಾರು 30 ಕೆ.ಜಿ ಚಿನ್ನದೊಂದಿಗೆ ಪರಾರಿಯಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
5 ಮಂದಿ ಖದೀಮರು ಇಂದು ಬೆಳಗ್ಗೆ 11.45 ಗಂಟೆ ಸುಮಾರಿಗೆ ಮಾರಕಾಸ್ತ್ರಗಳೊಂದಿಗೆ ಕಂಪನಿಯೊಳಗೆ ನುಗ್ಗಿದ್ದಾರೆ. ಬ್ಯಾಂಕ್‍ನಲ್ಲಿದ್ದ ಗ್ರಾಹಕರು ಮತ್ತು ಸಿಬ್ಬಂದಿಯನ್ನು ಬಂಧಿಯಾಗಿಸಿ 13 ಕೋಟಿ ಬೆಲೆಬಾಳುವ ಸುಮಾರು 30 ಕೆ.ಜಿ ಚಿನ್ನದೊಂದಿಗೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತ ದರೋಡೆ ವಿಚಾರ ತಿಳಿಯುತ್ತಿದ್ದಂತೆಯೇ ಲೂದಿಯಾನ ಪೊಲೀಸ್ ಆಯುಕ್ತ ರಾಕೇಶ್ ಅಗರ್ವಾಲ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸದ್ಯ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಮೊದಲು ನಾಲ್ವರು ಶಾಖೆಯ ಸುತ್ತುವರಿದಿದ್ದಾರೆ. ಉಳಿದ ಇನ್ನೊಬ್ಬ ಹೊರಗಡೆ ಕಾರಿನಲ್ಲಿ ಕಾಯುತ್ತಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಇಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ನೇರವಾಗಿ ಕಂಪನಿಯೊಳಗೆ ನುಗಿ ಸಿಬ್ಬಂದಿ ಬಳಿ ಚಿನ್ನ ಇಟ್ಟಿರುವ ಲಾಕರ್ ಕೀ ಕೊಡುವಂತೆ ಕೇಳಿದ್ದಾರೆ. ಉಳಿದ ಇಬ್ಬರು ಸಿಬ್ಬಂದಿಗೆ ಗನ್ ತೋರಿಸಿ ಬೆದರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಘಟನೆ ನಡೆದಾಗ ಗ್ರಾಹಕರು ಇರಲಿಲ್ಲ. ದರೋಡೆಕೋರರು ಸರಿ ಸುಮಾರು ಅರ್ಧ ಗಂಟೆಗಳ ಕಾಲ ತಮ್ಮ ಕೆಲಸ ಮುಗಿಸಿ, ಹೊರಗಡೆ ನಿಂತಿದ್ದ ಕಾರಿನೊಂದಿಗೆ ಪರರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಆರೋಪಿಗಳನ್ನು ಸೆರೆಹಿಡಿಯಲು ಬಲೆ ಬೀಸಿದ್ದಾರೆ.