– 13-14ನೇ ಶತಮಾನದ ನಾಣ್ಯಗಳು, 94 ಪುರಾತನ ಶಿಲ್ಪಗಳು ಪತ್ತೆ
ಭೋಪಾಲ್: ಮಧ್ಯಪ್ರದೇಶದ ಧಾರ್‌ನಲ್ಲಿರುವ ವಿವಾದಿತ ಭೋಜ್‌ಶಾಲಾ-ಕಮಲ್‌ಮೌಲಾ ಮಸೀದಿ ಸಂಕೀರ್ಣದಲ್ಲಿ (Bhojshala complex) ವೈಜ್ಞಾನಿಕ ಸಮೀಕ್ಷೆ ನಡೆಸಿದ್ದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಮಧ್ಯಪ್ರದೇಶ ಹೈಕೋರ್ಟ್‌ಗೆ 2,000 ಪುಟಗಳ ವರದಿ ಸಲ್ಲಿಸಿದೆ. ಪುರಾತತ್ವ ಇಲಾಖೆಯ ವೈಜ್ಞಾನಿಕ ಸಮೀಕ್ಷೆಯಲ್ಲಿ, ಈ ಸ್ಥಳದಲ್ಲಿ ಹಿಂದೂ ದೇವಾಲಯ ಇತ್ತೆಂಬ ಬಗ್ಗೆ ಅಪಾರ ಪ್ರಮಾಣದ ಕುರುಹುಗಳು ಪತ್ತೆಯಾದ ಬಗ್ಗೆ ಉಲ್ಲೇಖಿಸಿದೆ.
31 ಪುರಾತನ ನಾಣ್ಯಗಳು ಪತ್ತೆ:
ಮಾರ್ಚ್ 22ರಂದು ಎಎಸ್‌ಐ ವೈಜ್ಞಾನಿಕ ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯ ವೇಳೆ ಬೆಳ್ಳಿ, ತಾಮ್ರ, ಅಲ್ಯೂಮಿನಿಯಂ, ಉಕ್ಕಿನಿಂದ ತಯಾರಿಸಿದ ಒಟ್ಟು 31 ನಾಣ್ಯಗಳು (Coins) ಪತ್ತೆಯಾಗಿವೆ. ಇವು ಪುರಾತನ ಕಾಲದ ನಾಣ್ಯಗಳಾಗಿವೆ ಎಂದು ವರದಿ ಹೇಳಿದೆ. ಈ ನಾಣ್ಯಗಳು ಇಂಡೋ-ಸಸ್ಸಾನಿಯನ್ (10ನೇ-11ನೇ ಶತಮಾನ), ದೆಹಲಿ ಸುಲ್ತಾನೇಟ್ (13ನೇ-14ನೇ ಶತಮಾನ), ಮಾಲ್ವಾ ಸುಲ್ತಾನೇಟ್ (15ನೇ-16ನೇ ಶತಮಾನ), ಮೊಘಲ್ (16ನೇ-18ನೇ ಶತಮಾನ), ಧಾರ್ ರಾಜ್ಯ (19ನೇ ಶತಮಾನ), ಮತ್ತು ಬ್ರಿಟಿಷ್ (19-20 ನೇ ಶತಮಾನ) ಕಾಲದ ನಾಣ್ಯಗಳು ಎಂಬುದನ್ನು ವರದಿ ತಿಳಿಸಿದೆ.
ಅಲ್ಲದೇ ಸಮೀಕ್ಷೆಯು ಒಟ್ಟು 94 ಶಿಲ್ಪಗಳು, ಶಿಲ್ಪಗಳ ತುಣುಕುಗಳು ಮತ್ತು ವಾಸ್ತುಶಿಲ್ಪದ ಅಂಶಗಳನ್ನು ಬಹಿರಂಗಪಡಿಸಿದೆ. ಈ ಶಿಲ್ಪಗಳು ಬಸಾಲ್ಟ್, ಅಮೃತಶಿಲೆ, ಸ್ಕಿಸ್ಟ್, ಮೃದು ಕಲ್ಲು, ಮರಳುಗಲ್ಲು ಮತ್ತು ಸುಣ್ಣದ ಕಲ್ಲುಗಳಿಂದ ಮಾಡಲ್ಪಟ್ಟಿದೆ. ಅವರು ಗಣೇಶ, ಬ್ರಹ್ಮ, ನರಸಿಂಹ, ಭೈರವ, ಇತರ ದೇವರುಗಳು ಮತ್ತು ದೇವತೆಗಳು, ಮನುಷ್ಯರು ಮತ್ತು ಪ್ರಾಣಿಗಳಂತಹ ದೇವತೆಗಳ ಆಕೃತಿಗಳು ಕಂಡುಬಂದಿವೆ.
ಇನ್ನೂ ಪ್ರಾಣಿಗಳ ಆಕೃತಿಗಳಲ್ಲಿ ಸಿಂಹ, ಆನೆ, ಕುದುರೆಗಳು, ನಾಯಿ, ಕೋತಿ, ಹಾವು, ಆಮೆ, ಹಂಸ ಮತ್ತು ಪಕ್ಷಿಗಳನ್ನೊಳಗೊಂಡ ಆಕೃತಿಗಳು ಕಂಡುಬಂದಿವೆ. ಅಲ್ಲದೇ ಭಗ್ನಗೊಂಡ ಸ್ಥಿತಿಯಲ್ಲಿ ವಿಷ್ಣುವಿನ ವಿಗ್ರಹ, ದೇವಾಲಯದ ಕುರುಹುಗಳು, ತ್ರಿಶೂಲದ ಗೋಡೆ ಬರಹ, ಸಂಸ್ಕೃತ, ಪ್ರಾಕೃತ ಭಾಷೆಯ ಶಾಸನಗಳು, ಶಾಸನದಲ್ಲಿ ಓಂ ನಮಃ ಶಿವಾಯ ಬರಹ, ಶಾಸನದಲ್ಲಿ ಓಂ ಸರಸ್ವತಿಯೇ ನಮಃ ಬರಹ, ಪರಂಪರಾ ಅವಧಿಯ ನಿರ್ಮಾಣ ಶೈಲಿಯ ದೇಗುಲ ಕುರುಹು ಪತ್ತೆಯಾಗಿವೆ. ಅಲ್ಲದೇ ಭೋಜಶಾಲೆಯು ಶತಮಾನಗಳ ಹಿಂದೆ ಮಹತ್ವದ ಶೈಕ್ಷಣಿಕ ಕೇಂದ್ರವಾಗಿತ್ತು ಎಂದು ಹೇಳಲಾಗಿದೆ.
ಹಿಂದೂ-ಮುಸ್ಲಿಮರಿಂದ ಪೂಜೆ:
ಇನ್ನೂ ಭೋಜಶಾಲಾ ಸಂಕೀರ್ಣವು 11ನೇ ಶತಮಾನದಲ್ಲಿ ಸರಸ್ವತಿ ದೇವಿಯ ದೇವಾಲಯವಾಗಿತ್ತು, ಮುಸ್ಲಿಮರು ಇದನ್ನು ಕಮಲ್ ಮೌಲಾ ಮಸೀದಿ ಎಂದು ಕರೆದರು. ಕಳೆದ 21 ವರ್ಷಗಳಿಂದ ಭೋಜಶಾಲೆಯಲ್ಲಿ ಪ್ರತಿ ಮಂಗಳವಾರ ಹಿಂದೂಗಳು ಪೂಜೆ ಸಲ್ಲಿಸಿದರೆ, ಶುಕ್ರವಾರದಂದು ಮುಸ್ಲಿಮರು ನಮಾಜ್ ಆಚರಿಸುತ್ತಾರೆ ಎಂದು ವಿದ್ವಾಂಸರು ತಿಳಿಸಿದ್ದಾರೆ.
ಈ ಸಂಬಂಧ ಹಿಂದೂ ಫ್ರಂಟ್ ಫಾರ್ ಜಸ್ಟಿಸ್ ಸಂಘಟನೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ವೈಜ್ಞಾನಿಕ ಸಮೀಕ್ಷೆಗೆ ಮನವಿ ಮಾಡಿತ್ತು. ಅದರಂತೆ ಹೈಕೋರ್ಟ್ ಎಎಸ್‌ಐಗೆ ಮಾರ್ಚ್ 11ರಂದು ಸಮೀಕ್ಷೆ ನಡೆಸುವಂತೆ ಆದೇಶಿಸಿತ್ತು. ಸಮೀಕ್ಷೆ ಪೂರ್ಣಗೊಳಿಸಲು ಎಎಸ್‌ಐಗೆ 6 ವಾರಗಳ ಕಾಲಾವಕಾಶ ನೀಡಲಾಗಿತ್ತು. ಎಎಸ್‌ಐ ಮಾರ್ಚ್ 22 ರಂದು ವಿವಾದಿತ ಸಂಕೀರ್ಣದ ಸಮೀಕ್ಷೆಯನ್ನು ಪ್ರಾರಂಭಿಸಿ, ಇತ್ತೀಚೆಗಷ್ಟೇ ಸಮೀಕ್ಷೆ ಮುಕ್ತಾಯಗೊಂಡಿತ್ತು.
ಇದಾದ ಬಳಿಕ ಸಮೀಕ್ಷೆಯ ಪೂರ್ಣ ವರದಿಯನ್ನು ಜುಲೈ 15ರ ಒಳಗೆ ಹಾಜರುಪಡಿಸಲು ಎಎಸ್‌ಐಗೆ ಹೈಕೋರ್ಟ್ ಜುಲೈ 4 ರಂದು ಆದೇಶಿಸಿತ್ತು. ಅದರಂತೆ ಪುರಾತ್ವ ಇಲಾಖೆ 2000 ಪುಟಗಳ ವರದಿ ಸಲ್ಲಿಸಿದದು, ಜುಲೈ 22 ರಂದು ಹೈಕೋರ್ಟ್ ಪ್ರಕರಣದ ವಿಚಾರಣೆ ನಡೆಸಲಿದೆ.