ಕಾರವಾರ: ಕಳೆದ ನಾಲ್ಕೈದು ವರ್ಷಗಳ ಅಡಿಕೆ ಇತಿಹಾಸದಲ್ಲಿ ಕೆಂಪಡಿಕೆ ಕ್ವಿಂಟಾಲ್ ಒಂದಕ್ಕೆ ಗರಿಷ್ಠ 40 ಸಾವಿರ ರೂಪಾಯಿ ಗಡಿ ದಾಟಿದ್ದು, ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಕೃಷಿಕರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಮೂರ್ನಾಲ್ಕು ತಿಂಗಳಿಂದ ನಿಧಾನವಾಗಿ ಏರುತ್ತಿದ್ದ ಕೆಂಪಡಿಕೆ ದರವು ಕಳೆದ ಗುರುವಾರದಂದು ಶಿರಸಿಯ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಒಂದಕ್ಕೆ 40,169 ರೂಪಾಯಿ ಗರಿಷ್ಠ ದರ ದಾಖಲಿಸಿ, ಕಳೆದ ನಾಲ್ಕೈದು ವರ್ಷಗಳಲ್ಲೇ ಉತ್ತಮ ದರವಾಗಿ ಗುರುತಿಸಿಕೊಂಡಿದೆ. 1 ವಾರದ ಹಿಂದೆ 38ರಿಂದ 39 ಸಾವಿರದ ಆಸುಪಾಸಿದ್ದ ಅಡಿಕೆ ದರ ಈಗ 40 ಸಾವಿರ ರೂಪಾಯಿ ಗಡಿದಾಟಿದ್ದು, ಹಂಗಾಮಿಗೆ ಸರಿಯಾಗಿ ಉತ್ತಮ ದರದ ನಿರೀಕ್ಷೆಯಲ್ಲಿದ್ದ ಅಡಕೆ ಬೆಳೆಗಾರರು ಇದರಿಂದ ಖುಷಿಯಾಗಿದ್ದಾರೆ.
Advertisement
Advertisement
2014-15ರಲ್ಲಿ ಕೆಂಪಡಿಕೆ ಕ್ವಿಂಟಾಲ್ ಒಂದಕ್ಕೆ 81 ಸಾವಿರ ರೂಪಾಯಿ ಗಡಿ ದಾಟಿತ್ತು. 2018 ಹಾಗೂ 2019ರಲ್ಲಿ ಸರಾಸರಿ 32 ಸಾವಿರ ರೂಪಾಯಿ ಕ್ವಿಂಟಾಲ್ ಒಂದಕ್ಕೆ ಗರಿಷ್ಠ ದರ ಲಭಿಸಿತ್ತು. ಇದೀಗ ಮತ್ತೆ ದರ ಏರಿಕೆಯಾಗಿದ್ದು, ಬೆಳೆಗಾರರು ಇನ್ನಷ್ಟು ದರ ಏರುವ ನಿರೀಕ್ಷೆಯಲ್ಲಿದ್ದಾರೆ. ಕೆಲ ವರ್ಷಗಳ ಹಿಂದೆ ಕ್ವಿಂಟಾಲ್‍ಗೆ 80 ಸಾವಿರ ರೂಪಾಯಿ ಬೆಲೆ ಕಂಡಿದ್ದ ಬೆಳೆಗಾರರು, ಈಗ ಕನಿಷ್ಠ 50 ಸಾವಿರ ರೂಪಾಯಿ ದಾಟಬಹುದು ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.
Advertisement
Advertisement
ಬೆಳೆ ಕಡಿಮೆ:
ಕಳೆದ ವರ್ಷದ ಅಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಶೇ. 50ರಷ್ಟು ಅಡಿಕೆ ಬೆಳೆ ಕಡಿಮೆಯಾಗಿತ್ತು. ಅದರ ಜೊತೆಗೆ ಕೊಳೆ ರೋಗವೂ ಬಾಧಿಸಿದ ಪರಿಣಾಮ ಕೆಲವು ಕಡೆಗಳಲ್ಲಿ ಶೇ. 80ರಷ್ಟು ಬೆಳೆ ನಾಶವಾಗಿದ್ದು, ತಾಲೂಕಿನಲ್ಲಿ ಈ ಬಾರಿ ಅಡಿಕೆ ಬೆಳೆ ಕುಂಠಿತವಾಗಿದೆ. ಇದರ ಪರಿಣಾಮ ಅಡಿಕೆ ದರ ಇನ್ನೂ ಏರುವ ನಿರೀಕ್ಷೆಯನ್ನು ವ್ಯಾಪಾರಸ್ಥರು ವ್ಯಕ್ತಪಡಿಸಿದ್ದು, ಕೃಷಿಕರಿಗೆ ಹೆಚ್ಚಿನ ಅನುಕೂಲ ಆಗುವ ಸಾಧ್ಯತೆಗಳಿದೆ ಎನ್ನಲಾಗಿದೆ.
ಯಲ್ಲಾಪುರದಲ್ಲಿ ಉತ್ತಮ ಬೆಲೆ:
ಯಲ್ಲಾಪುರ ಮಾರುಕಟ್ಟೆಯಲ್ಲಿ ಕೆಂಪಡಿಕೆಗೆ ಉತ್ತಮ ದರ ಲಭ್ಯವಾಗಿದೆ. ಶಿರಸಿ ಮಾರುಕಟ್ಟೆಗಿಂತ ಹೆಚ್ಚಿನ ದರದಲ್ಲಿ ವ್ಯಾಪಾರವಿರುವ ಯಲ್ಲಾಪುರದಲ್ಲಿ 43 ಸಾವಿರ ರೂಪಾಯಿಗಳಿಗೂ ಅಧಿಕ ದರವನ್ನು ರೈತರು ಕಂಡಿದ್ದಾರೆ. ಯಲ್ಲಾಪುರದಲ್ಲಿಯೂ ಅತಿಯಾದ ಮಳೆಯಿಂದ ಬೇಡ್ತಿ ನದಿ ನೀರು ಅಕ್ಕಪಕ್ಕದಲ್ಲಿರುವ ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿತ್ತು. ಈಗ ಉತ್ತಮ ದರ ಬಂದಿರುವುದರಿಂದ ಕೃಷಿಕರ ಮೊಗದಲ್ಲಿ ನಗು ಮೂಡಿದೆ.