ಬಳ್ಳಾರಿ: 2018ರ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಸಚಿವ ಜನಾರ್ದನರೆಡ್ಡಿ ತಿಳಿಸಿದ್ದಾರೆ.
ನಾನು ಒಬ್ಬ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ಸದ್ಯ ನಾನು ಪಕ್ಷ ಸಂಘಟನೆ ಮಾಡುತಿದ್ದೇನೆ. ರಾಜ್ಯದಲ್ಲಿರುವ ರೆಡ್ಡಿ ಸಮಾಜವನ್ನು ಸಹ ಸಂಘಟಿಸಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ರನ್ನು ಮತ್ತೆ ಸಿಎಂ ಮಾಡುವುದೇ ನಮ್ಮ ಗುರಿಯೆಂದು ಅವರು ಹೇಳಿದರು.
ಇಂದು ಬಳ್ಳಾರಿಯಲ್ಲಿ ತಮ್ಮ 25ನೇ ವಿವಾಹ ವಾರ್ಷಿಕ ಮಹೋತ್ಸವದ ಅಂಗವಾಗಿ ಕನಕದುರ್ಗಮ್ಮ ದೇವಾಲಯದಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಸುಪ್ರಿಂ ಕೋರ್ಟ್ ಅನುಮತಿಯ ಮೇರೆಗೆ ತಮ್ಮ ವಿವಾಹದ ರಜತ ಮಹೋತ್ಸವವನ್ನು ಆಚರಿಸಿಕೊಳ್ಳಲು ಜನಾರ್ದನ ರೆಡ್ಡಿ ಬಳ್ಳಾರಿಗೆ ಆಗಮಿಸಿದರು.
ಇತ್ತೀಚಿಗೆ ಕೆಲವು ದಿನಗಳ ಹಿಂದೆ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಜನಾರ್ದನ ರೆಡ್ಡಿ ಹೇಳಿಕೊಂಡಿದ್ದರು. ರೆಡ್ಡಿ ಸಮಾಜದ ಮತಗಳು ಹೆಚ್ಚಾಗಿರುವ ದೊಡ್ಡಬಳ್ಳಾಪುರ ಇಲ್ಲವೇ ಚಿಕ್ಕಬಳ್ಳಾಪುರದಿಂದ ಸ್ಪರ್ದೆ ಮಾಡ್ತಾರೆ ಅನ್ನೋ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು. ಅಲ್ಲದೇ ಗದಗ ಜಿಲ್ಲೆಯಿಂದಲೂ ಸ್ಪರ್ದೆ ಮಾಡ್ತಾರೆ ಅಂತಾ ಹೇಳಲಾಗುತ್ತಿತ್ತು. ಆದರೆ ಈಗ ಈ ಅಂತೆ ಕಂತೆ ಸುದ್ದಿಗಳಿಗೆ ಜನಾರ್ದನ ರೆಡ್ಡಿ ಪೂರ್ಣ ವಿರಾಮ ವಿರಾಮ ಹಾಕಿದ್ದಾರೆ.