ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಹೇಗೆ ಸಾಧ್ಯ – ಇಂದಿನ ಕಲಾಪದಲ್ಲಿ ಬಿವಿ ಆಚಾರ್ಯ ವಾದ ಹೀಗಿತ್ತು

Public TV
4 Min Read
B.V.Acharya Sruthi Hariharan Arjun Sarja

ಬೆಂಗಳೂರು: ನಟ ಅರ್ಜುನ್ ಸರ್ಜಾಗೆ ಹೈಕೋರ್ಟ್‍ನಿಂದ ಕೊಂಚ ರಿಲೀಫ್ ಸಿಕ್ಕಿದೆ. ಶೃತಿ ಹರಿಹರನ್ ದಾಖಲಿಸಿರುವ ಎಫ್‍ಐಆರ್ ರದ್ದು ಕೋರಿ ಅರ್ಜುನ್ ಸರ್ಜಾ ಹೈಕೋರ್ಟ್ ಗೆ ದಾಖಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಿತು.

ಅರ್ಜುನ್ ಸರ್ಜಾ ಪರ ಹಿರಿಯ ವಕೀಲ ಬಿವಿ ಆಚಾರ್ಯ ಸುದೀರ್ಘ ವಾದ ಮಂಡನೆ ಮಾಡಿದರು. ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಹೇಗೆ ಸಾಧ್ಯ? ಶೃತಿಹರಿಹರನ್ ಫೇಸ್‍ಬುಕ್ ಪೋಸ್ಟಿಗು ದೂರಿಗು ವ್ಯತ್ಯಾಸವಿದೆ. ಒಂದಕ್ಕೊಂದು ಸಂಬಂಧ ಇಲ್ಲದ ಆರೋಪವಿದೆ. ನಟನೆ ಮಾಡುವಾಗ ಕೈ ಕಾಲುಗಳು ಟಚ್ ಅಗುವುದು ಸಹಜ, ಒಬ್ಬೊಬ್ಬರು ಟಚ್ ಮಾಡದೇ ಚಿತ್ರದಲ್ಲಿ ನಟಿಸಲು ಸಾಧ್ಯವಿಲ್ಲ. ಸಹಜ ನಟನೆಗೆ ಅಲ್ಲಿ ಬೇಡಿಕೆ ಇರುತ್ತದೆ. ನಿರ್ದೆಶಕನ ಸೂಚನೆ ಮೇರೆಗೆ ನಟನೆ ಮಾಡಲಾಗಿದೆ. ಇದು ಮೂರು ವರ್ಷಗಳ ಹಿಂದೆ ನಡೆದ ಚಿತ್ರೀಕರಣ ಎಂದು ವಾದ ಮಂಡನೆ ಮಾಡಿದರು.

Sruthi hariharan

ವಿಚಾರಣೆ ನಡೆಸಿದ ನ್ಯಾಯಾಲಯ ನವೆಂಬರ್ 14 ಕ್ಕೆ ಮುಂದೂಡಿ ಅಲ್ಲಿಯವರೆಗೆ ಅರ್ಜುನ್ ಸರ್ಜಾ ಅವರನ್ನ ಬಂಧಿಸದಂತೆ ಪೊಲೀಸರಿಗೆ ಸೂಚನೆ ನೀಡಿತು.

ಬಿವಿ ಆಚಾರ್ಯ ವಾದ ಹೀಗಿತ್ತು:
ಅಕ್ಟೋಬರ್ 20 ರಿಂದ ಎಲ್ಲಾ ವಿವಾದ ಆರಂಭವಾಗಿದ್ದು, ಫೇಸ್ಬುಕ್ ನಲ್ಲಿ ಸ್ಟೇಟಸ್ ಹಾಕಿ, ದೂರು ನೀಡಿ ಇಲ್ಲಿಯವರೆಗೆ ತಂದು ನಿಲ್ಲಿಸಿದ್ದಾರೆ. ಸರ್ಜಾ ಅವರಿಗೆ ಮದುವೆ ವಯಸ್ಸಿಗೆ ಬಂದಿರೋ ಹೆಣ್ಣು ಮಕ್ಕಳಿದ್ದಾರೆ. ಅವರಿಂದ ಇಂಹ ಕೃತ್ಯ ನಿರೀಕ್ಷೆ ಮಾಡಲು ಸಹ ಸಾಧ್ಯವಿಲ್ಲ. ಅರ್ಜುನ್ ಸರ್ಜಾ ಒಬ್ಬ ಖ್ಯಾತ ನಟ. ದಕ್ಷಿಣ ಭಾರತದ 5 ಭಾಷೆಗಳಲ್ಲಿ ನಟನೆ ಮಾಡಿ, ಹೆಸರು ಮಾಡಿದ್ದಾರೆ. ಇವರಿಗೆ ಚಿತ್ರರಂಗಲ್ಲಿಯೂ ಒಳ್ಳೆಯ ಹೆಸರಿದೆ. ಮೀಟೂ ಅಭಿಯಾನ ಖ್ಯಾತೆ ತೆಗೆಯುವ ಅಭಿಯಾನ ಆಗಿದೆ. ಇದರಿಂದಾಗಿ ಅರ್ಜುನ್ ಸರ್ಜಾಗೆ ಅವಮಾನ ಆಗಿದೆ.

SRUTHI SARJA

ಮೀಟೂ ಆರೋಪದಿಂದಾಗಿ ಅವರಿಗೆ ಮಾನಸಿಕ ಅವಮಾನ, ಕಿರುಕುಳ ಉಂಟಾಗಿದೆ. 37 ವರ್ಷ ಚಿತ್ರರಂಗದ ಬದುಕನ್ನು 29 ವರ್ಷದ ಶೃತಿ ಹರಿಹರನ್ ಹಾಳು ಮಾಡಿದ್ದಾರೆ. ನಾನು ಇಡೀ ಸಿನಿಮಾವನ್ನು ನೋಡಿದ್ದೇನೆ. ಸಿನಿಮಾದಲ್ಲಿ ಯಾವುದೇ ತಪ್ಪು ನಡೆದಿಲ್ಲ. ಸುಮ್ಮನೆ ಆರೋಪ ಮಾಡಿರುವುದು ತಪ್ಪು. ಇದೇ ಮೊದಲ ಬಾರಿಗೆ ಚಿತ್ರರಂಗದ ರಿಹರ್ಸಲ್ ನಲ್ಲಿ ನಡೆದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.

ಶೃತಿ ಹರಿಹರನ್ ರವರು ಅರ್ಜುನ್ ಸರ್ಜಾ ಹಿಂದೆ ಟಚ್ ಮಾಡಿದ್ದಾರೆಂದು ಆರೋಪ ಮಾಡಿದ್ದಾರಲ್ಲ, ಟಚ್ ಮಾಡುವಾಗ ಅವರು ಏನು ಮಾಡುತ್ತಿದ್ದರು. ನಿರ್ದೇಶಕರು ಈ ದೃಶ್ಯಗಳ ಬಗ್ಗೆ ಮೊದಲೇ ಅವರಿಗೆ ಹೇಳಿರುತ್ತಾರೆ. ನಿರ್ದೇಶಕರಿಗೆ ದೃಶ್ಯ ಸರಿಯಾಗಿ ಬರುವವರೆಗೂ, ರಿಹರ್ಸಲ್ ಮಾಡಿಸುತ್ತಾರೆ. ಶೃತಿ ಸಿನಿಮಾದಲ್ಲಿ ಅರ್ಜುನ್ ಪತ್ನಿಯ ನಟನೆ ಮಾಡಿದ್ದಾರೆ. ನಿರ್ದೇಶಕರ ಸೂಚನೆಯಂತೆ ಅರ್ಜುನ್ ನಟಿಸಿದ್ದಾರೆ. ಶೃತಿ ಅವರು ಉದ್ದೇಶಪೂರ್ವಕವಾಗಿ ದೂರು ನೀಡಿದ್ದಾರೆ.

Sruthi Arjun 2

ಅವರು ಹೇಳುವ ಘಟನೆ 50 ರಿಂದ 60 ಜನರ ಮುಂದೆ ನಡೆದಿದೆ. ಇದರ ಬಗ್ಗೆ ಅಂದೇ ಅವರು ಹೇಳಬಹುದಿತ್ತು. ಅಲ್ಲದೇ ಈ ಘಟನೆ ಬಗ್ಗೆ ಯಾರೂ ಸಹ ಅಂದು ಅರ್ಜುನ್ ಸರ್ಜಾ ಶೃತಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆಂದು ಒಪ್ಪಿಕೊಳ್ಳುವುದಿಲ್ಲ. ನಟನೆ ಮಾಡುವಾಗ ಕೈ, ಕಾಲುಗಳು ಟಚ್ ಆಗುವುದು ಸಹಜ. ಗಂಡ-ಹೆಂಡತಿಯ ಪಾತ್ರದಲ್ಲಿ ನಟಿಸಿದವರು, ಒಬ್ಬೊಬ್ಬರು ಟಚ್ ಮಾಡದೇ ಚಿತ್ರದಲ್ಲಿ ನಟಿಸಲು ಸಾಧ್ಯವಿಲ್ಲ. ತಬ್ಬಿಕೊಳ್ಳುವ, ಉರುಳಾಡುವ ದೃಶ್ಯಾವಳಿಯಲ್ಲಿ ಕೈಗಳು ದೇಹ ಟಚ್ ಆಗೋದು ಸಹಜ. ಅಲ್ಲದೇ ಸಿನಿಮಾದಲ್ಲಿ ಸಹಜ ನಟನೆಗೆ ಬೇಡಿಕೆ ಬಹಳ ಇರುತ್ತದೆ. ನಿರ್ದೇಶಕರ ಸೂಚನೆ ಮೇರೆಗೆ ನಟನೆ ಮಾಡಲಾಗಿದೆ.

ಇದು ಮೂರು ವರ್ಷಗಳ ಹಿಂದೆ ನಡೆದ ಚಿತ್ರೀಕರಣ. ಈಗ ಇದರ ಬಗ್ಗೆ ಚರ್ಚಿಸಿ, ದೂರು ನೀಡಿದ್ದಾರೆ. ಹೆಣ್ಣಿನ ಮೇಲಿನ ದೌರ್ಜನ್ಯವನ್ನು ನಾನು ಸಹ ಖಂಡಿಸುತ್ತೇನೆ. ಆದರೆ ಕೆಲವರು ಕಾನೂನುಗಳನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ನಿಜವಾಗಿಯೂ ದೌರ್ಜನ್ಯಕ್ಕೆ ಒಳಗಾಗಿದ್ದರೆ, ಶಿಕ್ಷೆ ಆಗಲೇಬೇಕು. ಆದರೆ ಶೃತಿ ಹರಿಹರನ್ ಕೊಟ್ಟ ದೂರಿನಲ್ಲಿ ಉಲ್ಲೇಖಿಸಿರುವಂತೆ ಎಲ್ಲವೂ ಸಾರ್ವಜನಿಕ ಸ್ಥಳದಲ್ಲಿ ನಡೆದಿರುವಂತಹದ್ದು. ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಹೇಗೆ ಸಾಧ್ಯ? ಶೃತಿಯವರ ಫೇಸ್ಬುಕ್ ಪೋಸ್ಟ್ ಹಾಗೂ ದೂರಿಗೂ ವ್ಯತ್ಯಾಸವಿದೆ. ಒಂದಕ್ಕೊಂದು ಸಂಬಂಧವಿಲ್ಲದ ಆರೋಪ ಮಾಡಿದ್ದಾರೆ.

arjun sruthi

ಚಿತ್ರದಲ್ಲಿ ಗಂಡ-ಹೆಂಡತಿ ಪಾತ್ರವಾಗಿರುವುದರಿಂದ ತಬ್ಬಿಕೊಳ್ಳುವುದು, ಮುದ್ದಾಡುವುದು ಸಾಮಾನ್ಯ. ಮೀಟೂ ಚಳುವಳಿಯಲ್ಲಿ ತಾನು ನಾಯಕಿಯಾಗಬೇಕು ಎನ್ನುವ ಉದ್ದೇಶದಿಂದ ಖ್ಯಾತ ನಟನ ಮೇಲೆ ಹೊರಿಸಿ, ಸಂತ್ರಸ್ತೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ದೂರಿನಲ್ಲಿ ಐಪಿಸಿ ಸೆಕ್ಷನ್ 354, 354ಎ ಹಾಗೂ 506 ಹಾಕಿದ್ದಾರೆ. ಬೇಕೆಂದೇ ಕಂಪ್ಲೇಂಟ್ ಕಾಪಿಯಲ್ಲಿ ಉಲ್ಲೇಖಸಿದ್ದಾರೆ. ಸೋಶಿಯಲ್ ಮೀಡಿಯಾ ಮತ್ತು ಮಾಧ್ಯಮಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ.

2015 ರಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಶೃತಿ ದೂರಿನಲ್ಲಿ ಆರೋಪ ಮಾಡಿದ್ದಾರೆ. ಆದರೆ ಚಿತ್ರೀಕರಣ ಹೊರತು ಪಡಿಸಿ ದೂರುದಾರರು ಭೇಟಿ ಮಾಡಿಲ್ಲ. ಶೃತಿ ಅರ್ಜುನ್ ರ ಸಂಪರ್ಕವನ್ನು ಮಾಡಿಯೇ ಇಲ್ಲ. ಇಲ್ಲಿಯೇ ಅರ್ಥವಾಗುತ್ತೆ, ಇದೊಂದು ಸುಳ್ಳು ದೂರು ಎನ್ನುವುದು. ಈ ಚಿತ್ರದಲ್ಲಿ ಶೃತಿ ಹರಿಹರನ್ ನಾಯಕನಿಗೆ ಕಿಸ್ ಕೊಡುವ ಸಾಕಷ್ಟು ದೃಶ್ಯಗಳಿವೆ. ಅಷ್ಟೊಂದು ಮುಜುಗರ ಇರುವವರು, ಯಾಕೆ ಕಿಸ್ ಕೊಡುವ ಸೀನ್‍ಗಳಲ್ಲಿ ಅಭಿನಯಿಸಬೇಕಿತ್ತು? ಚಿತ್ರದಲ್ಲಿ ಎಲ್ಲಾ ದೃಶ್ಯಗಳು ನಟನೆಯ ಒಂದು ಭಾಗವಷ್ಟೇ. ಅದನ್ನು ಲೈಂಗಿಕ ಕಿರುಕುಳ ಎಂದು ಹೇಗೆ ಅರ್ಥೈಸುತ್ತೀರಿ?

Sruthi Hariharan

ಅರ್ಜುನ್ ಸರ್ಜಾ ಪ್ರತ್ಯೇಕವಾಗಿ ಎಂದೂ ಸಹ ಶೃತಿಯವರನ್ನು ಭೇಟಿ ಮಾಡಿಲ್ಲ. ಸಿನಿಮಾ ರಿಹರ್ಸಲ್ ವೇಳೆ ಹಿಂದೆಯಿಂದ ಬಂದು ಬೆನ್ನು ಸವರಿದ್ದಾರೆ ಎಂದು ಹೇಳುತ್ತಿದ್ದಾರೆ. ರಿಹರ್ಸಲ್ ಎಂದು ಅವರೇ ಹೇಳಿಕೊಂಡಿದ್ದಾರಲ್ಲ, ಅದು ದೌರ್ಜನ್ಯವೇ? ನಟನೆ ಅಂದ ಮೇಲೆ ಸ್ವಾಭಾವಿಕವಾಗಿ ಇರಬೇಕು. ಆದರೆ ಇದನ್ನೇ ದಾರಿ ತಪ್ಪಿಸೋ ದೃಷ್ಟಿಯಿಂದ ಪ್ರಕರಣವನ್ನಾಗಿ ದಾಖಲು ಮಾಡುತ್ತಾರೆ. ಸುಳ್ಳು ದೂರು ನೀಡಿರುವುದರಿಂದ ತನಿಖೆಗೆ ತಡೆ ನೀಡಬೇಕು. ದೂರು ನೀಡುವುದರ ಮೂಲಕ ಜನಪ್ರಿಯತೆ ಪಡೆಯಲು ನಟಿ ಶೃತಿ ಹರಿಹರನ್ ಮುಂದಾಗಿದ್ದಾರೆ. ಇದರಿಂದಾಗಿ ಅರ್ಜುನ್ ಸರ್ಜಾರವರಿಗೆ ತೊಂದರೆಯಾಗಿದೆ. ಸಂವಿಧಾನದ ಪರಿಚ್ಛೇದ 21ರ ಪ್ರಕಾರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ. ಹೀಗಾಗಿ ತನಿಖೆಗೆ ತಡೆ ನೀಡಬೇಕು.

Sruthi Arjun ff

ಪ್ರಾಸಿಕ್ಯೂಷನ್ ಪರ ಎಎಜಿ ಪೊನ್ನಣ್ಣ ವಾದ ಮಂಡನೆ ಮಾಡಿ, ಯಾವುದೇ ತಪ್ಪು ಮಾಡಿಲ್ಲವೆಂದರೆ ಏಕೆ ಹೆದರಬೇಕು? ಆರೋಪಿ ತನಿಖೆಯನ್ನು ಎದುರಿಸಲಿ. ಪೊಲೀಸರು ಸಹ ಈಗಾಗಲೇ ಸಾಕ್ಷಿಗಳನ್ನು ಕಲೆಹಾಕುತ್ತಿದ್ದಾರೆ ಎಂದು ವಾದಿಸಿದರು.

ಅರ್ಜುನ್ ಸರ್ಜಾ ಪರ ವಕೀಲ್ ಶ್ಯಾಂ ಸುಂದರ್ ಪ್ರತಿಕ್ರಿಯಿಸಿ, ಮಾನ್ಯ ಹೈಕೋರ್ಟ್ ಅರ್ಜುನ್‍ರವರನ್ನು ಬಂಧಿಸುವಂತಿಲ್ಲವೆಂದು ಸೂಚನೆ ನೀಡಿದ್ದು, ಪೊಲೀಸರಿಗೆ ತನಿಖೆ ಮುಂದುವರಿಸುವಂತೆ ಮಧ್ಯಂತರ ಆದೇಶ ನೀಡಿದೆ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://youtu.be/tndTQg0hd0M

Share This Article
Leave a Comment

Leave a Reply

Your email address will not be published. Required fields are marked *