ಲಕ್ನೋ: ಕಾರು ಪಾರ್ಕ್ (Car Parking) ಮಾಡಿದ ವಿಚಾರಕ್ಕೆ ಜಗಳ ನಡೆದು, ಅದರಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬನ ತಲೆಗೆ ಇಟ್ಟಿಗೆಯಿಂದ (Brick) ಹೊಡೆದು ಹತ್ಯೆ ನಡೆಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ (Ghaziabad) ನಡೆದಿದೆ.
ಘಟನೆಯಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ವರುಣ್ ಎಂದು ಗುರುತಿಸಲಾಗಿದೆ. ಆತ ದೆಹಲಿಯ ನಿವೃತ್ತ ಪೊಲೀಸ್ ಅಧಿಕಾರಿಯ ಮಗ ಎಂಬುದೂ ತಿಳಿದುಬಂದಿದೆ. ಘಟನೆಯ ಭಯಾನಕ ವೀಡಿಯೋವನ್ನು ಸ್ಥಳೀಯರು ರೆಕಾರ್ಡ್ ಮಾಡಿದ್ದು, ಅದರಲ್ಲಿ ವರುಣ್‌ಗೆ 4-5 ಜನರ ಗುಂಪು ಅಮಾನುಷವಾಗಿ ಥಳಿಸುವುದು ಕಂಡುಬಂದಿದೆ.
ವರದಿಗಳ ಪ್ರಕಾರ ಕಳೆದ ರಾತ್ರಿ ವರುಣ್ ಗಾಜಿಯಾಬಾದ್‌ನ ಉಪಾಹಾರ ಗೃಹದ ಹೊರಗಡೆ ತನ್ನ ಕಾರನ್ನು ನಿಲ್ಲಿಸಿದ್ದ. ಆತ ಪಕ್ಕದ ಕಾರಿನ ಬಾಗಿಲನ್ನು ತೆರೆಯಲು ಸಾಧ್ಯವಾಗದಷ್ಟು ಹತ್ತಿರದಲ್ಲಿ ನಿಲ್ಲಿಸಿದ್ದಾನೆ ಎಂದು ಪಕ್ಕದ ಕಾರಿನ ಮಾಲೀಕ ವರುಣ್‌ನೊಂದಿಗೆ ವಾಗ್ವಾದ ಪ್ರಾರಂಭಿಸಿದ್ದಾನೆ.
ಇಬ್ಬರ ನಡುವಿನ ಜಗಳ ಸ್ವಲ್ಪ ಸಮಯದಲ್ಲೇ ಹೊಡೆದಾಟಕ್ಕೆ ತಿರುಗಿದೆ. ಈ ವೇಳೆ ವರುಣ್ ಮೇಲೆ ಆರೋಪಿಗಳ ಗುಂಪು ಅಮಾನುಷವಾಗಿ ಹಲ್ಲೆ ನಡೆಸಿದೆ. ಬಳಿಕ ಆತನ ತಲೆಗೆ ಇಟ್ಟಿಗೆಯಿಂದ ಹೊಡೆದಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ತೀವ್ರವಾಗಿ ಗಾಯಗೊಂಡಿದ್ದ ವರುಣ್‌ನನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆತ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ರೈಲು ಡಿಕ್ಕಿ ಹೊಡೆದು ಇಬ್ಬರು ಆರ್‌ಪಿಎಫ್ ಪೊಲೀಸರ ದುರ್ಮರಣ
ಸಾರ್ವಜನಿಕ ಸ್ಥಳದಲ್ಲಿ ನಡೆದಿರುವ ಈ ಭೀಕರ ಕೊಲೆ ಪ್ರಕರಣ ಗಾಜಿಯಾಬಾದ್‌ನ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿ ಹಾಗೂ ಬೀದಿಗಳಲ್ಲಿ ನಡೆಯುವ ಹಿಂಸಾಚಾರವನ್ನು ಪರಿಶೀಲಿಸುವಲ್ಲಿ ಪೊಲೀಸರ ವೈಫಲ್ಯದ ಬಗ್ಗೆ ಕಳವಳ ಹುಟ್ಟು ಹಾಕಿದೆ. ಮೃತನ ಸಂಬಂಧಿಕರು ಹಾಗೂ ಸ್ಥಳೀಯರು ಪೊಲೀಸರ ಅಸಡ್ಡೆತನಕ್ಕೆ ಪ್ರತಿಭಟನೆ ನಡೆಸಿದ್ದಾರೆ.
ಇದೀಗ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, 5 ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ತುಂಡರಿಸಿದ ಅರ್ಧ ಕೈ ಪತ್ತೆ -ಸ್ಮಶಾನಗಳತ್ತ ಪೊಲೀಸರ ದೌಡು