ಹಾಸನ: ಫೇಸ್‍ಬುಕ್‍ನಲ್ಲಿ ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಯುವತಿ ಸೇರಿದಂತೆ ಐವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಸನದ ಅರಸೀಕೆರೆ ಪೊಲೀಸರು ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದ್ದಾರೆ. ಅರ್ಪಿತಾ, ಪವನ, ಕಿರಣ, ದೊರೆ ಮತ್ತು ಹೇಮೇಶ್ ಬಂಧಿತ ಆರೋಪಿಗಳು. ಆರೋಪಿಗಳು ತುಮಕೂರು, ಬೆಂಗಳೂರು, ಮತ್ತು ಹಾಸನ ಮೂಲದವರು ಎಂದು ತಿಳಿದು ಬಂದಿದೆ.
Advertisement
Advertisement
ಆರೋಪಿಗಳು ಅರ್ಪಿತಾ ಹೆಸರಿನಲ್ಲಿ ಫೇಸ್‍ಬುಕ್ ಫೇಕ್ ಖಾತೆ ನಿರ್ವಹಿಸುತ್ತಿದ್ದರು. ಫೇಸ್‍ಬುಕ್ ಮುಖಾಂತರ ಅಮಾಯಕ ಯುವಕರನ್ನು ಸೆಳೆದು ಹನಿಟ್ರ್ಯಾಪ್ ಮಾಡುವ ಮೂಲಕ ಸುಲಿಗೆ ಮಾಡುತ್ತಿದ್ದರು. ಪೊಲೀಸರು ಬಂಧಿತರಿಂದ ಎರಡು ಕಾರು, ಒಂದು ಬೈಕ್, ನಗದು ಮತ್ತು ಚಿನ್ನಾಭರಣವನ್ನು ವಶ ಪಡಿಸಿಕೊಂಡಿದ್ದಾರೆ.
Advertisement
ಹನಿಟ್ರ್ಯಾಪ್ ಹೇಗೆ ಮಾಡುತ್ತಿದ್ದರು?
ಮೊದಲಿಗೆ ಅರ್ಪಿತಾ ಯುವಕನನ್ನು ಫೇಸ್‍ಬುಕ್ ಮೂಲಕ ಪರಿಚಯ ಮಾಡಿಕೊಳ್ಳುತ್ತಿದ್ದಳು. ಬಳಿಕ ಎರಡೇ ದಿನದಲ್ಲಿ ನೇರವಾಗಿ ಮೀಟ್ ಮಾಡಬೇಕೆಂದು ಹಾಸನ ಹೊರವಲಯದಲ್ಲಿ ಭೇಟಿಯಾಗಿದ್ದಳು. ಬಳಿಕ ಯುವಕನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದಳು. ಅಷ್ಟರಲ್ಲಿ ಅರ್ಪಿತಾ ಸ್ನೇಹಿತರು ಅವರನ್ನೇ ಹಿಂಬಾಲಿಸಿಕೊಂಡು ಬಂದಿದ್ದು, ಯುವಕನನ್ನು ಬೆದರಿಸಿ ಹಣ, ಚಿನ್ನ ಸುಲಿಗೆ ಮಾಡಿ ಪರಾರಿಯಾಗಿದ್ದರು.
Advertisement
ಇದೇ ರೀತಿ ಅರ್ಪಿತಾ ಬೆಂಗಳೂರು ಮತ್ತು ತುಮಕೂರಿನಲ್ಲಿ ಇಬ್ಬರನ್ನು ಫೇಸ್‍ಬುಕ್ ಮೂಲಕ ಪರಿಚಯ ಮಾಡಿಕೊಂಡು ಅವರ ಬಳಿಯೂ ಹಣ ಸುಲಿಗೆ ಮಾಡಿದ್ದಳು. ಆದರೆ ಕೆಲವು ದಿನಗಳ ಹಿಂದೆ ಮತ್ತೆ ಮೊದಲು ಪರಿಚಯ ಮಾಡಿಕೊಂಡಿದ್ದ ಯುವಕನನ್ನು ಬೆದರಿಸಿ ಒಂದು ಲಕ್ಷ ಹಣ ಕೇಳಿದ್ದರು. ಯುವಕ ಅವರು ಕೇಳಿದ ಹಣವನ್ನು ತಂದು ಕೊಟ್ಟಿದ್ದನು. ಈ ವೇಳೆ ಆತನನ್ನು ಕಿಡ್ನಾಪ್ ಮಾಡಿದ್ದಾರೆ. ಆಗ ಕಾರಿನಲ್ಲಿ ಯುವಕ ಜಗಳವಾಡಿಕೊಂಡು ಚಾಕು ತೆಗೆದುಕೊಂಡು ಅವರಿಗೆ ಚುಚ್ಚಿದ್ದಾನೆ. ಇದರಿಂದ ಆರೋಪಿಗಳಿಗೆ ಗಾಯವಾಗಿದೆ. ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದಾರೆ.
ಆಸ್ಪತ್ರೆಯಲ್ಲಿ ಗಾಯದ ಬಗ್ಗೆ ವೈದ್ಯರು ವಿಚಾರಿಸಿದಾಗ ಅಪಘಾತವಾಗಿದೆ ಎಂದು ಸುಳ್ಳು ಹೇಳಿದ್ದಾರೆ. ಇದರಿಂದ ವೈದ್ಯರು ಅನುಮಾನಗೊಂಡಿದ್ದು, ಬಳಿಕ ಕಿಡ್ನಾಪ್ ಆಗಿದ್ದ ಯುವಕ ವ್ಯದ್ಯರಿಗೆ ಎಲ್ಲವನ್ನು ವಿವರಿಸಿದ್ದಾನೆ. ನಂತರ ವೈದ್ಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಆಸ್ಪತ್ರೆಗೆ ಬಂದು ಆರೋಪಿಗಳನ್ನು ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv