ಹಾಸನ: ಕುರಾನ್ (Quran) ಪಠಣ ಮಾಡಬೇಕು ಎಂದು ಎಲ್ಲಿಯೂ ಇಲ್ಲ. ಇದನ್ನ ನಾನು ವರದಿಯಲ್ಲಿ ಕೊಡುತ್ತೇನೆ. ಕೈಪಿಡಿಯಲ್ಲಿ ಏನು ಹೇಳಿದೆ ಯಾರು ಏನೇನು ಮಾಡುತ್ತಿದ್ದಾರೆ, ಏನು ತಪ್ಪು ಆಗಿದೆ ಎನ್ನುವ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಇನ್ನು 2-3 ದಿನದಲ್ಲಿ ನಮ್ಮ ವರದಿಯನ್ನು ನೀಡುತ್ತೇವೆ ಎಂದು ಪುರಾತತ್ವ ಇಲಾಖೆಯ (Archaeology Department) ಹಿರಿಯ ಆಗಮ ಪಂಡಿತ್ ಜಿ.ಎ.ವಿಜಯ್ ಕುಮಾರ್ ಹೇಳಿದರು.
ಜಿಲ್ಲೆಯ ಬೇಲೂರಿನ (Beluru) ಐತಿಹಾಸಿಕ ಚನ್ನಕೇಶವಸ್ವಾಮಿ ರಥೋತ್ಸವದ ವೇಳೆ ಕುರಾನ್ ಪಠಣ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ರಾಜ್ಯ ಪುರಾತತ್ವ ಇಲಾಖೆಯ ಹಿರಿಯ ಆಗಮ ಪಂಡಿತರ ತಂಡ ದೇವಾಲಯಕ್ಕೆ (Temple) ಭೇಟಿ ನೀಡಿ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಥೋತ್ಸವದ ದಿನ ಯಾರ‍್ಯಾರು, ಯಾವ ಕರ್ತವ್ಯ ನಿರ್ವಹಿಸಬೇಕು ಏನೇನು ವ್ಯತ್ಯಾಸ ಆಗಿದೆ. ಜನರಲ್ಲಿ ಏನು ಗೊಂದಲ ಆಗಿದೆ? ಅವುಗಳ ಪರಿಶೀಲನೆಗೆ ಮೇಲಧಿಕಾರಿಗಳು ಸೂಚನೆ ನೀಡಿದ್ದಾರೆ. ಹಾಗಾಗಿ ಗುರುವಾರ ಭೇಟಿ ನೀಡಲಾಗಿದೆ. ದೇವಾಲಯದಲ್ಲಿ ಯಾರು, ಯಾವ ಸಂದರ್ಭದಲ್ಲಿ ಯಾವ ಕರ್ತವ್ಯ ಹೇಗೆ ಮಾಡಬೇಕು ಎಂದು ಕೈಪಿಡಿಯಲ್ಲಿದೆ. ಇದು ಮೈಸೂರು ಮಹಾರಾಜರ ಸಂಸ್ಥಾನದಿಂದ ಬಿಡುಗಡೆ ಆಗಿದೆ. ಅದರಂತೆ ಎಲ್ಲಾ ವಿಧಿವಿಧಾನ, ಪೂಜಾ, ಕೈಂಕರ್ಯ, ಕರ್ತವ್ಯ ನಡೆಯುತ್ತಿದೆ ಎಂದರು.
ಸ್ವಲ್ಪ ವ್ಯತ್ಯಾಸ ಉಂಟಾಗಿ ಜನರಲ್ಲಿ ಗೊಂದಲ ಆಗಿದೆ. ಹಾಗಾಗಿ ನಾವು ಬಂದು ಆ ಗ್ರಂಥ ಪರಿಶೀಲನೆ ಮಾಡಿದ್ದೇವೆ. ವ್ಯವಸ್ಥಾಪನಾ ಸಮಿತಿ, ಆಡಳಿತ ಅಧಿಕಾರಿ, ಧಾರ್ಮಿಕ ಪರಿಷತ್ ಸದಸ್ಯರ ಸಮ್ಮುಖದಲ್ಲಿ ಪರಿಶೀಲನೆ ಮಾಡಲಾಗಿದೆ. ಈ ಬಗ್ಗೆ ಇನ್ನೂ ಅನೇಕ ಗ್ರಂಥಗಳನ್ನು ಅಧ್ಯಯನ ಮಾಡಿ ಎಲ್ಲವನ್ನೂ ತಿಳಿದು ನಾನು ಹಿರಿಯ ಅಧಿಕಾರಿಗಳಿಗೆ ವರದಿ ಕೊಡಬೇಕಾಗುತ್ತದೆ. ಕೈಪಿಡಿಯಲ್ಲಿ ಏನಿದೆ ಅದನ್ನ ಮಾಡಬೇಕು, ಆಗಿರುವ ಲೋಪದೋಷ ಸರಿಪಡಿಸಿಕೊಳ್ಳಬೇಕು. ಕೈಪಿಡಿ ಪ್ರಕಾರ ಎಲ್ಲರೂ ಹಿಂದೂ ಧಾರ್ಮಿಕ ದತ್ತಿ ಕಾಯಿದೆ ಸೆಕ್ಷನ್ 58ರ ಪ್ರಕಾರ ದೇವಾಲಯದ ಸಂಪ್ರದಾಯ ನಡೆಸಿಕೊಂಡು ಹೋಗಬೇಕು ಎಂದಿದೆ. ಅದರಂತೆ ಸರ್ಕಾರ ಮುಂದಿನ ಕ್ರಮ ವಹಿಸುತ್ತದೆ ಎಂದು ಹೇಳಿದರು.
ರಥದ ಮುಂದೆ ಕುರಾನ್ ಪಠಣ ಮಾಡಬೇಕು ಎಂದು ಎಲ್ಲಿಯು ಹೇಳಿಲ್ಲ. ನಾನು ಓದಿದ ಪ್ರಕಾರ ರಥದ ಮುಂದೆಯಾಗಲಿ, ದೇವಾಲಯದ ಮುಂದೆಯಾಗಲಿ ಮಾಡಬೇಕು ಎಂದು ಹೇಳಿಲ್ಲ. ಅವರಿಗೆ ಗೌರವ ಸಲ್ಲಿಸಬೇಕು, ಅವರು ನಮಸ್ಕರಿಸಬೇಕು ಎಂದು ಹೇಳಲಾಗಿದೆ. ಈ ಬಗ್ಗೆ ಕೈಪಿಡಿ ಪ್ರತಿಯನ್ನು ಪಡೆಯಲಾಗಿದೆ. ಮುಂದೆ ಏನು ಮಾಡಬೇಕು ಎಂದು ಆಯುಕ್ತರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ರಾಮನವಮಿ ಆಚರಣೆ ವೇಳೆ ದೇವಾಲಯದ ನೆಲ ಕುಸಿತ – 13 ಮಂದಿ ಸಾವು
ಪ್ರತಿವರ್ಷ ರಥೋತ್ಸವದ ವೇಳೆ ಕುರಾನ್ ಪಠಣ ನಡೆಸಿ ನಂತರ ತೇರನ್ನು ಎಳೆಯುತ್ತಿದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವರ್ಷದಿಂದ ಕುರಾನ್ ಪಠಣ ಸಂಪ್ರದಾಯ ನಿಲ್ಲಿಸಬೇಕೆಂದು ಹಿಂದೂಪರ ಸಂಘಟನೆಗಳು ಹೋರಾಟ ಮಾಡಿದ್ದವು. ಹಿಂದೂಪರ ಸಂಘಟನೆಗಳ ಹೋರಾಟ ಹಿನ್ನೆಲೆಯಲ್ಲಿ ವಾಸ್ತವಾಂಶ ಅರಿಯಲು ಆಗಮಿಕರ ತಂಡ ಭೇಟಿ ನೀಡಿತ್ತು. ಏಪ್ರಿಲ್ 4 ಮತ್ತು 5ರಂದು ಚನ್ನಕೇಶವ ಸ್ವಾಮಿ ರಥೋತ್ಸವ ನಡೆಯಲಿದೆ. ಇದನ್ನೂ ಓದಿ: ಧಮ್ ಇದ್ರೆ ಡಿಕೆಶಿ ಮೀಸಲಾತಿ ನಿರ್ಧಾರವನ್ನು ವಾಪಸ್ ಪಡೆಯಲಿ – ಯತ್ನಾಳ್ ಸವಾಲ್