ಬೆಂಗಳೂರು: ನಾಯಂಡಹಳ್ಳಿ (Nayandahalli) ಬಳಿಯ ಅಂಬೇಡ್ಕರ್ ಕಾಲೋನಿಯಲ್ಲಿ ಮನೆ ಬಳಿ ಆಟೋ ನಿಲ್ಲಿಸೋ ವಿಚಾರಕ್ಕೆ ಯುವಕರ ನಡುವೆ ನಡೆದ ಗಲಾಟೆ ಸ್ನೇಹಿತನ ಕೊಲೆಯಲ್ಲಿ ಅಂತ್ಯವಾಗಿದೆ.
ಕೊಲೆಯಾದ (Murder) ಯುವಕನನ್ನು ಗುಣ (28) ಎಂದು ಗುರುತಿಸಲಾಗಿದೆ. ಈತನ ಸ್ನೇಹಿತನಾಗಿದ್ದ ವಿನೋದ್ ಕೊಲೆ ಆರೋಪಿಯಾಗಿದ್ದಾನೆ. ಘಟನೆಯಲ್ಲಿ ಮತ್ತೊಬ್ಬ ಯುವಕ ವೇಲು ಎಂಬಾತನಿಗೆ ಗಾಯಗಳಾಗಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂವರು ಅಂಬೇಡ್ಕರ್ ಕಾಲೋನಿಯಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ʻಕೈʼ ಮುಖಂಡನ ಮಕ್ಕಳಿಂದ ಪೊಲೀಸರ ಮೇಲೆ ಹಲ್ಲೆ ಕೇಸ್ - ಬಂಧನಕ್ಕೆ ಹೋರಾಡಿದ್ದ ಲೇಡಿ ಸಿಪಿಐ ವಿಡಿಯೋ ವೈರಲ್
2 ದಿನದ ಹಿಂದೆ ಮನೆ ಬಳಿ ಆಟೊ ನಿಲ್ಲಿಸುವ ವಿಚಾರಕ್ಕೆ ಮೂವರ ನಡುವೆ ಗಲಾಟೆಯಾಗಿತ್ತು. ಇದೇ ಕಾರಣಕ್ಕೆ ಬೈಕ್‍ನಲ್ಲಿ ಬರುತ್ತಿದ್ದ ವೇಲು ಮತ್ತು ಗುಣನನ್ನು ವಿನೋದ್ ಅಡ್ಡಗಟ್ಟಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರಿಗೂ ಚಾಕು ಇರಿದಿದ್ದ. ಗುಣ ಸಾವನ್ನಪ್ಪಿದ್ದು, ಗಾಯಗೊಂಡ ವೇಲುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೂವರು ಕೊಲೆ ಪ್ರಕರಣ ಒಂದರಲ್ಲಿ ಆರೋಪಿಗಳಾಗಿದ್ದರು.
ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ವಿನೋದ್‌ಗಾಗಿ ಪೊಲೀಸರು (Police) ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ – ಓರ್ವ ಸಾವು, ಇಬ್ಬರು ಗಂಭೀರ

