ಆಕಾಶ್, ಅರಸು (Arasu), ಮೆರವಣಿಗೆಯಂತಹ ಹಿಟ್ ಸಿನಿಮಾಗಳ ನಿರ್ದೇಶಕ ಮಹೇಶ್ ಬಾಬು (Mahesh Babu) ಹೊಸ ಸಿನಿಮಾ ಕೈಗೆತ್ತಿಕೊಂಡಿರುವುದು ಗೊತ್ತಿರುವ ಸಂಗತಿ. ಪ್ರತಿ ಸಿನಿಮಾದಲ್ಲಿಯೂ ಹೊಸ ಪ್ರತಿಭೆಗಳನ್ನು ಪರಿಚಯಿಸುವ ಅವರೀಗ, ಈ ಚಿತ್ರದ ಮೂಲಕ ಕಿರುತೆರೆಯ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾದ ಸ್ಮೈಲ್ ಗುರು ರಕ್ಷಿತ್ (Smile Guru Rakshit) ಅವರನ್ನು ನಾಯಕನಾಗಿ ಕನ್ನಡ ಬೆಳ್ಳಿಪರದೆಗೆ ಕರೆದುಕೊಂಡು ಬರುತ್ತಿದ್ದಾರೆ. ಮಹೇಶ್ ಬಾಬು ಮತ್ತು ರಕ್ಷಿತ್ ಹೊಸ ಸಿನಿಮಾ ಜು.14ರಂದು ಸೆಟ್ಟೇರಿದೆ. ಬೆಂಗಳೂರಿನ ಅಭಯ ಹಸ್ತ ಬಲಮುರಿ ದೇಗುಲದಲ್ಲಿ ಮುಹೂರ್ತ ನೆರವೇರಿದೆ. ಇದನ್ನೂ ಓದಿ:ಮಗನ ಮದುವೆ ಬೆನ್ನಲ್ಲೇ ಕ್ಷಮೆಯಾಚಿಸಿದ ನೀತಾ ಅಂಬಾನಿ
ಮಹೇಶ್ ಬಾಬು ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಶೀರ್ಷಿಕೆ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಸದ್ಯಕ್ಕೆ ಇದನ್ನು ‘ಪ್ರೊಡಕ್ಷನ್ ನಂ 2’ ಎಂದು ಕರೆಯಲಾಗುತ್ತಿದೆ. ನೆನಪಿರಲಿ ಪ್ರೇಮ್ (Nenapirali Prem) ಈ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ್ದರು. ಸಿನಿಮಾದ ಮೊದಲ ದೃಶ್ಯಕ್ಕೆ ಅವರು ಆರಂಭ ಫಲಕ ತೋರಿದರು. ಬಳಿಕ ಚಿತ್ರತಂಡಕ್ಕೆ ಅವರು ಶುಭ ಹಾರೈಸಿದರು. ಎ ಕ್ಲಾಸ್ ಸಿನಿ ಫಿಲ್ಮ್ಸ್ ಪ್ರೊಡಕ್ಷನ್ ಸಂಸ್ಥಾಪಕ ಅನುರಾಗ್ ಆರ್ ಅವರ ತಾಯಿ ಕ್ಯಾಮೆರಾ ಚಾಲನೆ ಮಾಡುವ ಮೂಲಕ ಶುಭ ಕೋರಿದರು. ಈ ಸಿನಿಮಾದಲ್ಲಿ ಸ್ಮೈಲ್ ಗುರು ರಕ್ಷಿತ್‌ಗೆ ಜೋಡಿಯಾಗಿ ‘ವೀರ ಮದಕರಿ’ಯಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಜೆರುಶಾ (Jerusha) ಅವರು ಅಭಿನಯಿಸುತ್ತಿದ್ದಾರೆ. ಮತ್ತೊಬ್ಬ ನಾಯಕಿಯನ್ನು ಚಿತ್ರತಂಡ ಶೀಘ್ರದಲ್ಲಿಯೇ ರಿವೀಲ್ ಮಾಡಲಿದೆ.
ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಸಿನಿಮಾ ಕೊಡಬೇಕೆಂಬ ಉದ್ದೇಶದಿಂದ ಎಂಎಂಎಂ ಪಿಕ್ಚರ್ಸ್ ಮತ್ತು ಎ ಕ್ಲಾಸ್ ಸಿನಿ ಫಿಲ್ಮಂಸ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದೆ. ಈ ನಿರ್ಮಾಣ ಸಂಸ್ಥೆಯಡಿ ಅನುರಾಗ್ ಆರ್ ಹಾಗೂ ಮಿಥುನ್ ಕೆಎಸ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಸತ್ಯ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ ಚಿತ್ರಕ್ಕಿದೆ.
ನಾಯಕ ಸ್ಮೈಲ್ ಗುರು ರಕ್ಷಿತ್ ಕಥೆ ಬರೆದಿದ್ದು, ವಿಜಯ್ ಈಶ್ವರ್ ಸಂಭಾಷಣೆ ಒದಗಿಸಲಿದ್ದಾರೆ. ಶೀಘ್ರದಲ್ಲಿಯೇ ಚಿತ್ರತಂಡ ಅದ್ಧೂರಿಯಾಗಿ ಟೈಟಲ್ ರಿವೀಲ್ ಮಾಡುವ ಯೋಜನೆ ಹಾಕಿಕೊಂಡಿದೆ. ಮೊದಲ ಹಂತದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ಮುಗಿಸಲಿರುವ ಚಿತ್ರತಂಡ ಎರಡನೇ ಹಂತದ ಶೂಟಿಂಗ್‌ಗಾಗಿ ಮಲೆನಾಡಿನತ್ತ ಹೆಜ್ಜೆ ಹಾಕಲಿದೆ.